ಗಂಗಾನದಿಯ ದಡ ಸೇರೀತೆ ಬಿಜೆಪಿಯ ನಾವೆ?

Update: 2022-03-09 17:10 GMT
ಸಾಂದರ್ಭಿಕ ಚಿತ್ರ

ಉತ್ತರಪ್ರದೇಶ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ತಲೆ ಮೇಲೆ ಗೆಲುವಿನ ಕಿರೀಟ ಇಟ್ಟು ಬಿಟ್ಟಿವೆ. ಈ ಸಮೀಕ್ಷೆಯನ್ನು ಪಕ್ಕಕ್ಕಿಟ್ಟು ಖಚಿತವಾಗಿ ನುಡಿಯಬಹುದಾದ ಭವಿಷ್ಯವೆಂದರೆ, ಬಿಜೆಪಿ ಮತ್ತು ಬಿಎಸ್‌ಪಿ ಕಳೆದ ಬಾರಿ ಗೆದ್ದ ಸ್ಥಾನಗಳಲ್ಲಿ ಬಹಳಷ್ಟನ್ನು ಕಳೆದುಕೊಳ್ಳಲಿವೆ, ಸಮಾಜವಾದಿ ಪಕ್ಷ ಮೈತ್ರಿಕೂಟ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿವೆ. ಕಾಂಗ್ರೆಸ್ ಆರಕ್ಕೇರದೆ ಮೂರಕ್ಕೆ ಇಳಿಯದೆ ಯಥಾಪ್ರಕಾರ ನಾಲ್ಕನೇ ಸ್ಥಾನದಲ್ಲಿ ಉಳಿಯಲಿದೆ. ಯಾವುದಾದರೂ ಒಂದು ಪಕ್ಷ ಸ್ವಂತ ಬಲದಿಂದ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಗೆದ್ದರೆ ಸರಕಾರ ರಚನೆಯ ಹಾದಿ ಸುಗಮ, ಯಾವ ಪಕ್ಷವೂ ಅಷ್ಟು ಸ್ಥಾನಗಳನ್ನು ಗೆಲ್ಲಲಾಗದೆ ಇದ್ದರೆ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಪಕ್ಷಕ್ಕೆ ಸರಕಾರ ರಚಿಸಲು ರಾಜ್ಯಪಾಲರಿಂದ ಆಹ್ವಾನ ಬರಬಹುದು. ಆಗ ಪಕ್ಷಾಂತರದ ಆಟ ಶುರುವಾಗಬಹುದು. ಚುನಾವಣೆಯ ಫಲಿತಾಂಶ ಏನೇ ಬಂದರೂ ಚುನಾವಣಾ ಕಣದಲ್ಲಿರುವ ಪಕ್ಷಗಳ ನಡುವೆ ನಡೆದಿರಬಹುದಾದ ಮತದಾರರ ಆಂತರಿಕ ವಲಸೆ ಬಗ್ಗೆ ಹೆಚ್ಚು ಚರ್ಚೆ ನಡೆಯಬಹುದು. ಮುಖ್ಯವಾಹಿನಿ ಪಕ್ಷಗಳಿಗಿಂತ ಅದೃಶ್ಯಮತದಾರರನ್ನೇ ಮತಬ್ಯಾಂಕ್‌ಗಳಾಗಿ ಮಾಡಿಕೊಂಡಿರುವ ಜಾತಿ ಆಧಾರಿತ ಪ್ರಾದೇಶಿಕ ಪಕ್ಷಗಳು ಮುಂದಿನ ದಿನಗಳಲ್ಲಿ ತಮ್ಮ ಚೌಕಾಶಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇಪ್ಪತ್ತು ವರ್ಷಗಳ ಹಿಂದೆ (2002) ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಅಲ್ಲಿನ ಅದೃಶ್ಯ ಮತದಾರರನ್ನು ಹುಡುಕಾಡಲು ನಾನು ತಲೆಕೆಡಿಸಿಕೊಂಡಿದ್ದೆ. ಆ ಚುನಾವಣೆಯಲ್ಲಿ ಬಿಜೆಪಿ ಧೂಳೀಪಟವಾಗಿತ್ತು ಬಿಜೆಪಿ ಶೇಕಡಾ ಹನ್ನೆರಡು, ಸಮಾಜವಾದಿ ಪಕ್ಷ ಶೇಕಡಾ ಐದು ಮತ್ತು ಬಿಎಸ್‌ಪಿ ಶೇಕಡಾ ಮೂರರಷ್ಟು ಮತಗಳನ್ನು ಕಳೆದುಕೊಂಡಿತ್ತು. ಈ ಮೂರೂ ಪಕ್ಷಗಳು ಕಳೆದುಕೊಂಡ ಶೇಕಡಾ 20ರಷ್ಟು ಮತಗಳು ಎಲ್ಲಿ ಹೋಗಿವೆ? ಈ ಪಕ್ಷಗಳ ಮತಬುಟ್ಟಿಯಿಂದ ಹೊರಜಿಗಿದ ಅದೃಶ್ಯ ಮತದಾರರು ಯಾರು? ಎನ್ನುವುದು ಆಗಿನ ಪ್ರಶ್ನೆಗಳಾಗಿತ್ತು.

ಭಾರತದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿ ನಮ್ಮ ರಾಜಕೀಯ ಪಕ್ಷಗಳು ತಮಗೊಂದು ಮತಬ್ಯಾಂಕ್ ಇವೆ ಎಂದು ನಂಬಿವೆ. ಆ ಮತಬ್ಯಾಂಕ್‌ನಲ್ಲಿ ತಮಗೆ ಕಣ್ಣುಮುಚ್ಚಿ ಮತಹಾಕುವ ತಮ್ಮದೇ ಜಾತಿ-ಧರ್ಮಗಳ ಮತದಾರರು ಇದ್ದಾರೆ ಎಂದು ಈ ರಾಜಕೀಯ ಪಕ್ಷಗಳು ಬಿಂಬಿಸುತ್ತಾ ಇರುತ್ತವೆ. ಈ ರಾಜಕೀಯ ಪಕ್ಷಗಳ ಬಲಾಬಲವನ್ನು ನಮ್ಮ ಚುನಾವಣಾ ಪಂಡಿತರು ಈ ಮತಬ್ಯಾಂಕಿನಿಂದಲೇ ಲೆಕ್ಕ ಹಾಕಲು ಶುರುಮಾಡುತ್ತಾರೆ.

ಉದಾಹರಣೆಗೆ ಉತ್ತರಪ್ರದೇಶದಲ್ಲಿ ಶೇಕಡಾ 21ರಷ್ಟಿರುವ ಪರಿಶಿಷ್ಟ ಜಾತಿಯವರನ್ನು ಬಿಎಸ್‌ಪಿ, ಶೇಕಡಾ 20.5ರಷ್ಟಿರುವ ಬ್ರಾಹ್ಮಣ-ಬನಿಯಾ-ಠಾಕೂರು ಮೇಲ್ಜಾತಿ ಜನರನ್ನು ಬಿಜೆಪಿ, ಶೇಕಡಾ 8.7ರಷ್ಟಿರುವ ಯಾದವ್ ಮತ್ತು ಶೇಕಡಾ 20ರಷ್ಟಿರುವ ಮುಸ್ಲಿಮರನ್ನು ಸಮಾಜವಾದಿ ಪಕ್ಷ ಹಾಗೂ ಶೇಕಡಾ 1.22ರಷ್ಟಿರುವ ಜಾಟರನ್ನು ರಾಷ್ಟ್ರೀಯ ಲೋಕದಳ, ತಮ್ಮ ಬುಟ್ಟಿಗಳಲ್ಲಿರುವ ಮತದಾರರು ಎಂದು ಕಳೆದ 25-30 ವರ್ಷಗಳಿಂದ ಹೇಳುತ್ತಾ ಬಂದಿವೆ.

