ಮಲ್ಪೆ ಹೊಟೇಲ್‌ಗೆ ದಾಳಿ: ಕಠಿಣ ಕ್ರಮಕ್ಕೆ ಮುಸ್ಲಿಮ್ ಒಕ್ಕೂಟದಿಂದ ಎಸ್ಪಿಗೆ ಮನವಿ
ಉಡುಪಿ, ಫೆ.22: ಮಲ್ಪೆಯ ಹೈದರ್ ಎಂಬವರ ಹೋಟೆಲ್ ಗೆ ನುಗ್ಗಿ ಅವರ ಪುತ್ರನಿಗೆ ಹಲ್ಲೆ ಮಾಡಿ ಆಸ್ತಿ ಹಾನಿಗೈದಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಫೆ.22ರಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲವು ಮಂದಿಯ ಗುಂಪು ಹೊಟೇಲಿಗೆ ನುಗ್ಗಿ ದಾಂಧಲೆ ಮಾಡಿದ್ದರೂ ಕೇವಲ ಒಬ್ಬರ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ಈ ರೀತಿ ಕೃತ್ಯಗಳನ್ನು ಎಸಗಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುವ ಸಮಾಜಘಾತುಕ ಶಕ್ತಿಗಳು ಮತ್ತು ಈ ಪ್ರಕರಣದಲ್ಲಿ ಮುಂದಾಗಿ ನೇತೃತ್ವ ವಹಿಸಿದ ಎಲ್ಲರ ಮೇಲೂ ದೂರು ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕಾಪಾಡಬೇಕೆಂದು ಒಕ್ಕೂಟ ಮನವಿಯಲ್ಲಿ ತಿಳಿಸಿದೆ.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಸ್ಲಿಮ್ ವಿದ್ಯಾರ್ಥಿನಿಯರ ಕುರಿತ ಮಾಹಿತಿಯನ್ನು ಒಳಗೊಂಡ ದಾಖಲೆಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಅದರಿಂದಾಗಿ ಅದರಲ್ಲಿದ್ದಂತಹ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆ ಮಾಡಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆದ್ದರಿಂದ ಈ ಮಾಹಿತಿಯನ್ನು ಕಾಲೇಜಿನ ಆಡಳಿತ ವ್ಯವಸ್ಥೆಯಿಂದ ಹೇಗೆ ಹೊರಬಂತು ಹಾಗೂ ಇದನ್ನು ಏಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಯಿತು ಎಂಬುದರ ಕುರಿತು ಸೂಕ್ತ ತನಿಖೆ ನಡೆಸಿ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒಕ್ಕೂಟ ಮನವಿಯಲ್ಲಿ ಒತ್ತಾಯಿಸಿದೆ.
ಮನವಿಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ಸ್ವೀಕರಿಸಿದರು. ನಿಯೋಗದಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಉಪಾಧ್ಯಕ್ಷ, ಇದ್ರೀಸ್ ಹೂಡೆ, ಜಿಲ್ಲಾ ಸಮಿತಿಯ ಸದಸ್ಯ ರಾದ ಜಾಫರ್, ಇಕ್ಬಾಲ್ ಮನ್ನಾ, ಅಬ್ದುಲ್ ಅಝೀಝ್ ಉದ್ಯಾವರ, ಎಸ್‌ಐಓ ಜಿಲ್ಲಾಧ್ಯಕ್ಷರ ಅಫ್ವಾನ್ ಹೂಡೆ ಉಪಸ್ಥಿತರಿದ್ದರು.