ನಿವೃತ್ತ ವೈದ್ಯರಿಗೆ ಡಾ.ಟಿ.ಎಂ.ಎ.ಪೈ ಆರೋಗ್ಯ ಸೇವಕ ಪ್ರಶಸ್ತಿ ಪ್ರದಾನ

Update: 2022-03-20 11:45 GMT

ಮಣಿಪಾಲ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ಆರೋಗ್ಯ ಸೇವೆ ಒದಗಿಸುವಲ್ಲಿ ೬೦ ವರ್ಷ ಪೂರೈಸಿರುವ ಪ್ರಯುಕ್ತ ಉಡುಪಿ ಜಿಲ್ಲೆಯ ಹಿರಿಯ ನಿವೃತ್ತ ವೈದ್ಯರಿಗೆ ಡಾ.ಟಿ.ಎಂ.ಎ.ಪೈ ಆರೋಗ್ಯ ಸೇವಕ ಪ್ರಶಸ್ತಿ ಪ್ರದಾನ ಮತ್ತು ವೈದ್ಯರ ಪ್ರಿವಿಲೇಜ್ ಕಾರ್ಡ್ ಉದ್ಘಾಟನಾ ಸಮಾರಂಭವನ್ನು ಮಣಿಪಾಲದ ಹೋಟೆಲ್ ವ್ಯಾಲಿ ವ್ಯೆನಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಜಂಟಿಯಾಗಿ ಪ್ರಿವಿಲೇಜ್ ಕಾರ್ಡ್ ಬಿಡುಗಡೆ ಮಾಡಿದರು. ಹಿರಿಯ ಸಲಹೆಗಾರಾದ ಕಾರ್ಕಳದ ಡಾ.ಶೈಲಾ ಎಸ್.ನಾಯಕ್, ಡಾ.ಗಿರೀಶ್ ಶೆಣೈ, ಉಡುಪಿಯ ಡಾ.ಕೃಷ್ಣದೇವ ಕಲ್ಕೂರ, ಮಂದಾರ್ತಿಯ ಡಾ.ಎನ್.ಸುರೇಶ್ಚಂದ್ರ ಶೆಟ್ಟಿ, ಕುಂದಾಪುರದ ಡಾ.ಅಂಪಾರ ವಸಂತಕುಮಾರ್ ಶೆಟ್ಟಿ ಡಾ.ಟಿ.ಎಂ.ಎ.ಪೈ ಆರೋಗ್ಯ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಎಂ.ಡಿ.ವೆಂಕಟೇಶ್ ಮಾತ ನಾಡಿ, ನಮ್ಮ ಆಸ್ಪತ್ರೆಯನ್ನು ಬೆಂಬಲಿಸುವ ವೈದ್ಯರ ಸೇವೆಗಾಗಿ ಕೃತಜ್ಞತಾ ಭಾವವಾಗಿ ಕಸ್ತೂರ್ಬಾ ಆಸ್ಪತ್ರೆಯು ಒಂದು ಸಣ್ಣ ಉಡುಗೊರೆಯಾಗಿ ಪ್ರಿವಿಲೇಜ್ ಕಾರ್ಡ್ ಬಿಡುಗಡೆ ಮಾಡಿದೆ. ಈ ಕಾರ್ಡ್‌ನೊಂದಿಗೆ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದಾಗ ಕಾರ್ಡ್‌ದಾರರು ಮತ್ತು ಅವರ ಕುಟುಂಬವು ರಿಯಾಯಿತಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

ಮಾಹೆ ಸಹ-ಉಪ ಕುಲಪತಿ ಡಾ.ಪಿಎಲ್‌ಎನ್‌ಜಿ ರಾವ್ ಮಾತನಾಡಿದರು. ಪ್ರಿವಿಲೇಜ್ ಕಾರ್ಡ್‌ನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಮುತ್ತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಡೀನ್ ಡಾ.ಶರತ್ ಕುಮಾರ್ ಸ್ವಾಗತಿಸಿ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವಂದಿಸಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News