ಉಡುಪಿ ಅಂಚೆ ವಿಭಾಗದಲ್ಲಿ ವಿಶ್ವ ಮಹಿಳಾ ದಿನಾಚರಣೆ

Update: 2022-03-14 12:13 GMT

ಉಡುಪಿ : ಜೀವನಾಧಾರಕ್ಕಾಗಿ ವೃತ್ತಿ ನಿರತ ಉದ್ಯೋಗಿಗಳೂ ಕೂಡಾ ತಮ್ಮ ವೃತ್ತಿ ಜೀವನದಲ್ಲಿ ಎದುರಾಗುವ ಗ್ರಾಹಕ ಬಂಧುಗಳನ್ನು ಆಪ್ತವಾಗಿ ವಿಚಾರಿಸಿಕೊಂಡು ನಗು ನಗುತ್ತಾ ಕರ್ತವ್ಯ ನಿರ್ವಹಿಸಿದರೆ ಅದೇ ಒಂದು ದೊಡ್ಡ ಸಮಾಜ ಸೇವೆ ಎಂದು ಖ್ಯಾತ ಹಾಸ್ಯ ಭಾಷಣಗಾರ್ತಿ ಸಂಧ್ಯಾ ಶೆಣೈ ಉಡುಪಿ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದ ವತಿಯಿಂದ ಉಡುಪಿ ಪ್ರಧಾನ ಅಂಚೆ ಕಚೇರಿಯ ಮಹಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಇತ್ತೀಚೆಗೆ ನಡೆದ ಜೀವನ ಮೌಲ್ಯಗಳು ಮತ್ತು ಹಾಸ್ಯ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಪ್ರತಿಯೋಬ್ಬನ ಜೀವನದಲ್ಲಿ ಕರ್ತವ್ಯ ಮತ್ತು ಜೀವನ ಮೌಲ್ಯಗಳು ಮಹತ್ತರ ಪಾತ್ರ ವಹಿಸುತ್ತವೆ. ಹಾಗಾಗಿ ನಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಪ್ರಾಮಾಣಿಕತೆ ಯಿಂದ ನಗುಮೊಗದಿಂದ ನಿರ್ವಹಿಸಬೇಕು. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗ ಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ವಹಿಸಿದ್ದರು. ಅಂಚೆ ಇಲಾಖೆಯ ನಿವೃತ್ತ ಮಹಿಳಾ ಉದ್ಯೋಗಿ  ಸುಲೋಚನಾ ಭಟ್ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತ ಮಹಿಳಾ ಸಹೋದ್ಯೋಗಿಗಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲಭಟ್ ಗೀತ ಗಾಯನ ನಡೆಸಿಕೊಟ್ಟರು.

ಉಡುಪಿ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಗುರುಪ್ರಸಾದ್ ಉಪಸ್ಥಿತರಿದ್ದರು. ಭಾರತಿ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೀಲಾವತಿ ತಂತ್ರಿ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News