ಮಾ.12: ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಚಾಲನೆ

Update: 2022-03-11 14:28 GMT

ಉಡುಪಿ, ಮಾ.11: ರಾಜ್ಯ ಸರಕಾರ ಕಂದಾಯ ಇಲಾಖೆಯ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್/ ಹಿಸ್ಸೆ ಸ್ಕೆಚ್, ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಶನಿವಾರ ರಾಜ್ಯಾದ್ಯಂತ ಚಾಲನೆ ನೀಡಲಾಗುವುದು. ರಾಜ್ಯ ಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯೋಜನೆಗೆ ಚಾಲನೆ ನೀಡುವರು.

ಉಡುಪಿ ಜಿಲ್ಲೆಯಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದಲ್ಲಿ ನೀಡಲಾಗುತ್ತದೆ. ಪ್ರತಿ ತಾಲೂಕು ಮಟ್ಟದಲ್ಲೂ ಈ ಯೋಜನೆಗೆ ಶಾಸಕರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.

ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ವ್ಯಾಪ್ತಿಯಲ್ಲಿರುವ ಕುಟುಂಬಗಳ ಮನೆಗಳಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಿ ಕಂದಾಯ ದಾಖಲೆಗಳನ್ನು ವಿತರಿಸಲಾಗುತ್ತದೆ. ಬಳಿಕ ತೆಂಕನಿಡಿಯೂರು ಗ್ರಾಪಂ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಉಳಿದಂತೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮ, ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮ, ಕಾರ್ಕಳ ತಾಲೂಕಿನ ಕುಕ್ಕುಂದೂರು, ಹೆಬ್ರಿ ತಾಲೂಕಿನ ಹೆಬ್ರಿ, ಕುಂದಾಪುರ ತಾಲೂಕಿನ ಕರ್ಕುಂಜೆ ಹಾಗೂ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದರು.

6.60 ಲಕ್ಷ ಪಹಣಿ: ಉಡುಪಿ ಜಿಲ್ಲೆಯಲ್ಲಿ ‘ಫ್ರುಟ್ಸ್’ ಆ್ಯಪ್‌ನಲ್ಲಿ ಹೆಸರು ನೊಂದಾಯಿಸಿಕೊಂಡ ಒಟ್ಟು 1,73,979 ರೈತರಿಗೆ 6,61,230 ಪಹಣಿ, 13,10,481 ಜಾತಿ ಪ್ರಮಾಣ ಪತ್ರ, 8,01,851 ಆದಾಯ ಪ್ರಮಾಣ ಪತ್ರ ಹಾಗೂ 4,62,861ಅಟ್ಲಾಸ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ‘ಫ್ರುಟ್ಸ್’ ಆ್ಯಪ್‌ನಲ್ಲಿ ಹೆಸರು ನೊಂದಾಯಿಸಿಕೊಂಡ ಒಟ್ಟು 1,73,979 ರೈತರಿಗೆ 6,61,230 ಪಹಣಿ, 13,10,481 ಜಾತಿ ಪ್ರಮಾಣ ಪತ್ರ, 8,01,851 ಆದಾಯ ಪ್ರಮಾಣ ಪತ್ರ ಹಾಗೂ 4,62,861ಅಟ್ಲಾಸ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಇವುಗಳಲ್ಲಿ 3,79,824 ಪಹಣಿ, 2,13,081 ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ 25,081 ಅಟ್ಲಾಸ್‌ಗಳ ಮುದ್ರಣ ಮುಗಿದಿದ್ದು, ಇವುಗಳನ್ನು ಕುಟುಂಬವಾರು ಜೋಡಿಸಿ ಸರಕಾರದಿಂದ ನೀಡಲಾಗುತ್ತಿರುವ ಲಕೋಟೆಗೆ ಹಾಕಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 267 ಗ್ರಾಮಗಳಲ್ಲಿರುವ ರೈತರ ಮನೆ ಮನೆಗೆ ತೆರಳಿ ವಿತರಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ದಾಖಲೆಗಳು ಮುದ್ರಣವಾಗದ ಹಾಗೂ ಇನ್ನೂ ದಾಖಲೆಗಳನ್ನು ನೀಡದ ರೈತರಿಗೆ ಅವುಗಳನ್ನು ನೀಡಲು ಮಾ.21ರಿಂದ 26ರವರೆಗೆ ಒಂದು ವಾರ ಕಾಲ ತಾಲೂಕು ಕಚೇರಿ, ನಾಡ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿಗಳಲ್ಲಿ ನೀಡಿ ಉಚಿತವಾಗಿ ದಾಖಲೆಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು. ವಿತರಿಸಿದ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಡಾಗುವುದು ಎಂದರು.

ಬ್ರಹ್ಮಾವರದಲ್ಲಿ: ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಕನ್ನಾರುಕೋಡಿ ಯಲ್ಲಿ ಮಾ.12ರ ಬೆಳಗ್ಗೆ 11ಗಂಟೆಗೆ ಪರಿಶಿಷ್ಟ ಪಂಗಡದ ರೈತರಿಗೆ ಕಂದಾಯ ದಾಖಲೆಗಳನ್ನು ನೀಡುವ ಮೂಲಕ ಉಡುಪಿ ಶಾಸಕ ರಘುಪತಿ ಭಟ್ ಚಾಲನೆ ನೀಡಲಿದ್ದಾರೆ.

ಇನ್ನುಳಿದ ಕಂದಾಯ ಗ್ರಾಮಗಳಲ್ಲಿ ಆಯಾ ಗ್ರಾಮದ ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರ ಮೂಲಕ ಈ ಯೋಜನೆಯನ್ನು ಎಲ್ಲಾ ರೈತ ಕುಟುಂಬಗಳಿಗೆ ತಲುಪಿಸಲಾಗುತ್ತದೆ.ಈ ದಿನದಂದು ದಾಖಲೆಗಳನ್ನು ಪಡೆಯದ ರೈತರಿಗೆ ಮಾ.21ರಿಂದ 26ರ ಒಳಗೆ ಮನೆಗೆ ತಲುಪಿಸಲಾಗುವುದು ಎಂದು ಬ್ರಹ್ಮಾವರ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News