ಕಾಪು ಮಾರಿಗುಡಿ ಜಾತ್ರೆ ಆರಂಭ: ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧ

Update: 2022-03-22 16:03 GMT

ಕಾಪು : ಕಾಪುವಿನ ಮಾರಿಗುಡಿ ಜಾತ್ರೆಯು ಮಂಗಳವಾರ ಆರಂಭಗೊಂಡಿದ್ದು, ಇಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿರ್ಬಂಧ ವಿಧಿಸಲಾಗಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಮುಸ್ಲಿಮ್ ವ್ಯಾಪಾರಿಗಳು ಜಾತ್ರೆ  ಯಲ್ಲಿ ವ್ಯಾಪಾರ ನಡೆಸಲು ಹೋಗಿಲ್ಲ ಎಂದು ತಿಳಿದುಬಂದಿದೆ.

ಮಾರಿಗುಡಿ ಜಾತ್ರೆಯಲ್ಲಿ ಪ್ರತಿವರ್ಷ ನೂರಾರು ಮುಸ್ಲಿಮ್ ವ್ಯಾಪಾರಿಗಳು ಕೋಳಿ, ಕುರಿ, ಐಸ್‌ಕ್ರೀಮ್, ಫ್ರೆಶ್‌ ಲೈಮ್, ಫ್ಯಾನ್ಸಿ, ಆಟಿಕೆ ಸಾಮಗ್ರಿಗಳ ವ್ಯಾಪಾರವನ್ನು ನಡೆಸುತ್ತಿದ್ದರು. ಆದರೆ ಈ ವರ್ಷ ಹಿಜಾಬ್ ಸಂಬಂಧ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿ ಮುಸ್ಲಿಮರು ಬಂದ್ ನಡೆಸಿರುವ ಕಾರಣಕ್ಕಾಗಿ ಮಾರಿ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಮುಸ್ಲಿಮರಿಗೆ ನಿರ್ಬಂಧ ವಿಧಿಸಲಾಗಿದೆ.

ಈ ಕುರಿತು ಆಡಳಿತ ಮಂಡಳಿ ತೀರ್ಮಾನ ಕೂಡ ತೆಗೆದುಕೊಂಡಿತ್ತು. ಅದರಂತೆ ಇಂದು ಆರಂಭಗೊಂಡ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅಂಗಡಿ/ಸ್ಟಾಲ್‌ಗಳನ್ನು ಹಾಕಲು ಅವಕಾಶ ನೀಡಿರಲಿಲ್ಲ. ಕಾಪು ಮಾರಿಗುಡಿಯ ಆಸುಪಾಸಿನಲ್ಲಿ ಮುಂಭಾಗದ ಹೆದ್ದಾರಿಯ ಇಕ್ಕೆಲದಲ್ಲಿ, ಅಂಡರ್ ಪಾಸ್ ಕೆಳಗೆ ಯಾರಿಗೂ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಎರಡು ದಿನ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆಂದು ದೇವಸ್ಥಾನ ಆಡಳಿತ ಕಮಿಟಿಯ ಕಿರಣ್ ಆಳ್ವ ತಿಳಿಸಿದ್ದಾರೆ.

‘ಪ್ರತಿವರ್ಷ ನಾವು ಹಿಂದುಗಳೊಂದಿಗೆ ಅನೋನ್ಯವಾಗಿ ವ್ಯಾಪಾರ ನಡೆಸಿ ಕೊಂಡು ಬರುತ್ತಿದ್ದೇವೆ. ಆದರೆ ಈ ವರ್ಷ ತಪ್ಪು ಮಾಹಿತಿಯಿಂದ ಮಾರಿ ಜಾತ್ರೆಯಲ್ಲಿ ನಮಗೆ ವ್ಯಾಪಾರ ನಡೆಸಲು ಅವಕಾಶ ನೀಡಿರಲಿಲ್ಲ. ನಾವು ಹೋದರೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕಾಗಿ ಈ ಬಾರಿ ಯಾರು ಹೋಗಿಲ್ಲ. ಅವಕಾಶ ನೀಡುತ್ತಿದ್ದರೆ ನಾವೆಲ್ಲ ಹೋಗುತ್ತಿದ್ದೇವು’ ಎಂದು ಜಿಲ್ಲಾ ಬೀದಿಬದಿ ಹಾಗೂ ಜಾತ್ರೆ ವ್ಯಾಪಾರಸ್ಥರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರೀಫ್ ತಿಳಿಸಿದ್ದಾರೆ.

ಈ ವಿವಾದದ ಹಿನ್ನೆಲೆಯಲ್ಲಿ ಕಾಪುವಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಡಿಎಆರ್ ಹಾಗೂ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಮುಸ್ಲಿಮ್ ಅತಿಥಿಗಳಿಗೂ ಅವಕಾಶ ನಿರಾಕರಣೆ!

ಪಡುಬಿದ್ರೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲೂ ಮುಸ್ಲಿಮ್ ವ್ಯಾಪಾರಿಗೆ ಅವಕಾಶ ನೀಡಿಲ್ಲ. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾದ ಸ್ಥಳೀಯ ಗ್ರಾಪಂನ ಮುಸ್ಲಿಮ್ ಸದಸ್ಯರನ್ನು ಕೊನೆಯಗಳಿಗೆಯಲ್ಲಿ ಕೈಬಿಡಲಾಗಿದೆ.

ರವಿವಾರ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಇಬ್ಬರು ಗ್ರಾಪಂ ಸದಸ್ಯರು, ಒಬ್ಬರು ಉದ್ಯಮಿಯ ಹೆಸರನ್ನು ಆಹ್ವಾನ ಪತ್ರದಲ್ಲಿ ಹಾಕಲಾಗಿತ್ತು. ಆದರೆ ಮುಸ್ಲಿಮರಿಗೆ ಜಾತ್ರಾ ಕಾರ್ಯಕ್ರಮದಲ್ಲಿ ಅವಕಾಶ ನೀಡಬಾರದೆಂಬ ಸಂಘ ಪರಿವಾರದ ಒತ್ತಡದ ಹಿನ್ನೆಲೆಯಲ್ಲಿ ಸಂಘಟಕರು ಇವರಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಬಾರದಂತೆ ತಿಳಿಸಿದರು. ಅದರಂತೆ ಮುಸ್ಲಿಮರು ಕಾರ್ಯಕ್ರಮಕ್ಕೆ ಹೋಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News