ಉಕ್ರೇನ್‌ನಲ್ಲಿ ವೆದ್ಯಕೀಯ ಶಿಕ್ಷಣ: ಭಾರತೀಯ ವಿದ್ಯಾರ್ಥಿಗಳ ಒಲವಿಗೆ ನೀಟ್ ಕಾರಣವೇ ಅಥವಾ ಮೀಸಲಾತಿಯೇ?

Update: 2022-03-07 06:42 GMT

ಭಾರತದಲ್ಲಿ ವೈದ್ಯಕೀಯ ಶಿಕ್ಷಣವು ಸಂಪೂರ್ಣವಾಗಿ ಬದಲಾವಣೆಯನ್ನು ಕಾಣಬೇಕಾಗಿದೆ. ನವೀನ್ ಮೃತ್ಯು ಹಾಗೂ ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡ ಘಟನೆಯು ಇದಕ್ಕೊಂದು ಎಚ್ಚರಿಕೆ ಕರೆಗಂಟೆಯಾಗಿದೆ.

ಕರ್ನಾಟಕದ ನವೀನ್ ಶೇಖರಪ್ಪ ಗ್ಯಾನಗೌಡರ್ ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ಮಾಡಲು ಉಕ್ರೇನ್‌ಗೆ ತೆರಳಿದ್ದರು. ಆದರೆ ಕಳೆದ ವಾರ ಯುದ್ಧ್ಧದಿಂದ ತತ್ತರಿಸಿರುವ ಖಾರ್ಕಿವ್ ನಗರದಲ್ಲಿ ಆಹಾರವನ್ನು ಖರೀದಿಸಲು ಕಾಯುತ್ತಾ ನಿಂತಿದ್ದಾಗ ರಶ್ಯದ ಶೆಲ್ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದರು. ಹಣದ ಕೊರತೆ ಹಾಗೂ ಜಾತಿ ಮೀಸಲಾತಿಯಿಂದಾಗಿ ತನ್ನ ಪುತ್ರನಿಗೆ ಭಾರತದ ವೈದ್ಯಕೀಯ ಕಾಲೇಜ್‌ಗಳಲ್ಲಿ ಸೀಟು ಪಡೆಯಲು ಸಾಧ್ಯವಾಗದ ಕಾರಣ ಆತ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್‌ನ ಖಾರ್ಕಿವ್‌ಗೆ ತೆರಳಬೇಕಾಯಿತು ಎಂದು ನವೀನ್ ಅವರ ತಂದೆ ಶೇಖರಪ್ಪ ಹೇಳುತ್ತಾರೆ. 21 ವರ್ಷದ ನವೀನ್, ಪಿಯು ಪರೀಕ್ಷೆಯಲ್ಲಿ ಶೇ.97 ಅಂಕಗಳನ್ನು ಪಡೆದುಕೊಂಡಿದ್ದನೆಂದು ಆತ ವಿವರಿಸುತ್ತಾರೆ.

  ಉಕ್ರೇನ್‌ನಲ್ಲಿ ನಡೆದ ರಶ್ಯದ ಶೆಲ್ ದಾಳಿಯಲ್ಲಿ ನವೀನ್ ಮೃತಪಟ್ಟ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಗರಿಗೆದರಿವೆ. ಟ್ವಿಟರ್‌ನಲ್ಲಿ ‘‘ ಮೀಸಲಾತಿಯು ನವೀನ್‌ನನ್ನು ಹತ್ಯೆಗೈದಿದೆ’’ ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ. ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ನಡೆಸಲು ಬಯಸುವ ವಿದ್ಯಾರ್ಥಿಗಳ ಗೋಳಿಗೆ ಭಾರತೀಯ ಮೀಸಲಾತಿ ವ್ಯವಸ್ಥೆಯೇ ಕಾರಣವೆಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ದೂರತೊಡಗಿದರು.

 ನವೀನ್ ಅವರ ತಂದೆ ಪ್ರಾಥಮಿಕವಾಗಿ ಮೂರು ವಿಷಯಗಳನ್ನು ತಿಳಿಸಿದ್ದರು.

