ಉಡುಪಿ: ಪಿಂಚಣಿ ಸಪ್ತಾಹ ಉದ್ಘಾಟನೆ

Update: 2022-03-07 15:02 GMT

ಉಡುಪಿ, ಮಾ.7: ಕಾರ್ಮಿಕ ಇಲಾಖೆ ಉಡುಪಿ ಮತ್ತು ಚಿನ್ನ ಬೆಳ್ಳಿ ಆಭರಣ ತಯಾರಿಕಾ ಕಾರ್ಮಿಕರು, ವ್ಯವಹಾರ ಕಾಂಪ್ಲೆಕ್ಸ್, ವಳಕಾಡು, ಉಡುಪಿ ಇವರ ಸಹಯೋಗದೊಂದಿಗೆ ವಳಕಾಡು ವ್ಯವಹಾರ ಕಾಂಪ್ಲೆಕ್ಸ್‌ನಲ್ಲಿ ಪಿಂಚಣಿ ಸಪ್ತಾಹ ಇಂದು ಉದ್ಘಾಟನೆಗೊಂಡಿತು. ಜೊತೆಗೆ ನೋಂದಣಿ ಶಿಬಿರವೂ ನಡೆಯಿತು.

ಉಡುಪಿಯ ಹಿರಿಯ ಸಿವಿಲ್ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಪಿಂಚಣಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, 18 ವರ್ಷದಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದರು.

ಅವರು ಆದಾಯ ತೆರಿಗೆ, ಇಎಸ್‌ಐ, ಪಿಎಫ್, ಎನ್‌ಪಿಎಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರಬಾರದು. 18 ವರ್ಷದ ಕಾರ್ಮಿಕರು 55 ರೂ. ಹಾಗೂ 40 ವರ್ಷದ ಕಾರ್ಮಿಕರು 200 ರೂ. ವಂತಿಕೆಯನ್ನು ಪ್ರತಿ ತಿಂಗಳು ಪಾವತಿಸುವ ವಂತಿಕೆಯ ಸಮಾನಂತರವಾಗಿ ಕೇಂದ್ರ ಸರಕಾರ ಪಾವತಿಸುತ್ತದೆ. ಫಲಾನುಭವಿಗೆ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3000 ರೂ.ಗಳ ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ ಎಂದು ಶರ್ಮಿಳಾ ನುಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯ ಮಹತ್ವವನ್ನು ತಿಳಿಸಿ, ಜಿಲ್ಲೆಯಲ್ಲಿ 7 ದಿನ ನಡೆಯುವ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಲ್ಲಾ ಅಸಂಘಟಿತ ಕಾರ್ಮಿಕರು ಯೋಜನೆ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ವಳಕಾಡು ವ್ಯವಹಾರ ಇಂಡಸ್ಟ್ರೀಸ್ ಮಾಲಕ ಅಲೆವೂರು ಸುಂದರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ನಿತೀಶ್, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಜಿಲ್ಲಾ ಅಧ್ಯಕ್ಷ ಕಿಶೋರ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News