 ಈ ಎಲ್ಲ ಜಾತಿಗಳ ಒಟ್ಟು ಜನಸಂಖ್ಯಾ ಪ್ರಮಾಣ ಶೇಕಡಾ 66.42. ಹಾಗಿದ್ದರೆ ಉಳಿದ ಶೇಕಡಾ 33.58ರಷ್ಟು ಜನರು ಯಾರು? ಈ ಅದೃಶ್ಯ ಮತದಾರರ ಮತಬುಟ್ಟಿಯತ್ತ ಮೊದಲು ಕಣ್ಣು ಹಾಕಿದವರು ದಿವಂಗತ ಎಚ್.ಎನ್.ಬಹುಗುಣ. 1975ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಬಹುಗುಣ ‘ಸರ್ವಾಧಿಕ ಪಿಚ್ಡಾ ವರ್ಗ ಆಯೋಗ’ ರಚಿಸಿದ್ದರು. ಆ ಆಯೋಗ 1977ರಲ್ಲಿ ವರದಿ ಸಲ್ಲಿಸಿತ್ತು. ಅದು ಹಿಂದುಳಿದ ಜಾತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ ಹಿಂದುಳಿದ ಜಾತಿಗಳಿಗೆ ಶೇಕಡಾ 20, ಅತಿಹಿಂದುಳಿದ ಜಾತಿಗಳಿಗೆ ಶೇಕಡಾ 26, ಹಿಂದುಳಿದ ಮುಸ್ಲಿಮರಿಗೆ ಶೇಕಡಾ 2.5 ಒಳ ಮೀಸಲಾತಿಯನ್ನು ಶಿಫಾರಸು ಮಾಡಿತ್ತು. ಆ ವರದಿ ಅನುಷ್ಠಾನಕ್ಕೆ ಯಾದವ ಸಮುದಾಯದಿಂದ ವಿರೋಧ ವ್ಯಕ್ತವಾದ ಕಾರಣ ಬಹುಗುಣ ನಂತರ ಮುಖ್ಯಮಂತ್ರಿಯಾಗಿದ್ದ ನರೇಶ್ ಯಾದವ್ ತಿರಸ್ಕರಿಸಿದ್ದರು.

 ಮತ್ತೆ ಈ ಒಳಮೀಸಲಾತಿ ಚರ್ಚೆಗೆ ಬಂದದ್ದು ಮಂಡಲ್ ಆಯೋಗ ರಚನೆಯಾದಾಗ. ಮಂಡಲ್ ಆಯೋಗದ ಸದಸ್ಯರಾಗಿದ್ದ ಎಲ್.ಆರ್. ನಾಯಕ್ ಹಿಂದುಳಿದ ಜಾತಿಗಳನ್ನು ಹಿಂದುಳಿದ ಮತ್ತು ಅತಿಹಿಂದುಳಿದ ಜಾತಿಗಳೆಂದು ವಿಂಗಡಿಸಿ ಒಳಮೀಸಲಾತಿ ನೀಡಬೇಕೆಂದು ಪ್ರತಿಪಾದಿಸಿದ್ದರು. ಆಯೋಗ ಒಪ್ಪದೇ ಇದ್ದಾಗ ನಾಯಕ್ ತಮ್ಮ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು. ಮಂಡಲ್ ಆಯೋಗದ ವರದಿಯಲ್ಲಿರುವ ಏಕೈಕ ಭಿನ್ನಾಭಿಪ್ರಾಯ ಎಲ್.ಆರ್.ನಾಯಕ್ ಅವರದ್ದು.

ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಇದೇ ಅತಿಹಿಂದುಳಿದ ಜಾತಿಗಳ ಮೀಸಲಾತಿ ಮೂಲಕ ಮುಲಾಯಂ ಸಿಂಗ್ ಯಾದವ್ ಅವರ ಬಾಲ ಕತ್ತರಿಸಲು ಹೊರಟಿದ್ದರು. ಆದರೆ ಪ್ರತಿರೋಧದಿಂದಾಗಿ ಅವರಿಗೆ ಸಾಧ್ಯವಾಗಿರಲಿಲ್ಲ.