1. ಹನ್ನೆರಡನೇ ತರಗತಿ ಪರೀಕ್ಷೆಗಳಲ್ಲಿ ನವೀನ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಪಡೆದಿರುವ ಹೊರತಾಗಿಯೂ ಭಾರತದಲ್ಲಿ ಅವರಿಗೆ ವೈದ್ಯಕೀಯ ಸೀಟನ್ನು ಪಡೆಯಲು ಸಾಧ್ಯವಾಗಲಿಲ್ಲ.

2. ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಸೀಟನ್ನು ಪಡೆಯಬೇಕಾದರೆ ಒಬ್ಬ ವ್ಯಕ್ತಿಯು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ತಗಲುವ ಖರ್ಚು ಇದಕ್ಕಿಂತ ಎಷ್ಟೋ ಪಾಲು ಕಡಿಮೆಯಾಗಿದೆ.

3. ಭಾರತದಲ್ಲಿ ಜಾತಿ ಮೀಸಲಾತಿಯ ಆಧಾರದಲಿ ್ಲ ವೈದ್ಯಕೀಯ ಶಿಕ್ಷಣದ ಸೀಟುಗಳನ್ನು ವಿತರಿಸಲಾಗುತ್ತದೆ.

ಸುಪ್ರೀಂಕೋರ್ಟ್ ತೀರ್ಪಿನ ಆನಂತರ ಎಲ್ಲಾ ವೈದ್ಯಕೀಯ ಕಾಲೇಜ್‌ಗಳಲ್ಲಿ ಪ್ರವೇಶಾತಿಗೆ ನೀಟ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಯಿತು. ಪ್ರಾಸಂಗಿಕವಾಗಿ 12ನೇ ತರಗತಿಯಲ್ಲಿ ಪಡೆಯಲಾದ ಅಂಕಗಳನ್ನು ನೀಟ್ ರ್ಯಾಂಕಿಂಗ್‌ನಲ್ಲಿ ಪರಿಗಣಿಸಲಾಗುವುದಿಲ್ಲ. ಹೀಗೆ, 12ನೇ ತರಗತಿ ಪರೀಕ್ಷೆಯಲ್ಲಿ ಯಾರಾದರೂ ಅತ್ಯಧಿಕ ಅಂಕಗಳನ್ನು ಪಡೆದಲ್ಲಿ ಆತ ಅಥವಾ ಆಕೆ ವೈದ್ಯಕೀಯ ಕಾಲೇಜ್‌ನಲ್ಲಿ ಪ್ರವೇಶಾತಿ ಪಡೆಯುತ್ತಾರೆಂಬುದಕ್ಕೆೆ ಯಾವುದೇ ಖಾತರಿಯಿಲ್ಲ. ಹೀಗಾಗಿ ಹನ್ನೆರಡನೇ ತರಗತಿಯ ಪರೀಕ್ಷೆಯಲ್ಲಿ ನವೀನ್ ಉತ್ತಮ ಅಂಕಗಳನ್ನು ಪಡೆದಿದ್ದನಾದರೂ, ಅವು ಆತನಿಗೆ ಭಾರತದಲ್ಲಿ ವೈದ್ಯಕೀಯ ಕಾಲೇಜ್‌ಗಳಲ್ಲಿ ಪ್ರವೇಶಾತಿಯನ್ನು ದೊರಕಿಸಿಕೊಡಲು ನೆರವಾಗಲಿಲ್ಲ.

ನವೀನ್ ಅವರು ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಯ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡರೂ ಆತ ಇನ್ನೂ ಹೆಚ್ಚು ಅನನುಕೂಲಕರವಾದ ಸ್ಥಿತಿಯಲ್ಲಿದ್ದನು. ನೀಟ್ ಎಂಬುದು ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿದ್ದು, ಅದರ ಪಠ್ಯಗಳು ಸಿಬಿಎಸ್‌ಇ ಪಠ್ಯಕ್ರಮವನ್ನು ಆಧರಿಸಿದ್ದಾಗಿದೆ.  

