ಮಲ್ಪೆ: 2.33 ಕೋ. ರೂ. ಮೊತ್ತದ ವಿವಿಧ ಸವಲತ್ತುಗಳ ವಿತರಣೆ

Update: 2022-03-13 11:56 GMT

ಮಲ್ಪೆ : ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು ಇದರ ವತಿಯಿಂದ ವಿದ್ಯಾರ್ಥಿವೇತನ, ಸದಸ್ಯ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಕ ಉಡುಗೊರೆ ಸೇರಿದಂತೆ 2.33ಕೋ. ರೂ. ಮೊತ್ತದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವು ಮಲ್ಪೆ ಏಳೂರು ಮೊಗವೀರ ಮಹಾಜನ ಸಂಘದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ. ಶಂಕರ್ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ವಹಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ವಹಿಸಿದ್ದರು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸದಸ್ಯ ಸಹಕಾರಿ ಸಂಘಗಳಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗಿನ್ನಿಸ್ ದಾಖಲೆಯ ವೀರ ಈಜುಪಟು ಗಂಗಾಧರ್ ಜಿ.ಕಡೆಕಾರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬನ್ನಂಜೆ ಬಾಬು ಅಮೀನ್ ಅವರನ್ನು ಸಮ್ಮಾನಿಸಲಾಯಿತು.

ಗ್ರಾಹಕ ಸದಸ್ಯ 590 ಬೋಟುಗಳಿಗೆ 2.17ಕೋ. ರೂ. ಪ್ರೋತ್ಸಾಹಧನ, ಉಡುಪಿ ಜಿಲ್ಲೆಯ 40 ಸಹಕಾರಿ ಸಂಸ್ಥೆಗಳಿಗೆ 10.38 ಲಕ್ಷ ರೂ. ಪ್ರೋತ್ಸಾಹಕ ಉಡುಗೊರೆ, ಸದಸ್ಯ ಗ್ರಾಹಕರ ಎಸೆಸೆಲ್ಸಿ, ಪಿಯುಸಿ ಮತ್ತು ಪದವಿಯ 291 ವಿದ್ಯಾರ್ಥಿಗಳಿಗೆ ೫.೪೦ಲಕ್ಷ ರೂ. ಪ್ರತಿಭಾ ಪುರಸ್ಕಾರದ ಜತೆಗೆ ಕೇದರ ಕಜೆ ಅಕ್ಕಿಯನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾರ್ತಿಕ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಮಂಜುನಾಥ ಎಸ್.ಕೆ., ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ.ಸುವರ್ಣ, ಉದ್ಯಮಿ ಆನಂದ ಪಿ.ಸುವರ್ಣ, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ, ಏಳೂರು ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಗುಂಡು ಬಿ.ಅಮೀನ್, ನಗರಸಭಾ ಸದಸ್ಯ ವಿಜಯ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News