ಮೀನುಗಾರಿಕಾ ದೋಣಿಗಳಿಗೆ ಬಾಕಿ ಇದ್ದ ಡೀಸೆಲ್ ಬಿಡುಗಡೆಗೆ ಮುಖ್ಯಮಂತ್ರಿ ಆದೇಶ: ಶಾಸಕ ರಘುಪತಿ ಭಟ್

Update: 2022-02-21 14:38 GMT
ಶಾಸಕ ರಘುಪತಿ ಭಟ್

ಉಡುಪಿ, ಫೆ.21:ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರಿಕಾ ದೋಣಿ ಗಳಿಗೆ ಬಾಕಿ ಇದ್ದ 37,500 ಕಿಲೋ ಲೀಟರ್ ಕರ ರಹಿತ ಡೀಸೆಲ್‌ನ್ನು ಬಿಡುಗಡೆ ಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

2021-22ನೇ ಸಾಲಿನ ಆಯವ್ಯಯದಲ್ಲಿ ಮೀನುಗಾರಿಕಾ ದೋಣಿಗಳಿಗೆ ಒಟ್ಟು 1.5 ಲಕ್ಷ ಕಿ.ಲೀ. ಕರರಹಿತ ಡೀಸೆಲ್‌ನ್ನು ಡೆಲಿವರಿ ಪಾಯಿಂಟ್‌ನಲ್ಲಿ ವಿತರಣೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ ವಾರ್ಷಿಕ ಮಿತಿಯನ್ನು 1.125 ಲಕ್ಷ ಕಿ.ಲೀ. ಪ್ರಮಾಣವನ್ನು ನಿಗದಿಪಡಿಸಿ ಡೀಸೆಲ್ ವಿತರಿಸಲು ಆದೇಶ ಹೊರಡಿಸಲಾಗಿತ್ತು.

ಆದರೆ 2021-22ನೇ ಸಾಲಿನ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ಮೀನುಗಾರಿಕಾ ದೋಣಿಗಳಿಗೆ ಬಾಕಿ ಇರುವ ಡೀಸೆಲ್ ವಿತರಿಸದಿದ್ದಲ್ಲಿ ಸಾವಿರಾರು ಮೀನುಗಾರಿಕಾ ದೋಣಿಗಳು ಸ್ಥಗಿತಗೊಳ್ಳಲಿರುವುದರಿಂದ ಬಾಕಿ ಇರುವ ಕರರಹಿತ ಡೀಸೆಲ್ ಬಿಡುಗಡೆಗೊಳಿಸುವಂತೆ ಶಾಸಕ ರಘುಪತಿ ಭಟ್ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ಡೀಸೆಲ್ ಬಿಡುಗಡೆಯ ತುರ್ತು ಅಗತ್ಯತೆಯನ್ನು ಮನಗಂಡ ಮುಖ್ಯಮಂತ್ರಿ ಗಳು ರಘುಪತಿ ಭಟ್‌ರ ಮನವಿಗೆ ತಕ್ಷಣ ಸ್ಪಂದಿಸಿ ಬಾಕಿ ಇರುವ 37,500 ಕಿ.ಲೀ. ಡೀಸೆಲ್ ಬಿಡುಗಡೆಗೊಳಿಸಲು ಆದೇಶಿಸಿದರು ಎಂದು ಶಾಸಕ ಭಟ್ ತಿಳಿಸಿದರು.

ಸಮಸ್ತ ಮೀನುಗಾರರ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News