ಬೈಂದೂರು ಶಾಸಕರ ಕಾಲೇಜಿನ ಪಿಆರ್‌ಓಯಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಆರೋಪ

Update: 2022-02-24 15:11 GMT

ಉಡುಪಿ, ಫೆ.24: ಬೈಂದೂರು ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಆಡಳಿತದ ಕುಂದಾಪುರ ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿರುವುದಾಗಿ ಆರೋಪಿಸಿ  ಕಾಲೇಜಿನ ನೂರಾರು ವಿದ್ಯಾರ್ಥಿಗಳು ಗುರುವಾರ ತರಗತಿ ಬಹಿಷ್ಕರಿಸಿ ತೀವ್ರ ಪ್ರತಿಭಟನೆ ನಡೆಸಿದರು.

ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಹಲವು ವಿದ್ಯಾರ್ಥಿನಿಯರಿಗೆ ಕಳೆದ ಡಿಸೆಂಬರ್ ತಿಂಗಳಿನಿಂದ ಅಶ್ಲೀಲ ಸಂದೇಶ ಕಳುಹಿಸಿ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ದೂರಲಾಗಿದೆ. ಈತನನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಕಾಲೇಜಿನ 200ಕ್ಕೂ ಅಧಿಕ ವಿದ್ಯಾರ್ಥಿಗಳು ಬೆಳಗ್ಗೆ ತರಗತಿಗೆ ತೆರಳದೆ ಕಾಲೇಜಿನ ಎದುರು ಧರಣಿ ನಡೆಸಿ ಘೋಷಣೆಗಳನ್ನು ಕೂಗಿದರು.

ಪಟ್ಟು ಬಿಡದ ವಿದ್ಯಾರ್ಥಿಗಳು
ಬಳಿಕ ಸ್ಥಳಕ್ಕೆ ಆಗಮಿಸಿದ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ವಿದ್ಯಾರ್ಥಿ ಗಳನ್ನು ತರಗತಿಗೆ ತೆರಳುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು, ಸ್ಥಳಕ್ಕೆ ಕಾಲೇಜಿನ ಮುಖ್ಯಸ್ಥರಾದ ಸುಕುಮಾರ್ ಶೆಟ್ಟಿ ಹಾಗೂ ಪಿಆರ್‌ಓ ನಾಗರಾಜ್ ಶೆಟ್ಟಿ ಬರುವಂತೆ ಪಟ್ಟು ಹಿಡಿದರು.

‘ನಾಗರಾಜ್ ಶೆಟ್ಟಿ ಚಾಟಿಂಗ್ ಹಾಗೂ ವಿಡಿಯೋ ಕಾಲ್ ಮೂಲಕ ಕೆಲವು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದನು. ಅವರ ಫೋಟೋ ಕಳಿಸುವಂತೆಯೂ ಪದೇ ಪದೇ ಒತ್ತಾಯಿಸುತ್ತಿದ್ದನು. ಡಿಸೆಂಬರ್ ತಿಂಗಳಿನಿಂದ ಈ ರೀತಿ ವಿದ್ಯಾರ್ಥಿನಿಯರಲ್ಲಿ ವರ್ತಿಸುತ್ತಿದ್ದನು. ಈ ಕುರಿತು ನಮ್ಮಲ್ಲಿ ಇವರು ಚಾಟಿಂಗ್ ಮಾಡಿರುವ ಸುಮಾರು 24 ಸ್ಕ್ರೀನ್ ಶಾಟ್‌ಗಳಿವೆ ಎಂದು ವಿದ್ಯಾರ್ಥಿ ಗಳು ಆರೋಪಿಸಿದರು.

ಪ್ರಾಂಶುಪಾಲರಿಗೆ ಮನವಿ
ಇದೇ ವೇಳೆ ಸ್ಥಳಕ್ಕೆ ಬಂದ ಕಾಲೇಜಿನ ಪ್ರಾಂಶುಪಾಲ ಉಮೇಶ್ ಅವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು. ಕಾಲೇಜಿನ ಹೆಸರನ್ನು ಎತ್ತರಕ್ಕೆ ಏರಿಸಿ ಬೆಳಸಬೇಕಾದ ಸ್ಥಾನದಲ್ಲಿರುವ ನಾಗರಾಜ್ ಶೆಟ್ಟಿ ತನ್ನ ಸ್ಥಾನದ ಘನತೆಯನ್ನು ಮರೆತು ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ತೋರಿಸುತ್ತಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾಲೇಜಿನ ಆರಂಭದ ದಿನಗಳಿಂದಲೂ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸುವುದರ ಜೊತೆಗೆ ಅವರ ಭಾವಚಿತ್ರಕ್ಕಾಗಿ ಬೇಡಿಕೆ ಇಡುತ್ತಿದ್ದನು. ತಡರಾತ್ರಿ ವಿಡಿಯೋ ಕಾಲ್ ಮಾಡಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದನು ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಬೆಳವಣಿಗೆ ಕಾಲೇಜಿಗೆ ಬಹಳ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಇದಕ್ಕೆ ಸಂಬಂಧಿಸಿದ ಪುರಾವೆಗಳು ನಮ್ಮಲ್ಲಿವೆ. ಅನೇಕ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಚಾರದಲ್ಲಿ ಮತ್ತು ಹಳೆ ವಿದ್ಯಾರ್ಥಿಗಳಿಗೆ ಕೆಲಸ ಕೊಡುವ ಆಮಿಷವೊಡ್ಡಿ ಪ್ರತಿದಿನ ಕಿರುಕುಳ ನೀಡುತ್ತಿದ್ದಾನೆ. ಈ ರೀತಿ ತಪ್ಪು ಎಸಗಿರುವ ನಾಗರಾಜ್ ಶೆಟ್ಟಿ ಎಲ್ಲರ ಮುಂದೆ ವಿದ್ಯಾರ್ಥಿನಿಯರಲ್ಲಿ ಕ್ಷಮೆಯಾಚಿಸಬೇಕು. ಅಲ್ಲದೆ ಕೆಲಸದಿಂದ ವಜಾಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಪ್ರಾಂಶುಪಾಲರು, ಈ ಬಗ್ಗೆ ಎರಡು ದಿನಗಳಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಅದರಂತೆ ವಿದ್ಯಾರ್ಥಿಗಳು ಈ ದಿನದ ಪ್ರತಿಭಟನೆಯನ್ನು ಕೈಬಿಟ್ಟು ತರಗತಿಗೆ ತೆರಳಿದರು.

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿತ್ತಿರುವ ಆರೋಪದ ಹಿನ್ನೆಲೆ ಯಲ್ಲಿ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಮ್ಮದು ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಆಗಿದೆ. ನಮಗೆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಅದಕ್ಕಾಗಿ ಆತನನ್ನು ಕೆಲಸ ದಿಂದ ತೆಗೆಯಲಾಗಿದೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು, ಬೈಂದೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News