ಇಸ್ರೇಲ್ ಮಾದರಿಯಲ್ಲಿ ನೀರಿನ ಸಂರಕ್ಷಣೆ ಅಗತ್ಯ: ಡಾ.ಹೇಮ್ಲಾ ನಾಯ್ಕ

Update: 2022-03-03 14:18 GMT

ಬ್ರಹ್ಮಾವರ, ಮಾ.3: ನಮ್ಮ ಮುಂದಿನ ಪೀಳಿಗೆ ನೀರನ್ನು ಬಳಸುವಂತಾಗ ಬೇಕಿದ್ದರೆ, ಈಗ ನೀರಿನ ಸಂರಕ್ಷಣೆ ಅತೀ ಅಗತ್ಯ. ಇದಕ್ಕಾಗಿ ಇಸ್ರೇಲ್ ಮಾದರಿ ಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ನೀರಿನ ಸದ್ಬಳಕೆ ಮಾಡುವ ಬಗ್ಗೆ ನಾವು ಚಿಂತಿಸಬೇಕಾದ ಅನಿರ್ವಾಯತೆ ಇದೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಸ್ತರಣಾ ನಿರ್ದೇಶಕ ಡಾ.ಹೇಮ್ಲಾ ನಾಯ್ಕ ಹೇಳಿದ್ದಾರೆ.

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹೊಸದಿಲ್ಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬೆಂಗಳೂರಿನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ, ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ಮತ್ತು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಸೆಲ್ಕೋ ಸೋಲಾರ್ ಲೈಟ್ಸ್ನ ಸಹಯೋಗದಲ್ಲಿ ಬುಧವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಶಕ್ತಿ ದಕ್ಷ ಪಂಪ್‌ ಸೆಟ್‌ ಗಳ ಮತ್ತು ನೀರಿನ ಸಂರಕ್ಷಣೆ ತರಬೇತಿ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿಶ್ವದ ಇತರ ಕೆಲವು ದೇಶಗಳಲ್ಲಿರುವಂತೆ ನಮ್ಮ ದೇಶದಲ್ಲಿ ನೀರಿನ ದುಸ್ಥಿತಿ ಇಲ್ಲ. ನೀರಿನ ಮರುಬಳಕೆ ಬಗ್ಗೆಯೂ ಚಿಂತನೆ ಮಾಡಬೇಕಾದ ಅನಿರ್ವಾಯತೆ ಇಲ್ಲ. ಆದರೂ ಗಿಡಗಳಿಗೆ ಬೇಕಾದಷ್ಟೇ ಪ್ರಮಾಣದಲ್ಲಿ ಮತ್ತು ಸಮಯದಲ್ಲಿ ನಾವು ನೀರನ್ನು ನೀಡಿ, ನೀರನ್ನು ಸಂರಕ್ಷಿಸುವ ಕಾರ್ಯವನ್ನು ಮಾಡಬೇಕು ಎಂದ ಅವರು, ಮಳೆಗಾಲದಲ್ಲಿ ಮಳೆ ನೀರನ್ನು ಸಂರಕ್ಷಿಸುವ ಮತ್ತು ಅನೇಕ ಸಬ್ಸಿಡಿ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದಲ್ಲಿ ಸೌರಶಕ್ತಿ ಮತ್ತು ಜಲಶಕ್ತಿಯನ್ನು ನಾವು ಉಳಿಸಿಕೊಳ್ಳಬಹುದು ಎಂದರು.

ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಮಾತನಾಡಿ ಕರಾವಳಿ ಜಿಲ್ಲೆಗಳಲ್ಲಿ ಪ್ರತಿ ಬಾರಿ ಏಪ್ರಿಲ್-ಮೇ ತಿಂಗಳಿನಲ್ಲಿ ನೀರಿಗಾಗಿ ನಾವು ಪರದಾಡುತ್ತಿದ್ದೇವೆ. ಪಂಪ್ ಮತ್ತು ನೀರಿನ ಸದ್ಬಳಕೆಯಲ್ಲಿ ವೈಜ್ಞಾನಿಕತೆ ಇದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನ್‌ಚಂದ್ರ ಜೈನ್, ಮಣಿಪಾಲ ಸೆಲ್ಕೋ ಸೋಲಾರ್‌ನ ಪ್ರಧಾನ ವ್ಯವಸ್ಥಾಪಕ ಜಗದೀಶ ಪೈ, ಖಂಬದಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ ದಿನೇಶ್, ಸೆಲ್ಕೋದ ಗುರುಪ್ರಕಾಶ್ ಶೆಟ್ಟಿ, ಕೆವಿಕೆಯ ಸಹ ಪ್ರಾಧ್ಯಾಪಕರಾದ ವಿನೋದ್ ವಿ.ಆರ್, ಡಾ.ಶಂಕರ್ ಎಂ.ಮಾಹಿತಿ ನೀಡಿದರು.

ಬ್ರಹ್ಮಾವರ ಕೆ.ವಿ.ಕೆಯ ಮುಖ್ಯಸ್ಥ ಡಾ.ಬಿ.ಧನಂಜಯ ಸ್ವಾಗತಿಸಿದರು. ವಿಜ್ಞಾನಿ ಡಾ.ಚೈತನ್ಯ ಎಚ್.ಎಸ್ ವಂದಿಸಿ, ಡಾ.ಸಚಿನ್ ಯು.ಎಸ್. ಕಾರ್ಯಕ್ರಮ

''ಪಂಪ್‌ಸೆಟ್‌ಗಳಿಗೆ ಮೊಬೈಲ್ ಸ್ಟಾಟರ್ ಅಳವಡಿಸಲು ರೈತರಿಗೆ ಸಬ್ಸಿಡಿ ನೀಡುವುದರೊಂದಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು''.

-ಪ್ರಕಾಶ್ಚಂದ್ರ ಶೆಟ್ಟಿ, ಅಧ್ಯಕ್ಷರು ಖಂಬದಕೋಣೆ ಡಿಸಿಸಿ ಬ್ಯಾಂಕ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News