ಹೊಸ ಆಲೋಚನೆಗಳೊಂದಿಗೆ ಸಿನೆಮಾ ರೂಪಿಸಿ: ಹಿಮಂತ್ ರಾಜು

Update: 2022-03-27 16:14 GMT

ಉಡುಪಿ : ಹೊಸ ಆಲೋಚನೆ, ವಿಭಿನ್ನತೆಯೊಂದಿಗೆ ಸಿನಿಮಾ ಗಳನ್ನು ರೂಪಿಸಿ, ಕನ್ನಡ, ತುಳು ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರರ್ ಹಿಮಂತ್ ರಾಜು ಹೇಳಿದ್ದಾರೆ.

ಕರ್ನಾಟಕ ಚಲಚಿತ್ರ ಅಕಾಡೆಮಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಣಿಪಾಲ ಇನ್ಸಿಟ್ಯೂಟ್ ಆಫ್ ಕಮ್ಯೂನಿಕೇಶನ್ ಸಹಯೋಗದಲ್ಲಿ ರವಿವಾರ ಮಣಿಪಾಲ ಎಂಐಸಿ ಆಡಿಟೋರಿಯಂನಲ್ಲಿ ರವಿವಾರ ನಡೆದ 5 ದಿನಗಳ ಚಲನಚಿತ್ರ ನಿರ್ಮಾಣ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಚಲನಚಿತ್ರ ನಿರ್ಮಾಣ ಕೌಶಲ್ಯ ಕಾರ್ಯಾಗಾರವು ಸಿನೆಮಾ ಆಸಕ್ತ ವಿದ್ಯಾರ್ಥಿಗಳಿಗೆ ಹೊಸ ಉರುಪು, ಆಲೋಚನೆಗಳನ್ನು ಹುಟ್ಟಿಸುವ ಕೆಲಸ ಮಾಡುತ್ತದೆ. ಬೆಂಗಳೂರಿನಲ್ಲಿ ಜರಗುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದಲ್ಲಿ ಮಣಿಪಾಲ ಎಂಐಸಿ  ವಿದ್ಯಾರ್ಥಿಗಳು ಮುಕ್ತವಾಗಿ ಸ್ವಯಂ ಸೇವಕರಾಗಿ ಭಾಗವಹಿಸಬಹುದು. ಮುಂದಿನ ದಿನಗಳಲ್ಲಿ ಈ ರೀತಿ ಕಾರ್ಯಾಗಾರವನ್ನು ಎಲ್ಲ ಮಾಧ್ಯಮ ವಿಭಾಗವಿರುವ ಕಾಲೇಜುಗಳಿಗೆ ವಿಸ್ತರಿಸಲಾಗುತ್ತದೆ ಎಂದರು.

ಎಂಐಸಿ ನಿರ್ದೇಶಕಿ ಡಾಪದ್ಮಾರಾಣಿ, ಎಂಐಸಿ ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆೆ ಡಾ.ಶುಭಾ ಎಚ್.ಎಸ್., ಅಕಾಡೆಮಿ ಸದಸ್ಯರಾದ ಅಶೋಕ್ ಕಶ್ಯಪ್, ಶ್ರೀರಾಜ್ ಗುಡಿ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಚಾಲಕ ವಿನ್ಯಾಸ್ ಹೆಗ್ಡೆ ಸ್ವಾಗತಿಸಿ, ವಂದಿಸಿದರು.

5 ದಿನಗಳ ಕಾರ್ಯಾಗಾರದಲ್ಲಿ ಸಿನೆಮಾಟೊಗ್ರಫಿ, ಲೈಟಿಂಗ್, ಒಳಾಂಗಣ, ಹೋರಾಂಗಣ ಚಿತ್ರೀಕರಣ, ಸೌಂಡ್ ಮಿಕ್ಸಿಂಗ್, ಚಿತ್ರಕಥೆ ನಿರೂಪಣೆ, ನಿರ್ದೇಶನ ತತ್ವಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. 50ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಒತ್ತಡದ ಜೀವನ ಶೈಲಿ, ವಿದ್ಯಾರ್ಥಿ ಜೀವನ ಸಹಿತ ಸಾಮಾಜಿಕ ಜಾಗೃತಿ ಮೂಡಿಸುವ ಕುರಿತು ವಿದ್ಯಾರ್ಥಿಗಳು ನಿರ್ಮಿಸಿದ ಒಟ್ಟು 14 ಕಿರುಚಿತ್ರಗಳನ್ನು ಕಾರ್ಯಾಗಾರದಲ್ಲಿ ಪ್ರದರ್ಶಿಸಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News