ಖಾಸಗಿ ಸಂಸ್ಥೆಗಳ ಸಹಕಾರದಿಂದ ಸರಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ: ರಮ್ಲಾನ್ ಮಾರಿಪಳ್ಳ

Update: 2022-03-05 17:56 GMT

ಬಂಟ್ವಾಳ, ಮಾ.5: ಸರಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಿದಾಗ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಹೇಳಿದರು. 

ಪುದು ಗ್ರಾಮದ ಸುಜೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುತ್ತೂಟ್ ಫೈನಾನ್ಸ್ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಅಕ್ಷರ ದಾಸೋಹ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಾರಿಪಳ್ಳ ಸುಜೀರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿಯನ್ನು ನವೀಕರಣಗೊಳಿಸುವ ಕಾರ್ಯ ಮಾಡುವ ಮೂಲಕ ಮುತ್ತೂಟ್ ಫೈನಾನ್ಸ್ ದೇವರು ಮೆಚ್ಚುವ ಕಾರ್ಯ ಮಾಡಿದೆ ಎಂದು ಹೇಳಿದರು. 

ಬಂಟ್ವಾಳ ಬಿಇಒ ಜ್ಞಾನೇಶ್ ಮಾತನಾಡಿ, ಇಂತಹ ಸೇವಾ ಸಂಸ್ಥೆಗಳು ಸರಕಾರಿ ಶಾಲೆಗಳಿಗೆ ನೆರವನ್ನು ಒದಗಿಸಿದಾಗ ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ಸಿಗಲು ಸಾಧ್ಯವಾಗುತ್ತದೆ ಎಂದರು. 

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಯುವುದಕ್ಕೆ ಉತ್ತಮ ವಾತಾವರಣ ನೀಡಿದಾಗ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು. 

ಎಸ್‌ಡಿಎಂಸಿ ಅಧ್ಯಕ್ಷ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಭಾಸ್ಕರ ರೈ, ಕಿಶೋರ್‌ ಕುಮಾರ್, ಲವೀನಾ, ಇಕ್ಬಾಲ್ ಸುಜೀರ್, ರೆಹನಾ, ಮುಹಮ್ಮದ್ ಮೋನು, ಝೀನತ್, ಮುತ್ತೂಟ್ ಫೈನಾನ್ಸ್ ಪುತ್ತೂರು ವಿಭಾಗದ ಸಿಬಿಎಂ ಸಂದೇಶ್ ಶೆಣೈ, ವಿಜಿಲೆನ್ಸ್ ಅಧಿಕಾರಿ ತಾರಾನಾಥ ಕೆ, ಶಾಖಾ ವ್ಯವಸ್ಥಾಪಕಿ ಗಾಯತ್ರಿ ನಾಯಕ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ., ಉದ್ಯಮಿಗಳಾದ ಶೋಭಿತ್‌ರಾಜ್, ಆರೀಫ್ ಪಾಡಿ, ಪ್ರಕಾಶ್‌ಚಂದ್ರ ರೈ ದೇವಸ್ಯ, ಆನಂದ್ ಟಿ. ಶೆಟ್ಟಿ, ನಿವೃತ್ತ ಶಿಕ್ಷಕ ಮುಹಮ್ಮದ್ ತುಂಬೆ, ಸುಜೀರು ಪ್ರೌಢಶಾಲಾ ಮುಖ್ಯಶಿಕ್ಷಕಿ ಶಶಿಮಂಗಳ ಉಪಸ್ಥಿತರಿದ್ದರು. 

ಮುತ್ತೂಟ್ ಫೈನಾನ್ಸ್ ಮಂಗಳೂರು ವಿಭಾಗದ ಮ್ಯಾನೇಜರ್ ಪ್ರಸಾದ್‌ಕುಮಾರ್ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News