ಅ.24ರಿಂದ 26: ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ
ಉಡುಪಿ, ಅ.22: ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ಅ.24ರಿಂದ 26ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ ನಡೆಯಲಿದ್ದು ಅ.24ರಂದು ಬೆಳಗ್ಗೆ 10 ಗಂಟೆಗೆ ಯೋಗ ಗುರು ಬಾಬಾ ರಾಮ್‌ದೇವ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಮಂಗಳವಾರ ಮಠದ ಗೀತಾಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 24ರ ಬೆಳಗ್ಗೆ 9 ಗಂಟೆಗೆ ವಾದ್ಯ ಮೇಳ, ಚೆಂಡೆ, ಸಹಿತವಾಗಿ ಶೋಭಾಯಾತ್ರೆಯು ರಥಬೀದಿಯಿಂದ ರಾಜಾಂಗಣಕ್ಕೆ ಸಾಗಿ ಬರಲಿದೆ. ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು ಹಾಗೂ ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿ ಸಹಯೋಗದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಮೂರೂ ದಿನ ಬೆಳಗ್ಗೆ 6:00ರಿಂದ 7:00ಗಂಟೆಯವರೆಗೆ ಪತಂಜಲಿಯ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣರ ನೇತೃತ್ವದಲ್ಲಿ ಯೋಗ ಧ್ಯಾನಾದಿ ತರಗತಿಗಳು ನಡೆಯಲಿವೆ. ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದರು.
ಪದ್ಮಶ್ರೀ ಚಮೂ ಕೃಷ್ಣಶಾಸ್ತ್ರಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ, ಎಐಒಸಿ ಅಧ್ಯಕ್ಷ ಪ್ರೊ. ಸರೋಜಾ ಭಾಟೆ, ಎಐಒಸಿ ಕಾರ್ಯದರ್ಶಿ ಪ್ರೊ. ಕವಿತಾ ಹೋಲೆ, ಭಾರತೀಯ ವಿದ್ವತ್ ಪರಿಷತ್ತಿನ ಅಧ್ಯಕ್ಷ ಪ್ರೊ. ವೀರನಾರಾಯಣ ಪಾಂಡುರಂಗಿ ಭಾಗವಹಿಸಲಿದ್ದಾರೆ ಎಂದು ಪುತ್ತಿಗೆಶ್ರೀ ತಿಳಿಸಿದರು.
ಅ.26ರಂದು ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ದಿನೇಶ್ ಕುಮಾರ್ ಪಾಲ್ಗೊಳ್ಳುವರು. ಉನ್ನತಸ್ತರದ ವಿಚಾರ ಮಂಡನೆಯ ಗೋಷ್ಠಿ, ತರುಣರ ಕವಿಗೋಷ್ಠಿ, ಯುವ ವಿದ್ವಾಂಸ, ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿ, ಶಾಸ್ತ್ರಾರ್ಥ ಸಭೆ, ಅಷ್ಟಾವಧಾನ, ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಸಹಿತ 23 ವಿಷಯಗಳಲ್ಲಿ ವಿಚಾರ ಸಂಕಿರಣಗಳು ನಡೆಯಲಿವೆ ಎಂದರು.
ಸಮ್ಮೇಳನದ ಮೂರು ದಿನಗಳಲ್ಲಿ ಶ್ರೀನಿವಾಸ ವಿವಿ ಕುಲಾಧಿಪತಿ ಸಿಎ ಎ.ರಾಘವೇಂದ್ರ ರಾವ್ ಸಹಿತ 16 ವಿವಿಗಳ ಕುಲಪತಿಗಳು, ಆರು ಮಂದಿ ನಿವೃತ್ತ ಕುಲಪತಿಗಳು ಭಾಗಿಯಾಗಲಿದ್ದಾರೆ ಸಮ್ಮೇಳನದಲ್ಲಿ 30 ಕೃತಿಗಳು ಬಿಡುಗಡೆಗೊಳ್ಳಲಿವೆ. 35 ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ವ್ಯವಸ್ಥೆ ಇರುತ್ತದೆ. ಒಟ್ಟಾರೆ 2,000 ವಿದ್ವಾಂಸರ ಉಪಸ್ಥಿತಿ, ಹಾಗೂ 300 ಮಂದಿ ವಿದ್ವಾಂಸರಿಂದ ವಿವಿಧ ವಿಚಾರ ಮಂಡನೆ ನಡೆಯಲಿದೆ ಎಂದು ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ವಿವರಿಸಿದರು.
ಉಡುಪಿ ಭಕ್ಕಿ ಜೊತೆಗೆ ಜ್ಞಾನದ ಕೇಂದ್ರವೂ ಆಗಿದ್ದು, ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನದ ಮೂಲಕ ಅದು ಮತ್ತೊಮ್ಮೆ ಜಾಗೃತಗೊಳಿಸಲಿದೆ. ಉತ್ತರ ಭಾರತದಲ್ಲಿ ಕಾಶಿ, ಉಜ್ಜೈನಿ ಹಾಗೂ ದಕ್ಷಿಣ ಭಾರತದಲ್ಲಿ ಉಡುಪಿ ಭಾರತೀಯ ಜ್ಞಾನ ಕೇಂದ್ರಗಳೆನಿಸಲಿವೆ. ಜ್ಞಾನದ ರಾಜಧಾನಿಯಾಗಿ ಉಡುಪಿ ಹೊರಹೊಮ್ಮಲು ಸಮ್ಮೇಳನ ಪ್ರೇರಣೆಯಾಗಲಿದೆ ಎಂದು ಪುತ್ತಿಗೆಶ್ರೀ ವಿಶ್ವಾಸ ವ್ಯಕ್ತಪಡಿಸಿದರು.
ಡಿಜಿಟಲ್ ಇಂಡಿಯಾದ ಯುಗದಲ್ಲಿ ಸಮ್ಮೇಳನ ಕಾಗದ ರಹಿತ ಸಮ್ಮೇಳನವಾಗಿ ನಡೆಯಲಿದೆ. ಮೂರು ದಿನಗಳಲ್ಲೂ ಪ್ಲಾಸ್ಟಿಕ್ ಬಳಕೆ ಕಡಿಮೆಯಿರಲಿದೆ. ಇಡೀ ವ್ಯವಸ್ಥೆ ಮೇಲೆ ನಿಗಾ ಇಡಲು ಗ್ರೀನ್ ಟೀಂ ಕಾರ್ಯನಿರ್ವಹಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು.