ಕೊರೋನ ಮುಕ್ತ ಜಿಲ್ಲೆಯಾಗುವತ್ತ ಉಡುಪಿ ದಾಪುಗಾಲು: ಡಿಸಿ ಕೂರ್ಮಾರಾವ್

Update: 2022-03-11 14:47 GMT
ಡಿಸಿ ಕೂರ್ಮಾರಾವ್

ಉಡುಪಿ, ಮಾ.11: ಸತತ ಮೂರನೇ ದಿನವಾದ ಇಂದು ಸಹ ಜಿಲ್ಲೆಯಲ್ಲಿ ಯಾರಲ್ಲೂ ಕೋವಿಡ್-19 ಸೋಂಕು ಪತ್ತೆಯಾಗದ ಕಾರಣ ಹಾಗೂ ಸದ್ಯಕ್ಕೆ ಜಿಲ್ಲೆಯಲ್ಲಿ 30ರಷ್ಟು ಮಾತ್ರ ಸೋಂಕಿತರು ಇರುವ ಕಾರಣ ಜಿಲ್ಲೆ ಕೊರೋನ ಮುಕ್ತ ಜಿಲ್ಲೆಯಾಗುವತ್ತ ದಾಪುಗಾಲು ಹಾಕುತ್ತಿದೆ.

ಈ ಕುರಿತು ಇಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರನ್ನು ಪ್ರಶ್ನಿಸಿದಾಗ, ಹೌದು ಜಿಲ್ಲೆಯಲ್ಲಿ ಕೊರೋನ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸತತ ಮೂರು ದಿನಗಳಿಂದ ಪಾಸಿಟಿವ್ ಶೂನ್ಯವಾಗಿದ್ದು, ಅದಕ್ಕೆ ಹಿಂದಿನ ಒಂದು ವಾರದಿಂದ ಪಾಸಿಟಿವ್ ಸಂಖ್ಯೆ ಒಂದಂಕಿಗೆ ಇಳಿದಿದೆ. ಸದ್ಯ ಜಿಲ್ಲೆಯಲ್ಲಿ 30ರಷ್ಟಿರುವ ಸಕ್ರಿಯ ಪ್ರಕರಣಗಳು ರೋಗಮುಕ್ತವಾದರೆ ಜಿಲ್ಲೆ ಕೊರೋನ ಮುಕ್ತಗೊಳ್ಳಲಿದೆ ಎಂದರು.

ಎರಡನೇ ಡೋಸ್ ಲಸಿಕೆ ಪಡೆಯಿರಿ: ಇದಕ್ಕಾಗಿ ಜಿಲ್ಲೆಯ ಜನತೆಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಾವು ಧನ್ಯವಾದ ಹೇಳಬೇಕು ಎಂದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಜನತೆ ಕೋವಿಡ್‌ ಗಿರುವ ಎರಡನೇ ಡೋಸ್ ಲಸಿಕೆಯನ್ನು ತಪ್ಪದೇ, ಸಾಧ್ಯವಿದ್ದಷ್ಟು ಬೇಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆಯನ್ನು ಶೇ.100ಕ್ಕಿಂತ ಅಧಿಕ ಮಂದಿ ಪಡೆದಿದ್ದಾರೆ. ಆದರೆ ಎರಡನೇ ಡೋಸ್ ಲಸಿಕೆಯನ್ನು ಒಟ್ಟು ಗುರಿಯಾದ 9,99,000 ಮಂದಿಯಲ್ಲಿ 9,20,081 (ಶೇ.92.10) ಮಂದಿ ಮಾತ್ರ ಪಡೆದಿದ್ದಾರೆ. ಇನ್ನೂ 79,000ದಷ್ಟು ಮಂದಿ ಈ ಲಸಿಕೆಯನ್ನು ಪಡೆದು ಕೊಂಡಿಲ್ಲ. ಅವರಲ್ಲಿ ಲಸಿಕೆ ಪಡೆಯಲು ಅವಧಿ ಮುಗಿದವರು ಅಧಿಕ ಮಂದಿ ಯಿದ್ದಾರೆ. ಅವರು ಕೂಲೇ ಲಸಿಕೆ ಪಡೆದು ಜಿಲ್ಲೆ ಕೋವಿಡ್ ಮುಕ್ತಗೊಳ್ಳಲು ಸಹಕರಿಸಬೇಕು ಎಂದರು.

ಅದೇ ರೀತಿ 15ರಿಂದ 18 ವಯೋಮಿತಿಯೊಳಗಿನವರಲ್ಲೂ ಮೊದಲೆರಡು ಲಸಿಕೆಯ ಸಾಧನೆ ಶೇ.90.24 ಹಾಗೂ 79.29 ಆಗಿದ್ದು, ಇವರೂ ತ್ವರಿತವಾಗಿ ಲಸಿಕೆ ಪಡೆಯಬೇಕು. ಇದಕ್ಕಾಗಿ ವಿಶೇಷ ಲಸಿಕಾ ಮೇಳ ಆಯೋಜಿಸಲಾಗುವುದು ಎಂದರು.

1565 ಮಂದಿಯಲ್ಲಿ ಶೂನ್ಯ: ಶುಕ್ರವಾರ ಜಿಲ್ಲೆಯ 1565 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಉಡುಪಿ ತಾಲೂಕಿನಲ್ಲಿ 1332 ಮಂದಿ, ಕುಂದಾಪುರ ತಾಲೂಕಿನಲ್ಲಿ 140 ಹಾಗೂ ಕಾರ್ಕಳ ತಾಲೂಕಿನಲ್ಲಿ 93 ಮಂದಿಗೆ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗಿದೆ.

ದಿನದಲ್ಲಿ ಒಬ್ಬರು ಮಾತ್ರ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ31ಕ್ಕಿಳಿದಿದೆ. ಕೊರೋನದಿಂದ ಜ.1ರ ನಂತರ ಪಾಸಿಟಿವ್ ಬಂದವರ ಸಂಖ್ಯೆ 18,421 ಆದರೆ, ಚೇತರಿಸಿಕೊಂಡವರ ಸಂಖ್ಯೆ 18480 ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲೂ ಯಾರೂ ಸಹ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿಲ್ಲ.

4479 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 44796 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲಿನ 428 ಹಿರಿಯ ನಾಗರಿಕರು ಸೇರಿದಂತೆ ಒಟ್ಟು 465 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 93 ಮಂದಿ ಮೊದಲ ಡೋಸ್ ಹಾಗೂ 3921 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News