ನೀಟ್‌ನ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ತಮಿಳುನಾಡು ಸರಕಾರವು ರಚಿಸಿದ ಎ.ಕೆ.ರಾಜನ್ ಸಮಿತಿಯು ಈ ವಾಸ್ತವತೆಯ ಬಗ್ಗೆ ಬೆಳಕು ಚೆಲ್ಲಿದ್ದವು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ವರದಿ ಮಾಡಿರುವಂತೆ ತಮಿಳು ನಾಡು ಸರಕಾರದ ಸಮಿತಿಯು ನಡೆಸಿದ ಅಧ್ಯಯನವು ನೀಟ್ ಪರೀಕ್ಷೆಯಲ್ಲಿ ಸಿಬಿಎಸ್‌ಇ ಮಂಡಳಿಯಲ್ಲಿ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣವು 38.94 ಶೇ.ಕ್ಕೇರಿದೆ. ಹಿಂದೆ ಈ ಪ್ರಮಾಣವು ಕೇವಲ 0.9 ಶೇ. ಆಗಿತ್ತು. ಇದೇ ವೇಳೆ ರಾಜ್ಯ ಪರೀಕ್ಷಾ ಮಂಡಳಿಯ ಪರೀಕ್ಷೆಯಲ್ಲಿ 12ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳ ಯಶಸ್ಸಿನ ಪ್ರಮಾಣವು98.23 ಶೇ.ದಿಂದ 59.41 ಶೇ.ಕ್ಕೆ ಇಳಿಯಿತು. ಕರ್ನಾಟಕ ಸರಕಾರವು ಇಂತಹ ಯಾವುದೇ ಅಧ್ಯಯನವನ್ನು ಕೈಗೊಂಡಿಲ್ಲವಾದ್ದರಿಂದ ಕರ್ನಾಟಕ ಪರೀಕ್ಷಾ ಮಂಡಳಿಯ ವಿದ್ಯಾರ್ಥಿಗಳ ಪರಿಸ್ಥಿತಿಯೂ ಹೀಗೇ ಆಗಿರಬೇಕೆಂದು ನಾನು ಅಂದಾಜಿಸಬಲ್ಲೆ.

ಏನೇ ಇದ್ದರೂ ನೀಟ್ ಪರೀಕ್ಷೆಯನ್ನು ಸಿಬಿಎಸ್‌ಇ ಪಠ್ಯಕ್ರಮದ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿಯೇ ಸಿದ್ಧಪಡಿಸುವ ಕೋಚಿಂಗ್ ಸೆಂಟರ್‌ಗಳ ತಲೆಯೆತ್ತುವಿಕೆಗೂ ಇದು ಒಂದು ಕಾರಣವಾಗಿದೆ. ಈ ವರದಿಯ ಪ್ರಕಾರ ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿ ಪಡೆದವರಲ್ಲಿ ಶೇ.99ರಷ್ಟು ಮಂದಿ ಒಂದಲ್ಲ ಒಂದು ರೀತಿಯ ತ ರಬೇತಿಯನ್ನು ಪಡೆದವರಾಗಿದ್ದಾರೆ.

ಯಶಸ್ವಿ ನೀಟ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣವು ಹೆಚ್ಚಿದೆ.

ಈ ಸಮೀಕ್ಷೆಯಲ್ಲಿ ಬೆಳಕಿಗೆ ಬಂದ ಇನ್ನೊಂದು ಮಹತ್ವದ ವಿಷಯ ವೆಂದರೆ ನೀಟ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಸೀಟು ಪಡೆಯುವ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿದೆ. 2011-12ನೇ ಸಾಲಿನಲ್ಲಿ ಶೇ.99.2 ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದರು.ಆದರೆ 2020-2021ನೇ ಸಾಲಿನಲ್ಲಿ ಕೇವಲ 28.59 ಶೇ. ವಿದ್ಯಾರ್ಥಿಗಳು ಮೊದಲ ಪ್ರಯತ್ನದಲ್ಲೇ ಸೀಟುಗಳನ್ನು ಪಡೆದರು. ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕಾದರೆ ಕೋಚಿಂಗ್ ಪೂರ್ವಾಗತ್ಯವಾಗಿದೆಯೆಂಬುದನ್ನು ಇದು ತೋರಿಸಿಕೊಡುತ್ತದೆ. ಇದರಿಂದಾಗಿ ಅನುಕೂಲಸ್ಥರು ಹಾಗೂ ಆರ್ಥಿಕವಾಗಿ ಉತ್ತಮ ಹಿನ್ನೆಲೆಯಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದು ವರವಾಗಿ ಪರಿಣಮಿಸಿದೆ.

