ಕಾಪು: ಮಲ್ಲಾರು ಪರ್ಕೀಣಕಟ್ಟೆ ಉರ್ದು ಶಾಲೆಯಲ್ಲಿ ಹಿಜಾಬ್ ಹಾಕಿಕೊಂಡು ಬಂದ ಮಕ್ಕಳಿಗೆ ತರಗತಿ ಪ್ರವೇಶ ನಿರಾಕರಣೆ

Update: 2022-02-15 12:25 GMT

ಕಾಪು, ಫೆ.15: ಹೈಕೋರ್ಟ್ ಮಧ್ಯಂತರ ಆದೇಶವನ್ನು ಮುಂದಿಟ್ಟುಕೊಂಡು ಕಾಪು ತಾಲೂಕಿನ ಮಲ್ಲಾರು ಪಕೀರ್ಣಕಟ್ಟೆಯ ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯಲ್ಲಿ ಹಿಜಾಬ್ ಹಾಕಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದರ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯ ಆವರಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾರು ಇಲ್ಲಿ ಒಂದರಿಂದ ಏಳನೆ ತರಗತಿ ವರೆಗೆ ಒಟ್ಟು 51 ಮಕ್ಕಳಿದ್ದರೆ, ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಒಟ್ಟು 31 ಮಕ್ಕಳಿದ್ದಾರೆ. ಅದೇ ರೀತಿ ಇಲ್ಲಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರರಿಂದ 9ನೆ ತರಗತಿವರೆಗೆ ಒಟ್ಟು 144 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಪ್ರೌಢಶಾಲೆಯ 31ರಲ್ಲಿ ಇಬ್ಬರು ಮಾತ್ರ ಹಿಂದು ಮಕ್ಕಳಿದ್ದಾರೆ. ಉಳಿದಂತೆ ಶೇ.99ರಷ್ಟು ಮುಸ್ಲಿಮ್ ಮಕ್ಕಳೇ ಇದ್ದಾರೆ.

ತರಗತಿಗೆ ಪ್ರವೇಶ ನಿರ್ಬಂಧ

ಸೋಮವಾರ ಸಮವಸ್ತ್ರದ ಶಾಲನ್ನು ತಲೆಗೆ ಹಾಕಿಕೊಂಡು ಆಗಮಿಸಿದ ಪ್ರೌಢಶಾಲೆ ಮತ್ತು ಮೌಲಾನಾ ಆಜಾದ್ ಶಾಲೆಯ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರಾಕರಿಸಲಾಗಿತ್ತೆಂದು ಪೋಷಕರು ಆರೋಪಿಸಿದ್ದಾರೆ. ಪ್ರೌಢ ಶಾಲೆಯ 17 ವಿದ್ಯಾರ್ಥಿನಿಯರ ಪೈಕಿ 16 ಮಂದಿ ಮತ್ತು ಮೌಲಾನಾ ಆಜಾದ್ ಶಾಲೆಯ ಸುಮಾರು 20 ಮಕ್ಕಳು ಸಮವಸ್ತ್ರದ ಶಾಲನ್ನು ಹಾಕಿಕೊಂಡು ಬಂದಿದ್ದರು. ಇವರಿಗೆ ತರಗತಿ ಪ್ರವೇಶ ನಿರಾಕರಿಸಿ ಹೊರಗಡೆ ನಿಲ್ಲಿಸಲಾಗಿತ್ತು. ಬಳಿಕ ಎಸೆಸೆಲ್ಸಿ ಮಕ್ಕಳು ಶಾಲನ್ನು ತೆಗೆದು ಪೂರ್ವ ಸಿದ್ಧತಾ ಪರೀಕ್ಷೆಗೆ ಹಾಜರಾದರು. ಆಜಾದ್ ಶಾಲೆಯ ಮಕ್ಕಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು ಎಂದು ತಿಳಿದುಬಂದಿದೆ. ಬಳಿಕ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿ, ನಾಳೆಯಿಂದ ತಲೆಗೆ ಶಾಲು ಹಾಕಿಕೊಂಡು ಬಂದರೆ ತರಗತಿಗೆ ಪ್ರವೇಶ ನೀಡಲ್ಲ ಎಂದು ಪ್ರಾಂಶುಪಾಲರು ಸೂಚನೆ ನೀಡಿದ್ದರು. ಇದಕ್ಕೆ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಪೋಷಕರ ಜಮಾವಣೆ

ಪ್ರೌಢಶಾಲೆ ಮತ್ತು ಆಜಾದ್ ಶಾಲೆಯ ಮಕ್ಕಳು ಮಂಗಳವಾರ ಬೆಳಗ್ಗೆ ಹಿಂದಿನಂತೆ ಸಮವಸ್ತ್ರದ ಶಾಲನ್ನು ತಲೆಗೆ ಹಾಕಿಕೊಂಡು ಶಾಲೆಗೆ ಆಗಮಿಸಿದರು. ಆದರೆ ಮುಖ್ಯೋಪಾಧ್ಯಾಯರು ಹೈಕೋರ್ಟ್ ಮಧ್ಯಂತರ ಆದೇಶವನ್ನು ಮುಂದಿಟ್ಟುಕೊಂಡು ಮಕ್ಕಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡದೆ ಹೊರಗಡೆ ನಿಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಪೋಷಕರು, ಮುಖ್ಯೋಪಾಧ್ಯಾಯಿನಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಹಾಕಿಕೊಂಡು ಬರಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಇದರಿಂದ ಸ್ಥಳಕ್ಕೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಂಕರ ಮಡಿವಾಳ ಮೊದಲಾದವರು ಭೇಟಿ ನೀಡಿದರು.

ಎಸೆಸೆಲ್ಸಿ ಮಕ್ಕಳಿಗೆ ಪರೀಕ್ಷೆಗೆ ಅವಕಾಶ

ವಿವಾದದ ಹಿನ್ನೆಲೆಯಲ್ಲಿ ಶಾಲೆಗೆ ಆಗಮಿಸಿದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಂಕರ ಮಡಿವಾಳ, ಮುಖ್ಯೋಪಾಧ್ಯಾಯಿನಿ ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ಡಿಡಿಪಿಐ, ಸಮವಸ್ತ್ರದ ಶಾಲು ಧರಿಸಿಕೊಂಡು ಶಾಲೆಗೆ ಆಗಮಿಸಿದ ಎಸೆಸೆಲ್ಸಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು. ಬಳಿಕ ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ ಅವರು, ಈ ವಿಚಾರದ ಬಗ್ಗೆ ಮನದಟ್ಟು ಮಾಡಿಸಿ ಗೊಂದಲ ನಿವಾರಿಸಿದರು.

ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶದ ಉಲ್ಲಂಘನೆ - ಶಿಕ್ಷಣ ಇಲಾಖೆಯ ಆಯಕ್ತರಿಗೆ ಪತ್ರ ಬರೆದ ಶಿಕ್ಷಣ ತಜ್ಞ ನಿರಂಜನಾರಾಧ್ಯ 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News