ಪಾವತಿಯಾಗದ ಮೂರು ತಿಂಗಳ ಸಂಬಳ: ಉಡುಪಿ ತಾಯಿ -ಮಕ್ಕಳ ಆಸ್ಪತ್ರೆಯ ಸಿಬ್ಬಂದಿಯಿಂದ ಮುಷ್ಕರ

Update: 2022-02-21 11:53 GMT

ಉಡುಪಿ, ಫೆ.21: ಕಳೆದ ಮೂರು ತಿಂಗಳಿನಿಂದ ಸಂಬಳ ಪಾವತಿಸದೆ ಬಾಕಿ ಇರಿಸಿರುವುದಾಗಿ ಆರೋಪಿಸಿ ಬಿ.ಆರ್.ಶೆಟ್ಟಿ ಗ್ರೂಪ್ ಮುನ್ನಡೆಸುತ್ತಿರುವ ಉಡುಪಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ, ಎಲ್ಲ ಹೊರ ಹಾಗೂ ಒಳರೋಗ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಿ ಇಂದಿನಿಂದ ಮತ್ತೆ ಅಹೋರಾತ್ರಿ ಮುಷ್ಕರವನ್ನು ಆರಂಭಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಬಾಕಿ ಸಂಬಳ ಪಾವತಿಸುವಂತೆ ಇಲ್ಲಿನ ಸಿಬ್ಬಂದಿಗಳು ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಅಹೋರಾತ್ರಿ ಧರಣಿ ನಡೆಸಿದ್ದರು. ಇದೀಗ ಇವರಿಗೆ ನವೆಂಬರ್‌ನಿಂದ ಮತ್ತೆ ಸಂಬಳ ಪಾವತಿಸದೆ ಬಾಕಿ ಇರಿಸಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಇಲ್ಲಿನ ವೈದ್ಯರು, ನರ್ಸ್, ನಿರ್ವಹಣಾ ವಿಭಾಗದ ಸಿಬ್ಬಂದಿ, ಪ್ರಯೋಗಾಲಯ, ಪ್ಯಾರಾ ಮೆಡಿಕಲ್, ಹೌಸ್ ಕೀಪಿಂಗ್, ಅಂಬ್ಯು ಲೆನ್ಸ್ ಸಿಬ್ಬಂದಿಗಳು ಆಸ್ಪತ್ರೆಯ ಒಳಗೆ ಧರಣಿ ನಡೆಸಿದರು. ಇವರೊಂದಿಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಸ್ವರ್ಣಲತಾ, ಸ್ತ್ರೀರೋಗ ತಜ್ಞೆ ಡಾ.ಉಷಾ ಕೂಡ ಕೈಜೋಡಿಸಿದ್ದಾರೆ.ಈ ಸಂಸ್ಥೆಯಲ್ಲಿ ಆರಂಭದಲ್ಲಿ ಒಟ್ಟು 320 ಸಿಬ್ಬಂದಿಗಳು ಕರ್ತವ್ಯ ನಿರ್ವ ಹಿಸುತ್ತಿದ್ದರು. ಆದರೆ ಬಾಕಿ ಸಂಬಳ ಹಾಗೂ ಇತರ ಕಾರಣಕ್ಕೆ ಹಲವು ಮಂದಿ ಈ ಸಂಸ್ಥೆಯನ್ನು ಬಿಟ್ಟು ಹೋಗಿದ್ದರು. ಆಗಸ್ಟ್ ತಿಂಗಳಲ್ಲಿ ಸಂಬಳ ಪಾವತಿಸು ವಂತೆ ಧರಣಿ ನಡೆಸಿದ್ದ 16 ಮಂದಿಯನ್ನು ಆಡಳಿತ ಮಂಡಳಿ ಕೆಲಸದಿಂದ ವಜಾಗೊಳಿಸಿತ್ತು. ಇದೀಗ ಸಂಸ್ಥೆಯಲ್ಲಿ ಒಟ್ಟು 153 ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸುಳ್ಳು ಭರವಸೆ ವಿರುದ್ಧ ಆಕ್ರೋಶ