ಶ್ರೀಮಂತರಿಗೆ ಮೀಸಲಾತಿ

ವೈದ್ಯಕೀಯ ಶಿಕ್ಷಣವನ್ನು ಪಡೆಯುವಲ್ಲಿ ಹಣದ ಪಾತ್ರವನ್ನು, ಖಾಸಗಿ ವೈದ್ಯಕೀಯ ಕಾಲೇಜುಗಳ ಶುಲ್ಕ ಸಂರಚನೆಯಲ್ಲೇ      ಸ್ಪಷ್ಟವಾಗಿ ಕಂಡುಬರುತ್ತದೆ. ಖಾಸಗಿ ಕಾಲೇಜುಗಳು 1.5 ಕೋಟಿ ರೂ.ವರೆಗೂ ಬೋಧನಾಶುಲ್ಕವನ್ನು ವಿಧಿಸಬಹುದಾಗಿದೆ. ನವೀನ್ ಅವರ ತಂದೆಯವರೂ ಈ ವಾಸ್ತವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಪ್ರವೇಶಾತಿಯು ಅರ್ಹತೆಯನ್ನು ಆಧರಿಸಿಲ್ಲ. ಆದಾಗ್ಯೂ ಮೀಸಲಾತಿ ವಿರೋಧಿಸುವವರನ್ನು, ಅರ್ಹತೆ ಹಾಗೂ ಸಮಾನತೆಯ ಚಿಂತನೆಗೆ ಮೀಸಲಾತಿಯು ಅಡ್ಡಿಯಾಗಿದೆ ಎಂದು ಭಾವಿಸುವವರನ್ನು ಇದು ವಿಚಲಿತಗೊಳಿಸುವುದಿಲ್ಲ.

ಶುಲ್ಕವನ್ನು ಅಧಿಕವಾಗಿಡಲು ಹಾಗೂ ಸೀಟುಗಳನ್ನು ಭರ್ತಿ ಮಾಡಲು, ನೀಟ್‌ಗೆ ಅರ್ಹತೆಯ ಅಂಕಗಳನ್ನು ಎಷ್ಟು ಕಡಿಮೆ ಮಟ್ಟದಲ್ಲಿರಿಸಲಾಗಿದೆಯೆಂದರೆ ಹೆಚ್ಚುಕಮ್ಮಿ ಪ್ರತಿಯೊಬ್ಬರೂ ಕೂಡಾ ಖಾಸಗಿ ಸೀಟುಗಳಿಗಾಗಿ ಪ್ರಯತ್ನಿಸಬಹುದಾಗಿದೆ. 2021ರ ಸಾಲಿನ ನೀಟ್-ಯುಜಿ ಪರೀಕ್ಷೆಯಲ್ಲಿ 15.44 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು ಹಾಗೂ 8.7 ಲಕ್ಷ ಅಭ್ಯರ್ಥಿಗು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಬೇಕಾದ ಅಂಕವು ಎಷ್ಟು ಕಡಿಮೆ ಯೆಂದರೆ ಸಾಮಾನ್ಯ ಶ್ರೇಣಿಯ ಸೀಟುಗಳಿಗೆ ಒಟ್ಟು 720 ಅಂಕಗಳಲ್ಲಿ ಕೇವಲ 138 ಅಂಕಗಳನ್ನು ಪಡೆದರೂ ಸಾಕಾಗುತ್ತದೆ. ಹೀಗಾಗಿ 8.70 ಲಕ್ಷ ರ್ಯಾಂಕ್ ಪಡೆದಿರುವ ವ್ಯಕ್ತಿಯು ಕೂಡಾ ಭಾರತದಲ್ಲಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜ್‌ನಲ್ಲಿ ಪ್ರವೇಶಾತಿಯನ್ನು ಪಡೆಯಬಹುದಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಅಭ್ಯರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗುತ್ತರಾದರೂ, ದೇಶದಲ್ಲಿ 82 ಸಾವಿರ ಎಂಬಿಬಿಎಸ್ ಸೀಟುಗಳು ಮಾತ್ರವೇ ಇರುವುದು. ಆದರೆ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಸೀಮಿತ ಸಂಖ್ಯೆಯಲ್ಲಿರುವ ಖಾಸಗಿ ಸೀಟುಗಳನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ.

ಮೀಸಲಾತಿಯು ಸಮಸ್ಯೆಯೇ?