2002ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಈ ಅದೃಶ್ಯ ಮತದಾರರ ಮುಖಗಳು ಕಾಣಿಸಿಕೊಂಡಿದ್ದವು. ಈ ಮುಖ ದರ್ಶನ ಮಾಡಿಸಿದವರು ಬಾಬರಿ ಮಸೀದಿ ಧ್ವಂಸ ಪ್ರಕರಣದ ಮುಖ್ಯ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್. 2002ರಲ್ಲಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಜೊತೆಗಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಕೊನೆಗೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರು 2002ರಲ್ಲಿ ರಾಷ್ಟ್ರೀಯ ಕ್ರಾಂತಿ ಪಕ್ಷ ಕಟ್ಟಿ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇವರ ಜೊತೆಯಲ್ಲಿಯೇ ಸೋನೆಲಾಲ್ ಪಟೇಲ್ ಎಂಬ ಕುರ್ಮಿ ಸಮುದಾಯದ ನಾಯಕ ಶೇಕಡಾ ಮೂರುವರೆಯಷ್ಟು ಜನಸಂಖ್ಯೆ ಇರುವ ಕುರ್ಮಿಗಳನ್ನು ಸಂಘಟಿಸಿ ಅಪ್ನಾ ದಳ್ ಎಂಬ ರಾಜಕೀಯ ಪಕ್ಷವನ್ನು ಕಟ್ಟಿ ಚುನಾವಣಾ ರಾಜಕೀಯಕ್ಕೆ ಇಳಿದಿದ್ದರು. 2002ರ ಚುನಾವಣೆಯ ಕಾಲದಲ್ಲಿ ನನಗೆ ಮಾತಿಗೆ ಸಿಕ್ಕಿದ್ದ ಸೋನೆಲಾಲ್ ಪಟೇಲ್ ‘‘ನಮ್ಮ ಗುರಿ ಮುಂದಿನ ವಿಧಾನಸಭಾ ಚುನಾವಣೆ, ಇದು ಬರೀ ಸೆಮಿ ಫೈನಲ್’’ ಎಂದು ಹೇಳಿದ್ದರು. ತಮ್ಮ ಮಾತನ್ನು ಸಮರ್ಥಿಸಿಕೊಳ್ಳುತ್ತಾ 1985ರಲ್ಲಿ ಎಲ್ಲ ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಿ ಎಲ್ಲ ಕಡೆ ಠೇವಣಿ ಕಳೆದುಕೊಂಡು ಬಿಎಸ್‌ಪಿ ರಾಜಕೀಯವನ್ನು ಉದಾಹರಿಸಿದ್ದರು. ತನ್ನ ರಾಜಕೀಯ ನಡೆ ಬಗ್ಗೆ ಸ್ಪಷ್ಟತೆ ಇದ್ದ ಸೋನೆಲಾಲ್ ಪಟೇಲ್, ಒಂದೆಡೆ ಬಿಎಸ್‌ಪಿ ಉಚ್ಚಾಟಿಸಿದ ಅತೀಕ್ ಅಹ್ಮದ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಸ್ಲಿಮ್ ಮತದಾರರನ್ನು ಸೆಳೆಯತೊಡಗಿದ್ದರೆ ಇನ್ನೊಂದೆಡೆ ಮೌರ್ಯ, ಗುಜ್ಜರ್, ನಿಷಾದ್, ಲೋಹರ್, ಫ್ಹಾಸಿ, ತೇಲಿ, ಗಡೇರಿಯಾ ಮೊದಲಾದ ಜಾತಿಗಳನ್ನು ಸಂಘಟಿಸಲು ತೊಡಗಿದ್ದರು.

