ಜಿಲ್ಲೆಯಲ್ಲಿ 73,995 ಮಕ್ಕಳಿಗೆ ಪೋಲಿಯೋ ಲಸಿಕೆ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

Update: 2022-02-22 14:51 GMT

ಉಡುಪಿ, ಫೆ.22: ಈ ಬಾರಿಯ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯ ಕ್ರಮ ಫೆ.27ರ ರವಿವಾರ ನಡೆಯಲಿದ್ದು, ಜಿಲ್ಲೆಯ 0-5 ವರ್ಷದೊಳಗಿನ ಒಟ್ಟು 73,995 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ಹಾಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಈ ಬಾರಿ ಗ್ರಾಮೀಣ ಪ್ರದೇಶದ 61,105 ಹಾಗೂ ನಗರ ಪ್ರದೇಶಗಳ 12,890 ಐದು ವರ್ಷದೊಳಗಿನ ಮಕ್ಕಳಿಗೆ ಒಂದು ಡ್ರಾಪ್ ಪೋಲಿಯೊ ಲಸಿಕೆ ಹಾಕುವ ಗುರಿ ಇದೆ ಎಂದವರು ಹೇಳಿದರು.

ಇದಕ್ಕಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ 571 ಹಾಗೂ ನಗರ ಪ್ರದೇಶಗಳಲ್ಲಿ 91 ಸೇರಿದಂತೆ ಒಟ್ಟು 662 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು. ಇದಲ್ಲದೆ 6 ಮೊಬೈಲ್ ಟೀಮ್ ಮತ್ತು 36 ಟ್ರಾನ್ಸಿಟ್ ಬೂತ್ (ಬಸ್‌ನಿಲ್ದಾಣ ಸೇರಿದಂತೆ ಜನಸಂದಣಿ ಇರುವ ಪ್ರದೇಶ)ಗಳನ್ನು ಹಾಗೂ ಎಲ್ಲಾ ಟೋಲ್‌ಗೇಟ್‌ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು ಲಸಿಕೆ ನೀಡಲಾ ಗುವುದು. ಉಡುಪಿ ನಗರ ಒಂದರಲ್ಲೇ 19 ಟ್ರಾನ್ಸಿಟ್ ಬೂತ್‌ಗಳಿರುತ್ತವೆ ಎಂದರು.

ಲಸಿಕಾ ಕಾರ್ಯಕ್ರಮದಲ್ಲಿ 2,794 ಲಸಿಕಾ ಸ್ವಯಂಸೇವಕರು ಮತ್ತು 125 ಮಂದಿ ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಲಿದ್ದು, ಆರೋಗ್ಯ, ಪಂಚಾಯತ್‌ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳು, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊಂದಿಗೆ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಈ ಬಾರಿಯ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾರ್ವಜನಿಕರು, ವಲಸೆ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ತಮ್ಮ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಬೇಕು. ಇದಕ್ಕಾಗಿ ಜಿಲ್ಲೆಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯಕ್ರಮದ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮದ ಉದ್ಘಾಟನೆ ಫೆ.27ರಂದು ಬೆಳಗ್ಗೆ 8:00ಗಂಟೆಗೆ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆಯಲಿದೆ. ಜಿಲ್ಲೆಯ ಎಲ್ಲರೂ ತಮ್ಮ 0-5 ವರ್ಷದ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ, ಮಕ್ಕಳನ್ನು ಪೋಲಿಯೋದಿಂದ ರಕ್ಷಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮನವಿ ಮಾಡಿದರು.

ದೇಶದಲ್ಲಿ 2011ರಲ್ಲಿ ಕಟ್ಟಕಡೆಯ ಪೋಲಿಯೊ ಲಸಿಕೆ ಪ್ರಕರಣ ವರದಿ ಯಾಗಿದ್ದು, ಆ ಬಳಿಕ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. ಆದರೆ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಹಾಗೂ ಅಪಘಾನಿಸ್ತಾನಗಳಲ್ಲಿ ಒಂದೆರಡು ಪ್ರಕರಣ ವರದಿಯಾಗಿದ್ದು, ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಇಲ್ಲೂ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ, ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News