ಮೀಸಲಾತಿಯು ವೈದ್ಯಕೀಯ ಶಿಕ್ಷಣದಲ್ಲಿ ಅವಕಾಶಗಳನ್ನು ಕಡಿಮೆ ಮಾಡುತ್ತಿದೆಯೇ?. ಈ ಪ್ರಶ್ನೆಯನ್ನು ಕೇಳುವ ವ್ಯಕ್ತಿ ನೆಲೆಸಿರುವ ಸ್ಥಳವನ್ನು ಆಧರಿಸಿ ವಿಭಿನ್ನವಾದ ಉತ್ತರಗಳನ್ನು ನೀಡಬೇಕಾಗುತ್ತದೆ. ಯಾಕೆಂದರೆ ಮೀಸಲಾತಿಯು ಭಾರತದ ಜ   ನಸಂಖ್ಯೆಯಲ್ಲಿ ಅಧಿಕವಾಗಿರುವ ನಿಮ್ನವರ್ಗಗಳಿಗೆ ಅವಕಾಶಗಳ ಬಾಗಿಲುಗಳನ್ನು ತೆರೆದುಕೊಟ್ಟಿದೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬಂಡವಾಳದ ಐತಿಹಾಸಿಕ ಕೊರತೆಯನ್ನು ಸರಿಪಡಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರಾಸಂಗಿಕವಾಗಿ 8 ಲಕ್ಷ ರೂ. ವಾರ್ಷಿಕ ಆದಾಯ ಮಿತಿಯನ್ನು ಹೊಂದಿರುವ ಮೇಲ್ಜಾತಿಯ ಮಧ್ಯಮವರ್ಗದ ಮಂದಿ ಕೂಡಾ ಆರ್ಥಿಕ ದುರ್ಬಲ ವರ್ಗದ ಶ್ರೇಣಿಯಲ್ಲಿ ಈ ವರ್ಷದಿಂದ ಮೀಸಲಾತಿಗೆ ಅರ್ಹರಾಗಿದ್ದಾರೆ.

ಯುಕ್ರೇನ್‌ನಲ್ಲಿ ಕದ     ಕ್ಕೆ ಬಲಿಯಾದ ನವೀನ್ ಕೂಡಾ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಒಬ್ಬ. ಆದರೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಸೀಟುಗಳ ಸಂಖ್ಯೆ ಸೀಮಿತವಾಗಿರುವ ಕಾರಣ ಆತನಿಗೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಸಹ ವಾದಿಸುವುದಾದರೆ, ಪ್ರಸಕ್ತ ವ್ಯವಸ್ಥೆಯಲ್ಲಿ ಜಾತಿ ಮೀಸಲಾತಿ ಸೀಟುಗಳು ಇಲ್ಲದಿದ್ದರೂ ಆತನಿಗೆ ವೈದ್ಯಕೀಯ ಸೀಟು ಸಿಗುವ ಸಾಧ್ಯತೆಯಿರುತ್ತಿರಲಿಲ್ಲ,.