 ರಾಜ್ಯದ ಜಾತಿಗಳೊಳಗೆ ನಡೆಯುತ್ತಿರುವ ಸಂಚಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಗೆಲುವಿಗೆ ದಾರಿಯೊಂದು ಗೋಚರವಾಗಿತ್ತು. ಆಗಲೇ ಸಾರ್ವಜನಿಕ ಸಭೆ-ಮೆರವಣಿಗೆಗಳಲ್ಲಿ ಹಿಂದೂಗಳಾದ ನಾವೆಲ್ಲ ಒಂದು ಎಂದು ಆರ್ಭಟಿಸುವ ಈ ಪಕ್ಷ ಆಂತರಿಕವಾಗಿ ನಡೆಯುವ ಚಿಂತನಾ ಬೈಠಕ್‌ಗಳ ಮೂಲಕ ಸೋಷಿಯಲ್ ಇಂಜಿನಿಯರಿಂಗ್ ಪ್ರಯೋಗ ಶುರುಮಾಡಿತ್ತು.

2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 39.4ರಷ್ಟು ಮತಗಳಿಸಿ 312 ಸ್ಥಾನಗಳನ್ನು ಗೆದ್ದು ಬೀಗಲು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣ ಕಾರಣ ಎಂದು ಬಹಳಷ್ಟು ಜನ ನಂಬಿದ್ದಾರೆ. ಆ ಕಾರಣ ಹೌದಾದರೂ ಅದೊಂದೇ ಕಾರಣ ಅಲ್ಲ. ಬಿಜೆಪಿ ಗೆಲುವಿಗೆ ಮುಖ್ಯ ಕಾರಣ ಆ ಪಕ್ಷದ ಕಾರ್ಯತಂತ್ರ ನಿಪುಣರು ಬಹಳ ಜಾಣ್ಮೆಯಿಂದ ರಾಜ್ಯದಲ್ಲಿನ ಜಾತಿ ಆಧಾರಿತ ಪಕ್ಷಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ನಡೆಸಿದ್ದ ಕಾರ್ಯಾಚರಣೆ.

ಉತ್ತರಪ್ರದೇಶದಲ್ಲಿ ಹಿಂದುಳಿದ ಜಾತಿಗಳು ಶೇಕಡಾ 40ರಿಂದ 45ರಷ್ಟಿದ್ದರೆ ಇವುಗಳಲ್ಲಿ ಯಾದವ ಜಾತಿಯನ್ನು ಹೊರತುಪಡಿಸಿದ ಹಿಂದುಳಿದ ಜಾತಿಗಳಾದ ಲೋಧ್, ರಾಜಭರ್ ನಿಷಾದ್, ಕುರ್ಮಿ, ಕೊಯಿರಿ, ಸೈನಿ ಕುಶ್ಹಾಹ, ನೋನಿಯಾ, ಕಶ್ಯಪ್, ಮೊದಲಾದ ಸಣ್ಣ ಹಿಂದುಳಿದ ಜಾತಿಗಳು ಶೇಕಡಾ 30-35ರಷ್ಟಿವೆ. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಜೊತೆಯಿದ್ದ ಅತಿಹಿಂದುಳಿದ ಜಾತಿಗಳಲ್ಲಿ ಬಹಳಷ್ಟು ಜಾತಿಗಳು ಕಾನ್ಶಿರಾಮ್ ಪ್ರವೇಶದ ನಂತರ ಬಿಎಸ್‌ಪಿಯನ್ನು ಬೆಂಬಲಿಸಿದ್ದವು. ಸಮಾಜವಾದಿ ಪಕ್ಷದ ಜೊತೆಯಲ್ಲಿನ ಯಾದವೇತರ ಹಿಂದುಳಿದ ಜಾತಿಗಳ ಜೊತೆಯಲ್ಲಿ ಕಾನ್ಶಿರಾಮ್ ನಿಧನ ನಂತರ ಬಿಎಸ್‌ಪಿ ಬುಟ್ಟಿಯಲ್ಲಿದ್ದ ಹಿಂದುಳಿದ ಜಾತಿಗಳನ್ನು ಮಾತ್ರವಲ್ಲ, ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 46ರಷ್ಟಿರುವ ಜಾಟವೇತರ ಪರಿಶಿಷ್ಟ ಜಾತಿಗಳಾದ ಫಾಸಿ, ದೋಬಿ, ಕೋರಿ, ಖಟ್ಕಿ, ಧನುಕ್ಸ್ ಮೊದಲಾದ ಜಾಟವೇತರ ದಲಿತರನ್ನು ಕೂಡಾ ಬಿಜೆಪಿ ವ್ಯವಸ್ಥಿತವಾಗಿ ಸೆಳೆದುಕೊಂಡಿತ್ತು. ಮೀಸಲು ಕ್ಷೇತ್ರಗಳಲ್ಲದೆ ಪರಿಶಿಷ್ಟಜಾತಿಯ ಜನಸಂಖ್ಯೆಯ ಶೇಕಡಾ 25ರಷ್ಟು ಇರುವ 17 ಜಿಲ್ಲೆಗಳು ಆ ರಾಜ್ಯದಲ್ಲಿವೆ. 2017ರ ವಿಧಾನಸಭಾ ಚುನಾವಣೆಯ ಬಿಜೆಪಿ ಗೆಲುವಿಗೆ ಪಶ್ಚಿಮ ಉತ್ತರಪ್ರದೇಶದಲ್ಲಿ ಮುಝಫ್ಫರ್ ನಗರದ ಗಲಭೆಯಿಂದ ನಡೆದಿದ್ದ ಕೋಮು ಧ್ರುವೀಕರಣ ಕಾರಣವಾದರೆ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಅತಿಹಿಂದುಳಿದ ಜಾತಿಗಳು ಮತ್ತು ಅತಿಹಿಂದುಳಿದ ದಲಿತರ ಬೆಂಬಲ ಕಾರಣ.

