ಆರೂರು ಗ್ರಾಪಂ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಂದಾಯ ಸಚಿವರಿಂದ ಅಹವಾಲು ಸ್ವೀಕಾರ; ಗ್ರಾಮ ವಾಸ್ತವ್ಯ

Update: 2022-02-19 16:52 GMT

ಆರೂರು(ಬ್ರಹ್ಮಾವರ), ಫೆ.19: ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ರಾತ್ರಿ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದರು.

ಈ ಸಂದರ್ಭದಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಗುರಿ ತಲುಪಲು ಕನಸು ಕಾಣಿ. ವಿದ್ಯಾರ್ಥಿಗಳು ಕೇವಲ ಡಾಕ್ಟರ್, ಇಂಜಿನಿಯರ್ ಆಗುವ ಕನಸು ಕಾಣದೇ ಮನಸ್ಸಿನಲ್ಲಿರುವ ಕಲೆಯನ್ನು ಹೊರತಂದಲ್ಲಿ ಕನಸು ನನಸಾಗುವುದು. ಯಾವುದೇ ವಿದ್ಯೆಯಲ್ಲಿ ಪರಿಣತಿ ಹೊಂದಿದಲ್ಲಿ ಅದಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಸರಕಾರಿ ಶಾಲೆಯ ಬಗ್ಗೆ ಕೀಳರಿಮೆಯನ್ನು ಬಿಟ್ಟು, ಉತ್ತಮ ನಾಗರಿಕರಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭ ಎಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಚೈತನ್ಯ ಮತ್ತು ಪಿಯುಸಿಯ ಸವಿತಾ ಶಾಗೋಟಿ ಅವರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ ಸಚಿವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಆರೂರು ಗ್ರಾಪಂ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷ ಗುರುರಾಜ್ ರಾವ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆರೂರು ಮೊರಾರ್ಜಿ ದೇಸಾಯಿ ಶಾಲೆಯ ಪ್ರಭಾರ ಪ್ರಾಂಶುಪಾಲ ಗಣೇಶ್ ಪೂಜಾರಿ, ನಿರ್ಗಮಿತ ಪ್ರಾಂಶುಪಾಲ ಚಂದ್ರಶೇಖರ್ ಬಿ, ತಾಪಂನ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಇದ್ದರು.
ಅಧ್ಯಾಪಕ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಗುದ್ದಲಿ ಪೂಜೆ: ಇದಕ್ಕೆ ಮುನ್ನ ಸಚಿವರು ಆರೂರು ಮುಂಡ್ಕಿನಜೆಡ್ಡು - ಕಿರ್ತಿನಗರದಿಂದ ಹಾಲೆಕಟ್ಟೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ರಸ್ತೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಲ್ಲಿ ಎರಡು ಕೋಟಿ ರೂ. ಮಂಜೂರಾಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News