‘ಇಲ್ಲಿ ದುಡಿಯುತ್ತಿರುವ 153 ಮಂದಿ ಸಿಬ್ಬಂದಿಗೆ ಕಳೆದ ಮೂರು ತಿಂಗಳಿ ನಿಂದ ಸಂಬಳ ಆಗಿಲ್ಲ. ತುರ್ತು ಘಟಕ ಬಿಟ್ಟರೆ ಹೊರರೋಗ, ಒಳರೋಗ ವಿಭಾಗ ಸೇರಿದಂತೆ ಎಲ್ಲ ಸೇವೆಯನ್ನು ಇಂದು ಬೆಳಗ್ಗೆಯಿಂದ ಸ್ಥಗಿತಗೊಳಿಸಿ ದ್ದೇವೆ. ನಮ್ಮ ನೋವಿಗೆ ನಮ್ಮ ಆಡಳಿತ ಮಂಡಳಿಯವರು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಈ ಸಂಸ್ಥೆಯನ್ನು ಸರಕಾರಕ್ಕೆ ಹಸ್ತಾಂತರ ಮಾಡಿದ್ದೇವೆ, ಅಲ್ಲಿಯೇ ಕೇಳಿ ಎಂದು ಹೇಳುತ್ತಾರೆ ಎಂದು ಆಸ್ಪತ್ರೆಯ ನಿರ್ವಹಣಾ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದರು.‘ಬಾಕಿ ಸಂಬಳದ ಬಗ್ಗೆ ಕೊನೆಯ ವಾರದಲ್ಲಿ ಜಿಲ್ಲಾ ಸರ್ಜನ್ ಹಾಗೂ ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅದಕ್ಕೆ ಶಾಸಕರು, ಎಬಿಆರ್‌ಕೆ ಸ್ಕೀಂನಲ್ಲಿ ಬರುವ ಹಣ 65ಲಕ್ಷ ರೂ.ವನ್ನು ಸಂಬಳಕ್ಕೆ ಬಳಸಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ ನಾವು ಒಂದು ವಾರ ಕಾದು ಕುಳಿತೇವು. ಆದರೆ ಹಣವೂ ಬಂದಿಲ್ಲ ಮತ್ತು ಶಾಸಕರಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ. ಆ ಕಾರಣಕ್ಕಾಗಿ ನಾವು ಧರಣಿ ಕುಳಿತುಕೊಂಡು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ’ ಎಂದರು.

‘ಸಂಬಳ ಸಿಗದೆ ಇಲ್ಲಿ ಕೆಲಸ ಮಾಡುವ 150 ಕುಟುಂಬಗಳು ಬೀದಿಪಾಲಾ ಗುವ ಸ್ಥಿತಿಯಲ್ಲಿದೆ. ಆಡಳಿತ ಮಂಡಳಿ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ. ಜಿಲ್ಲಾ ಸರ್ಜನ್, ಆಡಳಿತ ಮಂಡಳಿ ಬಳಿ ಕೇಳಿ ಎಂದು ಹೇಳಿದರೆ, ಆಡಳಿತ ಮಂಡಳಿ, ಜಿಲ್ಲಾ ಸರ್ಜನ್ ಹತ್ತಿರ ಕೇಳಿ ಎಂದು ಹೇಳುತ್ತಿದ್ದಾರೆ. ನಾವು ಯಾರ ಬಳಿ ಕೇಳ ಬೇಕೆಂಬ ಗೊಂದಲದಲ್ಲಿದ್ದೇವೆ. ಯಾರು ಕೂಡ ನಮಗೆ ಸ್ಪಂದನೆ ಮಾಡುತ್ತಿಲ್ಲ. ಕೆಲಸಕ್ಕೆ ಬರಲು ಬಸ್ಸಿಗೆ ಪಾವತಿಸಲು ಹಣ ಇಲ್ಲವಾಗಿದೆ. ಸಂಬಳ ಸಿಗದೆ ನಮ್ಮ ಬದುಕು ತುಂಬಾ ಕಷ್ಟದಲ್ಲಿದೆ. ಸಂಬಳ ಸಿಗುವವೆರೆಗೆ ನಮ್ಮ ಹೋರಾಟ ಮುಂದು ವರೆಸಲಾಗುವುದು’ ಎಂದು ಸಿಬ್ಬಂದಿ ನೀತಾ ಶೆಟ್ಟಿ ತಿಳಿಸಿದರು.

