ಮಾ.28-29ರಂದು ರಾಷ್ಟ್ರ ವ್ಯಾಪಿ ಮುಷ್ಕರ; ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಅಧಿಕ ಸಂಘಟನೆಗಳ ಬೆಂಬಲ

Update: 2022-03-26 14:26 GMT

ಉಡುಪಿ : ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.28 ಮತ್ತು 29ರಂದು ರಾಷ್ಟ್ರವ್ಯಾಪಿ ಮುಷ್ಕರ ಹಮ್ಮಿಕೊಳ್ಳ ಲಾಗಿದ್ದು, ಉಡುಪಿ ಜಿಲ್ಲೆಯ 50ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ಉಡುಪಿ ಜಿಲ್ಲಾ ಸಂಚಾಲಕ ಕೆ.ಶಂಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಾ.28ರಂದು ಬೆಳಗ್ಗೆ 10ಗಂಟೆಗೆ ನಗರದ ಸಿಂಡಿಕೇಟ್‌ನ ಸರ್ಕಲ್‌ನಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಅದೇ ರೀತಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಪಿಡಿಓ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮಾ.29ರಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆ 11ಗಂಟೆಗೆ ಧರಣಿ ನಡೆಸಲಾಗುವುದು ಎಂದರು.

ಪೆಟ್ರೋಲ್, ಡೀಸಲ್, ಅಡುಗೆ ಅನಿಲ, ಅಗತ್ಯ ವಸುತಿಗಳ ಬೆಲೆಗಳನ್ನು ನಿಯಂತ್ರಿಸಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಪ್ರತಿ ಕುಟುಂಬಕ್ಕೂ ಮಾಸಿಕ 10 ಸಾವಿರ ರೂ. ನೇರ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ. ಆಹಾರಧಾನ್ಯಗಳನ್ನು ನೀಡಬೇಕು. ಕಾರ್ಪೊರೇಟ್ ಬಂಡವಾಳ ಪರ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು. ಕಾರ್ಮಿಕರ ಹಕ್ಕುಗಳನ್ನು ಉಳಿಸಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಟ ಕೂಲಿ ಮಾಸಿಕ 21 ಸಾವಿರ ರೂ. ನಿಗದಿ ಮಾಡಬೇಕು. ಸರಕಾರಿ ಆಧಾರಿತ ಗ್ಯಾರಂಟಿ ಪಿಂಚಣಿ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಮಾ ನೌಕರರ ಸಂಘಟನೆಯ ಪ್ರಭಾಕರ.ಬಿ.ಕುಂದರ್, ಎಐಬಿಇಎಯ ಕೆ.ರಮೇಶ್, ಎಐಟಿಯುಸಿಯ  ಸಂಜೀವ ಶೇರೆಗಾರ್, ಬಿಇಎಫ್‌ಐಯ ರವೀಂದ್ರ, ಸಿ.ಐ.ಟಿ.ಯು.ನ  ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

50ಕ್ಕೂ ಅಧಿಕ ಬ್ಯಾಂಕ್ ಶಾಖೆ ಮುಚ್ಚುಗಡೆ

ಬ್ಯಾಂಕ್‌ಗಳ ವಿಲೀನದಿಂದಾಗಿ ಉಡುಪಿ ಜಿಲ್ಲೆಯ ಉದ್ಯಾವರ, ಶಂಕರಪುರ, ಕಲ್ಯಾಣಪುರ ಸೇರಿದಂತೆ ಸುಮಾರು 50ಕ್ಕೂ ಅಧಿಕ ಬ್ಯಾಂಕ್ ಶಾಖೆಗಳು ಮುಚ್ಚಲಾಗಿದೆ ಎಂದು ಆಲ್‌ ಇಂಡಿಯಾ ಬ್ಯಾಂಕ್ ಎಂಪ್ಲಾಯಸ್ ಅಸೋಸಿ ಯೇಶನ್ ಜಿಲ್ಲಾಧ್ಯಕ್ಷ ಕೆ.ರಮೇಶ್ ತಿಳಿಸಿದ್ದಾರೆ.

ಶಾಖೆ ಮುಚ್ಚುಗಡೆಯಾಗಿರುವುದರಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಈಗ ಹೊಸ ನೇಮಕಾತಿಯನ್ನು ಕೂಡ ಸ್ಥಗಿತಗೊಳಿಸಲಾಗಿದೆ ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News