2021ನೇ ಸಾಲಿನ ನೀಟ್-ಯುಜಿ ಪರೀಕ್ಷೆಯಲ್ಲಿ ಶೇ.83ರಷ್ಟು ಮಂದಿ ಒಬಿಸಿ ಅಭ್ಯರ್ಥಿಗಳು. ಶೇ.80ಕ್ಕೂ ಅಧಿಕ ಎಸ್‌ಸಿ ಅಭ್ಯರ್ಥಿಗಳು ಹಾಗೂ ಶೇ.77ರಷ್ಟು ಎಸ್‌ಟಿ ಅಭ್ಯರ್ಥಿಗಳು ಸಾ   ಾನ್ಯ ಶ್ರೇಣಿಗಾಗಿನ ಶೇ.50ಕ್ಕಿಂತಲೂ ಅಂಕಗಳನ್ನು ಗಳಿಸಿದ್ದರು. ಮೀಸಲಾತಿ ರಹಿತ ಶ್ರೇಣಿಯಲ್ಲಿ ಉತ್ತೀರ್ಣರಾದ 4.52 ಲಕ್ಷ ಮಂದಿಯಲ್ಲಿ ಶೇ.59ರಷ್ಟು ಮಂದಿ ಒಬಿಸಿ, ಎಸ್‌ಸಿ ಹಾಗೂ ಎಸ್‌ಟಿ ಗುಂಪುಗಳಿಗೆ ಸೇರಿದವರಾಗಿದ್ದಾರೆ. ಕೇವಲ 3.18 ಲಕ್ಷ ಮಂದಿ ಸಾಮಾನ್ಯ ಶ್ರೇಣಿಯ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹೊರತಾಗಿಯೂ ದೊಡ್ಡ ಸಂಖ್ಯೆಯ ಎಸ್‌ಸಿ, ಎಸ್‌ಟಿ , ಒಬಿಸಿ ಅಭ್ಯರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ಪ್ರೇಶವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಇಲ್ಲಿ ಸಮಸ್ಯೆಯಿರುವುದು ಮೀಸಲಾತಿಯದ್ದಲ್ಲ. ವೈದ್ಯಕೀಯ ಶಿಕ್ಷಣದ ವೆಚ್ಚದಲ್ಲಿ ಅಗಾಧವಾದ ಏರಿಕೆಯೇ ನಿಜವಾದ ಸಮಸ್ಯೆಯಾಗಿದೆ. ನೀಟ್ ಪರೀಕ್ಷೆಯು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಕೋಚಿಂಗ್ ಪಡೆಯುವುದು ಹೆಚ್ಚುಕಮ್ಮಿ ಕಡ್ಡಾಯವೆಂಬಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ರಾಜ್ಯ ಪರೀಕ್ಷಾ ಮಂಡಳಿ ಹಾಗೂ ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ಅಕ್ಷರಶಃ ಪ್ರತ್ಯೇಕವಾಗಿಸುವ ಮೂಲಕ ಅದು ತಾರತಮ್ಯದ ಧೋರಣೆಯನ್ನು ಪ್ರದರ್ಶಿಸುತ್ತಿವೆ. ವೈದ್ಯಕೀಯ ಸೀಟುಗಳ ಸಾಮರ್ಥ್ಯವೂ ಕೂಡಾ ಈಗಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಆದರೆ ಹೆಚ್ಚು ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಮೂಲಕ ವೈದ್ಯಕೀಯ ಶಿಕ್ಷಣವು ವೈಭವೀಕರಿಸಲ್ಪಡುವುದನ್ನು ಹಾಗೂ ದುಬಾರಿಯಾಗುವುದನ್ನು ತಡೆಗಟ್ಟಬಹುದಾಗಿದೆ. ವೈದ್ಯಕೀಯ ಶಿಕ್ಷಣದ ಮೇಲೆ ಸರಕಾರಿ ವೆಚ್ಚದ ಹೆಚ್ಚಳ ಹಾಗೂ ವಿಶೇಷವಾಗಿ ಉತ್ತರದ ರಾಜ್ಯಗಳಲ್ಲಿ ಆರೋಗ್ಯ ಮೂಲ ಸೌಕರ್ಯವನ್ನು ವಿಸ್ತರಿಸಬೇಕಾಗಿದೆ.

ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕಾಗಿದೆ ಹಾಗೂ ರಾಜ್ಯ ಪ್ರವೇಶಾತಿ ಪರೀಕ್ಷೆ ಅಥವಾ 12ನೇ ತರಗತಿಯ ಪರೀಕ್ಷೆಗಳ ಆಧಾರದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಒದಗಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ಓರ್ವ ಅಭ್ಯರ್ಥಿಯು ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಪರೀಕ್ಷೆ ಬರೆಯುವುದನ್ನು ಮೂರು ಸಲಕ್ಕೆ ಸೀಮಿತಗೊಳಿಸಬೇಕು. ಇದರಿಂದಾಗಿ ಕೋಚಿಂಗ್ ಸೆಂಟರ್‌ಗಳ ಪ್ರಭಾವವು ಸೀಮಿತಗೊಳ್ಳುತ್ತದೆ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣವು ಸಂಪೂರ್ಣವಾಗಿ ಬದಲಾವಣೆಯನ್ನು ಕಾಣಬೇಕಾಗಿದೆ. ನವೀನ್ ಮೃತ್ಯು ಹಾಗೂ ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡ ಘಟನೆಯು ಇದಕ್ಕೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಕೃಪೆ: scroll.com

Writer - ದಿಲೀಪ್ ಮಂಡಲ್

contributor

Editor - ದಿಲೀಪ್ ಮಂಡಲ್

contributor

Similar News