 ಬ್ರಾಹ್ಮಣ-ಬನಿಯಾ ಪಾರ್ಟಿ ಎಂದು ಹೇಳಲಾಗುತ್ತಿದ್ದ ಬಿಜೆಪಿ ಬಗೆಗಿನ ಸಾರ್ವಜನಿಕ ಅಭಿಪ್ರಾಯ ಬದಲಾಯಿಸಲು ನರೇಂದ್ರಮೋದಿಯವರು ಹಿಂದುಳಿದ ಗಾಣಿಗ ಜಾತಿಗೆ ಸೇರಿದವರೆನ್ನುವುದನ್ನು ಪಕ್ಷ ಪಿಸುಮಾತಿನಲ್ಲಿ ಪ್ರಚಾರ ಕೂಡಾ ನಡೆಸಿತ್ತು. 2017ರ ವಿಧಾನಸಭಾ ಚುನಾವಣೆಯ ಅನೇಕ ಸಾರ್ವಜನಿಕ ಸಭೆಗಳಲ್ಲಿ ತಾನು ಅತಿಹಿಂದುಳಿದ ಗಾಣಿಗ ಸಮಾಜದಿಂದ ಬಂದವನೆಂದು ಮೋದಿಯವರೇ ಹೇಳಿಕೊಂಡಿದ್ದರು.  ಈ ಕಾರ್ಯತಂತ್ರದ ಭಾಗವಾಗಿಯೇ 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾದವರ ನಂತರದ ದೊಡ್ಡ ಹಿಂದುಳಿದ ಜಾತಿಯಾದ ಕುರ್ಮಿ ಜಾತಿಯ ನಾಯಕ ಸೋನೆಲಾಲ್ ಸ್ಥಾಪಿಸಿದ್ದ ಅಪ್ನಾದಳ, ಪೂರ್ವ ಉತ್ತರಪ್ರದೇಶದಲ್ಲಿ ರಾಜಕೀಯವಾಗಿ ನಿರ್ಣಾಯಕರಾಗಿರುವ ರಾಜಭರ್ ಸಮುದಾಯದ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಹಾಗೂ ಕುಶ್ಹಾಹ, ಮಲ್ಲ ಸಮುದಾಯದಲ್ಲಿ ಪ್ರಭಾವಿಯಾಗಿರುವ ನಿಷಾದ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಅಪ್ನಾದಳ ಒಂಭತ್ತು, ಎಸ್‌ಬಿಎಸ್‌ಪಿ ನಾಲ್ಕು ಮತ್ತು ಒಂದು ಸ್ಥಾನಗಳನ್ನು ಗೆದ್ದಿದ್ದವು. ಗೆದ್ದ ಸ್ಥಾನಗಳಿಂದಾದ ಲಾಭಕ್ಕಿಂತಲೂ ರಾಜ್ಯದಾದ್ಯಂತ ಹರಡಿಕೊಂಡಿರುವ ಈ ಯಾದವೇತರ ಹಿಂದುಳಿದ ಜಾತಿಗಳ ಮತಗಳು ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ನೆರವಾಯಿತು. ಇದರ ಜೊತೆ ಬಿಎಸ್ ಪಿಯ ಜಾಟವೇತರ ದಲಿತ ಜಾತಿಗಳನ್ನು ಕೂಡಾ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 2017ರ ಚುನಾವಣೆಯಲ್ಲಿ ಒಟ್ಟು 85 ಮೀಸಲು ಕ್ಷೇತ್ರಗಳ ಪೈಕಿ 72 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು.

 ಬಿಜೆಪಿಯ ಈ ಸೋಷಿಯಲ್ ಇಂಜಿನಿಯರಿಂಗ್‌ನಿಂದ ಹೊಡೆತ ತಿಂದಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಬಹಳ ಬೇಗ ಎಚ್ಚೆತ್ತುಕೊಂಡಿದ್ದರು. ಪಶ್ಚಿಮ ಉತ್ತರಪ್ರದೇಶದಲ್ಲಿ ಪ್ರಭಾವಶಾಲಿಯಾಗಿರುವ ಜಾಟರ ಪಕ್ಷವಾದ ಆರ್‌ಎಲ್‌ಡಿ ಜೊತೆ ಮತ್ತು ಪೂರ್ವ ಉತ್ತರಪ್ರದೇಶದ ಸುಮಾರು 120 ಕ್ಷೇತ್ರಗಳಲ್ಲಿ ಪ್ರಭಾವಶಾಲಿಯಾಗಿರುವ ರಾಜಭರ್ ಸಮುದಾಯದ ಎಸ್‌ಬಿಎಸ್‌ಪಿ ಜೊತೆ ಕಳೆದ ವರ್ಷದ ಕೊನೆಯಲ್ಲಿ ಮೈತ್ರಿ ಮಾಡಿಕೊಂಡು ಘೋಷಿಸಿ ಬಿಟ್ಟರು. ಅಪ್ನಾದಳದ ಸ್ಥಾಪಕ ಸದಸ್ಯ ಸೋನೆಲಾಲ್ ಪತ್ನಿ ಮೂಲ ಪಕ್ಷದಿಂದ ಹೊರಬಂದು ತನ್ನದೇ ಪಕ್ಷ ಕಟ್ಟಿದಾಗ ಆ ಪಕ್ಷವನ್ನು ಕೂಡಾ ತನ್ನ ಮೈತ್ರಿಕೂಟಕ್ಕೆ ಸೇರಿಸಿಕೊಂಡರು.

