ಜಲಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಸಿಇಓ ಡಾ.ನವೀನ್ ಭಟ್

Update: 2022-03-23 15:08 GMT

ಬ್ರಹ್ಮಾವರ : ನೀರಿನ ಸಂರಕ್ಷಣೆ ಮಹತ್ವದ ಕಾರ್ಯವಾಗಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯ ಆಡಳಿತಗಳು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಿದರೆ ಇನ್ನಷ್ಟು ಪ್ರಗತಿ ಸಾಧ್ಯವಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ಹೇಳಿದ್ದಾರೆ.

ಕಾಡೂರು ಗ್ರಾಮಪಂಚಾಯತ್‌ನ ನಡೂರಿನಲ್ಲಿ ಬುಧವಾರ ಜರಗಿದ ಜಲ ಸಂರಕ್ಷಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಗ್ರಾಮ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ‌್ಯನಿರ್ವಹಿಸಿ ತಮ್ಮ ವ್ಯಾಪ್ತಿಯ ಕೆರೆ ಮತ್ತು ಮದಗಗಳ ಸಮೀಕ್ಷೆ ಕಾರ್ಯ ಕೈಗೊಂಡು ನರೇಗಾ ಯೋಜನೆಯಡಿ ಕಾಮಗಾರಿಗಳ ಅನು ಷ್ಠಾನ ಮಾಡುವುದು ಅತ್ಯಗತ್ಯ ಎಂದರು.

ಸಂಪನ್ಮೂಲ ವ್ಯಕ್ತಿ ಜಲ ಸಾಧಕ ಶಂಭುಶಂಕರ ರಾವ್ ಹೆಗ್ಗುಂಜೆ ಮಾತನಾಡಿ, ಹನಿ ನೀರಿನ ಕುರಿತು ವೈಯಕಿತಿಕ ಜಾಗೃತಿ ಮಾಡಬೇಕಾಗಿದ್ದು ವ್ಯರ್ಥವಾಗಿ ಪೋಲಾಗುವ ನೀರನ್ನು ಇಂಗಿಸುವ ಬಗ್ಗೆ ಯೋಜನೆಗಳ ಮೂಲಕ ಸಂಘಟಿತ ರಾಗಿ ಪ್ರಯತ್ನ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಮಾತನಾಡಿ, ಉಡುಪಿ ಜಿಲ್ಲೆ ನರೇಗಾ ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಆಸ್ತಿಗಳನ್ನು ಸೃಜನೆ ಮಾಡಲು ಗ್ರಾಪಂಗಳು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡುರಂಗ ಶೆಟ್ಟಿ ನಡೂರು, ಉಪಾಧ್ಯಕ್ಷೆ ಅಮಿತಾ ರಾಜೇಶ್, ಬ್ರಹ್ಮಾವರ ತಾಪಂ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪಡೆದ ನರೇಗಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹಾಗೂ ನರೇಗಾ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ನಾಲ್ಕೂರು, ಬಿಲ್ಲಾಡಿ ಹಾಗೂ ಕಾಡೂರು  ಗ್ರಾಪಂಗಳ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕಾಡೂರು ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News