ಅಪ್ಪಿ ಪಾಣಾರ ಮೂಡುಬೆಳ್ಳೆಗೆ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ

Update: 2022-03-26 14:40 GMT

ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಸಹಯೋಗದಲ್ಲಿ  ಉಡುಪಿ ಗೋವಿಂದ ಪೈ ಕೇಂದ್ರದ ಧ್ವನ್ಯಾಲೋಕದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ತುಳು ಸಂಸ್ಕೃತಿ ಸಿರಿ ಕೂಟದಲ್ಲಿ ಅಪ್ಪಿ ಪಾಣಾರ ಮೂಡುಬೆಳ್ಳೆ ಅವರಿಗೆ ಸಂಸ್ಕೃತಿ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದತ್ತಿ ಉಪನ್ಯಾಸದಲ್ಲಿ ‘ಯಾನ್ ದಾಯಗ್ ತುಳುಟ್ಟು ಬರೆಯೇ?’ ಕುರಿತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಮಾತನಾಡಿ, ಅನುಭವ ಇದ್ದರೆ ಮಾತ್ರ ಬರವಣಿಗೆ ಸಾಧ್ಯವಾಗುತ್ತದೆ. ಯಾವುದೇ ಕಾದಂಬರಿ ಅನುಭವ ಇಲ್ಲದೆ ಬರೆಯಲು ಸಾಧ್ಯವಿಲ್ಲ. ತುಳುವಿನಲ್ಲಿ  ಬರೆಯು ವವರು ಮೊದಲು ತುಳು ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ತುಳುವಿನ ಕುರಿತ ಅಧ್ಯಯನವನ್ನು ಓದಬೇಕು ಎಂದು ತಿಳಿಸಿದರು.

ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಸಂಸ್ಕೃತಿ ಸಿರಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿದ್ದರು.

ತುಳು ಪಾಡ್ದನ ಸಮೀಕ್ಷೆ ಪ್ರಬಂಧ ಸ್ಪರ್ಧೆಯ ವಿಜೇತರಾದ ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿಯಾಗೆ ಪ್ರಥಮ, ಹೆಬ್ರಿ ಸರಕಾರಿ ಕಾಲೇಜಿನ ಮಲ್ಲಿಕಾಗೆ ದ್ವಿತೀಯ ಹಾಗೂ ಅದೇ ಕಾಲೇಜಿನ ಶುಭದರ ಅವರಿಗೆ ತೃತೀಯ ಬಹುಮಾನ ನೀಡಲಾಯಿತು.

ಕಪ್ಪಂದಕರ್ಯ ಕುಪ್ಪಣ್ಣ- ತುಂಬೆಕ್ಕ ಪ್ರತಿಷ್ಠಾನದ ಸಂಚಾಲಕ ಮುದ್ದು ಮೂಡುಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೀಠ ಸಂಯೋಜಕ ಡಾ. ಮಾಧವ ಎಂ.ಕೆ. ಸ್ವಾಗತಿಸಿದರು. ಪ್ರತಿಷ್ಠಾನದ ಸಹಸಂಚಾಲಕಿ ಸುಜಾತ ಎಸ್. ಸುವರ್ಣ ಮೂಡುಬೆಳ್ಳೆ ವಂದಿಸಿದುರ. ತೆಂಕನಿಡಿಯೂರು ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News