ಚುನಾವಣಾ ಫಲಿತಾಂಶದ ಬಗ್ಗೆ ಮತಗಟ್ಟೆ ಸಮೀಕ್ಷೆಗಳು ನೋಡಿದರೆ ಸಮಾಜವಾದಿ ಪಕ್ಷದ ಅಖಿಲೇಶ್ ಸಿಂಗ್ ಸಾಕಷ್ಟು ಎಚ್ಚರಿಕೆಯ ನಡೆಗಳಿಂದ ತನ್ನ ಪಕ್ಷದ ಹಳೆಯ ಮತಬ್ಯಾಂಕಿನಿಂದ ಸೋರಿಹೋದ ಅತಿಹಿಂದುಳಿದ ಜಾತಿಗಳ ಮತಗಳಲ್ಲಿ ಒಂದಷ್ಟನ್ನು ಮರಳಿ ಪಡೆಯಲು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು. ಇದೇ ಮಾತನ್ನು ಬಿಎಸ್‌ಪಿ ಬಗ್ಗೆ ಹೇಳುವ ಹಾಗಿಲ್ಲ. ಮಾಯಾವತಿಯವರಿಗೆ ಜಾಟವೇತರ ಮತಗಳನ್ನು ಉಳಿಸಿಕೊಳ್ಳಲು ಸಾಧ್ಯವಾದಂತಿಲ್ಲ. ಗಂಗಾನದಿಯಲ್ಲಿ ಮುಳುಗುತ್ತಿದ್ದ ಬಿಜೆಪಿ ನಾವೆ ಮತಗಟ್ಟೆ ಸಮೀಕ್ಷೆ ಹೇಳಿರುವ ರೀತಿಯಲ್ಲಿ ಕಷ್ಟಪಟ್ಟು ದಡ ಸೇರಿದರೆ ಅದಕ್ಕೆ ಕೊರೋನೋತ್ತರ ದಿನಗಳಲ್ಲಿ ರಾಜ್ಯ ಸರಕಾರ ಪ್ರಾರಂಭಿಸಿದ ಉಚಿತ ಆಹಾರಧಾನ್ಯ ವಿತರಣೆ ಮತ್ತು ಶಾಂತಿ ಮತ್ತು ಸುವ್ಯವಸ್ಥೆಯ ಸುಧಾರಣೆಯ ಪ್ರಚಾರದ ಜೊತೆ ಬಿಎಸ್‌ಪಿಯಿಂದ ವಲಸೆಬಂದ ಮತಗಳು ಕೂಡಾ ನೆರವಾಗಿರಬಹುದೆಂದು ಹೇಳಬೇಕಾಗುತ್ತದೆ.

ಬಿಜೆಪಿ ಅಪ್ನಾದಳ(ಸೋನೇಲಾಲ್) ಮತ್ತು ನಿಷಾದ್ ಪಕ್ಷಗಳ ಜೊತೆಗಿನ ಮೈತ್ರಿಯನ್ನು ಉಳಿಸಿಕೊಂಡದ್ದಲ್ಲದೆ ಸುಮಾರು ಆರೇಳು ಸಣ್ಣಪುಟ್ಟ ಜಾತಿಗಳ ಸಂಘಟನೆಗಳ ಜೊತೆ ಮೈತ್ರಿ ಮಾಡಿಕೊಂಡಿತು. ಕಳೆದ ಏಳು ಹಂತದ ಚುನಾವಣೆಯ ಪ್ರಚಾರವನ್ನು ಗಮನಿಸಿದರೆ ಬಿಜೆಪಿ ಹಿಂದೆಲ್ಲ ಮಾಡಿಕೊಂಡು ಬಂದಂತೆ ಹಿಂದುತ್ವದ ರಾಜಕಾರಣವನ್ನು ಪ್ರಚಾರದ ಪ್ರಮುಖ ವಿಷಯವನ್ನಾಗಿ ಕೊನೆಗೂ ಮಾಡಿಲ್ಲ ನಿಜ. ಮೊದಲ ಮೂರು ಸುತ್ತಿನ ಮತದಾನ ನಡೆದ ನಂತರ ಬಿಜೆಪಿ ಸಂಪೂರ್ಣವಾಗಿ ಅತಿಹಿಂದುಳಿದ ಮತ್ತು ದಲಿತ ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಆ ಸಮುದಾಯದ ನಾಯಕರ ಮೂಲಕ ತಳಮಟ್ಟದಲ್ಲಿ ಪ್ರಚಾರ ನಡೆಸಿದೆ.

Writer - ದಿನೇಶ್ ಅಮಿನ್ ಮಟ್ಟು

contributor

Editor - ದಿನೇಶ್ ಅಮಿನ್ ಮಟ್ಟು

contributor

Similar News