ಮೂವರು ಸಚಿವರಿಗೆ ಇನ್ನೂ ಹಂಚಿಕೆಯಾಗದ ಅಧಿಕೃತ ನಿವಾಸ!

Update: 2022-03-20 18:45 GMT
ವಿ.ಸುನೀಲ್ ಕುಮಾರ್ | ಹಾಲಪ್ಪ ಆಚಾರ್ | ಬಿ.ಸಿ.ನಾಗೇಶ್ 

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ, ಮೂವರು ಪ್ರಮುಖ ಸಚಿವರಿಗೆ ಅಧಿಕೃತ ನಿವಾಸಗಳನ್ನೇ ನೀಡಲಾಗಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದರಿಂದ ಅಹವಾಲು ಸಲ್ಲಿಸಲು ಸಾರ್ವಜನಿಕರು ಪರದಾಟ ನಡೆಸುವ ವಾತಾವರಣ ನಿರ್ಮಾಣವಾಗಿದೆ.

ಯಾವೆಲ್ಲ ಖಾತೆ ಸಚಿವರಿಗೆ ಅಧಿಕೃತ ನಿವಾಸಗಳನ್ನು ಮೀಸಲಿಡಲಾಗಿದೆ ಎಂದು ಪ್ರಶ್ನಿಸಿ ಆರ್‌ಟಿಐ ಕಾರ್ಯಕರ್ತ ಬಿ.ವಿ.ಗೌತಮ್ ಎಂಬವರು ಸಲ್ಲಿಸಿದ ಅರ್ಜಿಗೆ ರಾಜ್ಯ ಸರಕಾರ ಉತ್ತರ ಒದಗಿಸಿದ್ದು, ಇದರಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕ ರಣ ಸಚಿವ ಹಾಲಪ್ಪ ಆಚಾರ್ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಇದುವರೆಗೂ ಸರಕಾರದ ವತಿಯಿಂ ದ ಅಧಿಕೃತ ನಿವಾಸವನ್ನೇ ಹಂಚಿಕೆ ಮಾಡಿಲ್ಲ ಎಂದು ತಿಳಿಸಲಾಗಿದೆ.

ಸಾರ್ವಜನಿಕರ ಪರದಾಟ: ಶಿಕ್ಷಣ, ಇಂಧನ, ಕನ್ನಡ ಮತ್ತು ಸಂಸ್ಕೃತಿ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಇಲಾಖೆಗಳಿಗೆ ಸಂಬಂಧಿಸಿದಂತೆ ಸಚಿವರನ್ನು ಭೇಟಿ ಮಾಡಿ, ಅಹವಾಲು ಸಲ್ಲಿಸಲು ಅವರ ವಿಳಾಸವೇ ಇಲ್ಲದಂತೆ ಆಗಿದೆ ಎಂದು ಸಾರ್ವಜನಿಕರು, ಸಂಘ-ಸಂಸ್ಥೆಗಳು ಪ್ರಮುಖರು ಬೇಸರ ವ್ಯಕ್ತಪಡಿಸಿದರು.

ಮೇಲ್ಕಂಡ ಖಾತೆಗಳನ್ನು ಹೊಂದಿರುವ ಸಚಿವರಿಗೆ ಅಧಿಕೃತ ನಿವಾಸ ಇಲ್ಲದ ಕಾರಣ, ಶಾಸಕರ ಭವನದಲ್ಲಿಯೇ ಉಳಿದುಕೊಳ್ಳುತ್ತಿದ್ದಾರೆ. ಆದರೆ, ಅಲ್ಲಿ ಸಾರ್ವಜನಿಕ ಪ್ರವೇಶವೇ ಇಲ್ಲವಾಗಿದ್ದು, ಅವರನ್ನು ಹಿಡಿಯುವುದೇ ಕಷ್ಟಕರ ಎಂದು ಸಂಘಟನೆಯ ಮುಖ್ಯಸ್ಥರೊಬ್ಬರು ಆರೋಪಿಸಿದರು.

2021ರ ಜುಲೈ 28 ರಂದು ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿದರು. ಆದರೆ, ಎಂಟು ತಿಂಗಳು ಕಳೆದರೂ, ಸಚಿವರು ಈಗಲೂ ಅಧಿಕೃತ ನಿವಾಸ ಪಡೆಯಲು ಪರದಾಟ ನಡೆಸುತ್ತಿರುವುದು ವಿಪರ್ಯಾಸವೇ ಸರಿ.

ಶಾಸಕರ ಭವನವೇ ನಿವಾಸ?: ಈ ಮೂವರು ಸಚಿವರಿಗೆ ಅಧಿಕೃತ ನಿವಾಸ ದೊರೆಯದ ಹಿನ್ನೆಲೆ ಶಾಸಕರ ಭವನದಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ.ಇನ್ನೂ, ಕೆಲವರು ಖಾಸಗಿ ಮನೆಗಳಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News