ಉಡುಪಿ ಜಿಲ್ಲೆಯಲ್ಲೀಗ ಕೇವಲ ಎರಡು ಕೋವಿಡ್ ಸಕ್ರಿಯ ಪ್ರಕರಣ

Update: 2022-03-14 15:53 GMT

ಉಡುಪಿ‌ : ಉಡುಪಿ ಜಿಲ್ಲೆ ಕೊರೋನ ಮುಕ್ತಗೊಳ್ಳಲು ಇನ್ನೆರಡೇ ಹೆಜ್ಜೆ ಕ್ರಮಿಸಬೇಕಿದ್ದು, ಸದ್ಯ ಕೇವಲ ಇಬ್ಬರು ಮಾತ್ರ ಕೋವಿಡ್-19 ಸೋಂಕಿತರು ಜಿಲ್ಲೆಯಲ್ಲಿ ಉಳಿದುಕೊಂಡಿದ್ದಾರೆ. ಸತತ ಆರನೇ ದಿನವಾದ ಇಂದೂ ಯಾರೊಬ್ಬರಲ್ಲೂ ಹೊಸದಾಗಿ ಕೋವಿಡ್-19 ಸೋಂಕು ಪತ್ತೆಯಾಗಿಲ್ಲ.

ಸೋಮವಾರ ಜಿಲ್ಲೆಯ 1125 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಯಾರೂ ಸೋಂಕಿಗೆ ಪಾಸಿಟಿವ್ ಬಂದಿಲ್ಲ. ಉಡುಪಿ ತಾಲೂಕಿನಲ್ಲಿ 1042 ಮಂದಿ, ಕುಂದಾಪುರ ತಾಲೂಕಿನಲ್ಲಿ 47 ಹಾಗೂ ಕಾರ್ಕಳ ತಾಲೂಕಿನಲ್ಲಿ 35 ಮಂದಿ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾಗಿದ್ದಾರೆ.

ದಿನದಲ್ಲಿ ಮೂವರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ 2ಕ್ಕಿಳಿದಿದೆ. ಜ.1ರ ನಂತರ ಕೊರೋನಕ್ಕೆ ಪಾಸಿಟಿವ್ ಬಂದವರ ಸಂಖ್ಯೆ 18421 ಆದರೆ, ಚೇತರಿಸಿಕೊಂಡವರ ಸಂಖ್ಯೆ 18486 ಆಗಿದೆ. ಇಂದು ಸಹ ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ.

5222 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು ಒಟ್ಟು 5222 ಮಂದಿ  ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60ವರ್ಷ ಮೇಲಿನ 492 ಹಿರಿಯ ನಾಗರಿಕರು ಸೇರಿದಂತೆ 515ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆ  ಪಡೆದರೆ, 70 ಮಂದಿ ಮೊದಲ ಡೋಸ್ ಹಾಗೂ 4637 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News