ಸಮಾಜದ ಅಭಿವೃದ್ದಿಯೇ ನಿಜವಾದ ಶಿಕ್ಷಣ: ಮಾರುತಿ

Update: 2022-03-14 12:10 GMT

ಉಡುಪಿ : ಇಂದಿನ ಶಿಕ್ಷಣ ಸಂಸ್ಥೆಗಳು ತಮ್ಮ ಅಭಿವೃದ್ದಿ ಬಗ್ಗೆ ಯೋಚಿಸುತ್ತದೆಯೇ ಹೊರತು ಸಮಾಜದ ಭವಿಷ್ಯದ ಬಗ್ಗೆ ಅಲ್ಲ. ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುದಯವನ್ನು ಕೇಂದ್ರೀಕರಿಸಿಕೊಂಡು ಮುನ್ನಡೆಯ ಬೇಕು ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಹೇಳಿದ್ದಾರೆ.

ಬಂಟಕಲ್ಲು ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ದ್ವಿತೀಯ  ಪಿಯುಸಿ ವಿಜ್ಞಾನ ವಿಭಾಗಗಳ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಬಗ್ಗೆ ತಲಾ ೨ ಗಂಟೆಗಳ ಪರೀಕ್ಷಾ ಮಾರ್ಗದರ್ಶಿ ಕಾರ್ಯಕ್ರಮದ ಅಂಗವಾಗಿ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ತಯಾರಿಸಿದ ಯೂಟ್ಯೂಬ್ ವಿಡಿಯೋಗಳನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಿಕ್ಷಣ ತನ್ನ ಸಂಸ್ಥೆಗೆ ಮಾತ್ರ ಸೀಮಿತವಾಗದೆ ಇಡೀ ಸಮಾಜದ ಅಭಿವೃದ್ದಿ ಯನ್ನು ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದೇ ನಿಜವಾದ ಶಿಕ್ಷಣ ಎಂದರು.

ಮುಖ್ಯ ಅತಿಥಿಯಾಗಿ ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಯಾನಂದ ಪೈ ಮಾತನಾಡಿದರು. ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಡಾ.ಸಿ.ಕೆ. ಮಂಜುನಾಥ್, ಉಡುಪಿ ಜಿಲ್ಲಾ ಪದವಿ ಪೂರ್ವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ವಸಂತ್ ಆಚಾರ್ಯ, ಇನ್ನಂಜೆ ಎಸ್‌ವಿಎಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪುಂಡರೀಕಾಕ್ಷ ಕೊಡಂಚ ಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಕಾರ್ತಿಕ್ ವಂದಿಸಿದರು. ಎಸ್‌ವಿಎಚ್ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ ರಾಜೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News