ಚಿಕಿತ್ಸೆ ಸಿಗದೆ ಪರಾದಾಡಿದ ಗರ್ಭಿಣಿಯರು!

ಆಸ್ಪತ್ರೆಯ ಸಿಬ್ಬಂದಿಗಳು ಎಲ್ಲ ಹೊರರೋಗ ವಿಭಾಗದ ಸೇವೆಗಳನ್ನು ಸ್ಥಗಿತ ಗೊಳಿಸಿ ಧರಣಿ ನಡೆಸುತ್ತಿರುವ ಪರಿಣಾಮ ಚಿಕಿತ್ಸೆಗಾಗಿ ಗರ್ಭಿಣಿಯರು ಹಾಗೂ ಮಕ್ಕಳಿಗೆ ಲಸಿಕೆ ಕೊಡಿಸಲು ತಾಯಂದಿರು ಪರದಾಡುವಂತಾಗಿದೆ.

ಪೆರ್ಡೂರು, ಕುಂದಾಪುರ, ಹಿರಿಯಡ್ಕ ಸೇರಿದಂತೆ ದೂರ ಊರುಗಳಿಂದ ಗರ್ಭಿಣಿಯರು, ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಆದರೆ ಇಲ್ಲಿ ಮುಷ್ಕರದಿಂದಾಗಿ ಚಿಕಿತ್ಸೆ ದೊರೆಯದೆ ನೂರಾರು ಮಂದಿ ತೊಂದರೆ ಅನುಭವಿಸಿ ದರು. ಅಲ್ಲದೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.‘ಇವತ್ತು ಹೆರಿಗೆ ದಿನಾಂಕ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಅದಕ್ಕಾಗಿ ನಾವು ಬಂದಿದ್ದೇವೆ. ಆದರೆ ಇಲ್ಲಿ ಬಂದು ನೋಡುವಾಗ ಮುಷ್ಕರ ನಡೆಯುತ್ತಿದೆ. ನಮ್ಮನ್ನು ಕೇಳುವವರು ಯಾರು ಇಲ್ಲ. ದೂರ ಊರಿನಿಂದ ಮಕ್ಕಳನ್ನೆಲ್ಲ ಕರೆದು ಕೊಂಡು ಬಂದಿದ್ದೇವೆ. ಈ ರೀತಿಯಾದರೆ ನಮ್ಮಂತಹ ಬಡವರು ಎಲ್ಲಿಗೆ ಹೋಗ ಬೇಕು’ ಎಂದು ಹಿರೇಬೆಟ್ಟುವಿನ ರೂಪಾ ಅಳಲು ತೋಡಿಕೊಂಡರು.

ಮೂರು ತಿಂಗಳಿನಿಂದ ಯಾರಿಗೂ ಸಂಬಂಳ ಆಗಿಲ್ಲ. ಟಿಡಿಎಸ್ ಹಾಗೂ ಪಿಎಫ್ ಕೂಡ ಪಾವತಿಸಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಇದೇ ರೀತಿ ಸಂಬಳ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಆಡಳಿತ ಮಂಡಳಿಯಿಂದಲೂ ನಮಗೆ ಯಾವುದೇ ಬೆಂಬಲ ಸಿಗುತ್ತಿಲ್ಲ. ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ, ಉಳಿದಂತೆ ಹೊರರೋಗಿ ವಿಭಾಗದ ಎಲ್ಲ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ. ಒಳರೋಗಿ ವಿಭಾಗದಲ್ಲಿ ಸದ್ಯ ಒಬ್ಬರು ಬಾಣಂತಿ ಮಾತ್ರ ಇದ್ದಾರೆ.

-ಸ್ವರ್ಣಲತಾ, ವೈದ್ಯಕೀಯ ಅಧೀಕ್ಷಕಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News