ನಾಟಕ ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದೆ: ಡಾ.ರಾಜಪ್ಪ ದಳವಾಯಿ

Update: 2022-03-20 15:19 GMT

ಉಡುಪಿ : ಕಲಾ ಬದ್ಧತೆ ಇದ್ದರೆ ಮಾತ್ರ ರಂಗಭೂಮಿ ಬರಲು ಸಾಧ್ಯ. ಕಲಾವಿದ, ಗಾಯಕ, ನಾಯಕ, ಸಂಘಟಕ ಸಮಾಜದಲ್ಲಿನ ಮನಸ್ಸನ್ನು ಕಟ್ಟುವ ಕೆಲಸ ಮಾಡುತ್ತಾರೆ. ಇಂದಿನ ಸಮಾಜದಲ್ಲಿ ಮನಸ್ಸುಗಳನ್ನು ಕಟ್ಟಲು ಜನ ಇಲ್ಲವಾಗಿದೆ. ಆದರೆ ನಾಟಕ ಜನರ ಮನಸ್ಸು ಕಟ್ಟುವ ಕೆಲಸ ಮಾಡುತ್ತಿದೆ ಎಂದು ಸಾಹಿತಿ ಹಾಗೂ ರಂಗಕರ್ಮಿ ಡಾ.ರಾಜಪ್ಪ ದಳವಾಯಿ ಹೇಳಿದ್ದಾರೆ.

ಉಡುಪಿ ಕೊಡವೂರು ಸುಮನಸಾ ವತಿಯಿಂದ ೨೦ರ ಸಂಭ್ರಮದ ಪ್ರಯುಕ್ತ ಅಜ್ಜರಕಾಡು ಭುಜಂಗಪಾರ್ಕ್ ಬಯಲುರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾದ 10 ದಿನಗಳ ರಾಷ್ಟ್ರೀಯ ರಂಗಹಬ್ಬ-೧೦ ಬಹುಭಾಷಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾಟಕ ಇಂದು ನಮ್ಮ ನಡುವೆ ಇರುವ ಪ್ರಭಾವ ಶಾಲಿ ಮಾಧ್ಯಮ. ಇದರ ಪ್ರಯೋಗವನ್ನು ಶಿಕ್ಷಣದಲ್ಲಿ ಪ್ರಯೋಗ ಮಾಡುತ್ತಿದ್ದೇವೆ. ಉಡುಪಿ ಸೇರಿದಂತೆ ಪ್ರತಿ ಜಿಲ್ಲೆಗಳಿಗೂ ರಂಗಾಯಣ ಬರಬೇಕು. ಯಾಕೆಂದರೆ ಮಕ್ಕಳ ಮನೋ ವಿಕಾಸಕ್ಕೆ ಇದು ಹೆಚ್ಚು ಸಹಕಾರಿಯಾಗಲಿದೆ ಎಂದರು.

ರಂಗಭೂಮಿ ಸಾಮುದಾಯಿಕವಾದ ಕಲೆ. ಇದು ಬೆಸೆಯುವ ಹಾಗೂ ಒಗ್ಗೂಡಿಸುವ ಕೆಲಸ ಮಾಡುತ್ತದೆ. ಅದಕ್ಕೆ ತನ್ನದೆ ಆದ ಜವಾಬ್ದಾರಿ ಕೂಡ ಇದೆ.  ನಗುವ, ಅಳುವ, ದುಃಖಿಸುವ, ವಿಷಾಧಿಸುವ, ಎದೆ ಕರಗಿಸುವ ಕೆಲಸ ವನ್ನು ನಾಟಕ ಮಾಡುತ್ತದೆ. ಆದುದರಿಂದ ಮನುಷ್ಯ ರಂಗಭೂಮಿ ಜೊತೆ ಇದ್ದಾನೆ ಎಂದು ಅವರು ತಿಳಿಸಿದರು.

ಟಿವಿ ಮಾಧ್ಯಮ ಎಂಬುದು ರಂಗಭೂಮಿಯ ಮತ್ತೊಂದು ರೂಪ. ಅಲ್ಲಿ ನಮ್ಮ ಆಲೋಚನೆ, ಸಂಬಂಧಗಳು ಅಧೋಗತಿ ಹೋಗುತ್ತಿವೆ ಎಂಬುದನ್ನು ತೋರಿಸಲಾಗುತ್ತದೆ. ಅಲ್ಲಿ ಟಿಆರ್‌ಪಿ ಮುಖ್ಯ. ರಂಘ ಸಂಘಟನೆ ಎಂಬುದು ಬಹಳ ಸವಾಲಿನ ಕೆಲಸ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ರಥಬೀದಿ ಗೆಳೆಯರು ಅಧ್ಯಕ್ಷ ಮುರಳೀಧರ ಉಪಾಧ್ಯ ಹಿರಿಯಡ್ಕ, ಕೊಡವೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಅಮೃತ್ ಶೆಣೈ, ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ನಗರಸಭೆ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಮುಖ್ಯ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ರಂಗ ಕಲಾವಿದ ರಾಜ್‌ಗೋಪಾಲ್ ಶೇಟ್ ರಂಗ ಸಾಧಕ ಸನ್ಮಾನ ನೆರವೇರಿಸಲಾಯಿತು. ಸಂಸ್ಥೆಯ ಸಂಚಾಲಕ ಭಾಸ್ಕರ್ ಪಾಲನ್, ಗೌರವಾಧ್ಯಕ್ಷ ಎಂ.ಎಸ್.ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಕಾಶ್ ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಜೀವನ್ ಕುಮಾರ್ ವಂದಿಸಿದರು. ಅಕ್ಷತ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಉಡುಪಿ ರಂಗಭೂಮಿ ತಂಡ ದಿಂದ ‘ವಿಶಾಂಕೇ’(ಕನ್ನಡ) ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News