ಕುಂದಾಪುರ; ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ: ಓರ್ವ ಸಜೀವ ದಹನ

Update: 2022-04-03 07:27 GMT

ಕುಂದಾಪುರ: ಹೊಸ ಮನೆ ನಿರ್ಮಾಣದ ಹಿನ್ನೆಲೆಯಲ್ಲಿ ವಾಸವಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ವ್ಯಕ್ತಿಯೋರ್ವರು ಸಜೀವ ದಹನವಾದ ದಾರುಣ ಘಟನೆ ಗಂಗೊಳ್ಳಿಯಲ್ಲಿ ರವಿವಾರ ಬೆಳಗ್ಗೆ ನಡೆದಿದೆ.

ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ನಿವಾಸಿ ಗಣೇಶ್ ಖಾರ್ವಿ (42) ಬೆಂಕಿ ಅವಘಡ ದಿಂದ ಮೃತಪಟ್ಟವರು.

ಗಂಗೊಳ್ಳಿಯಲ್ಲಿ ಮೀನುಗಾರಿಕೆ ಬೋಟಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಗಣೇಶ ಖಾರ್ವಿ ಇಂದು ಮುಂಜಾನೆ ಗಂಗೊಳ್ಳಿ ಬಂದರಿನಲ್ಲಿರುವ ಬೋಟಿನ ಸಮೀಪ ಹೋಗಿ ಪುನಃ ಮನೆಯಲ್ಲಿ ಬಂದು ಮಲಗಿದ್ದರು. ಇದೇ ಸಂದರ್ಭ ಬೆಳಗ್ಗೆ ಸುಮಾರು 8.30ರ ಹೊತ್ತಿಗೆ ಮನೆಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಗಣೇಶ ಖಾರ್ವಿ ಮಂಚದ ಮೇಲೆ ಮಲಗಿದ್ದಲ್ಲೇ ಸುಟ್ಟು ಸಜೀವ ದಹನಗೊಂಡಿದ್ದಾರೆ.

ಮೃತ ಗಣೇಶ್ ಹೊಸ ಮನೆ ಕಟ್ಟುತ್ತಿದ್ದು ಮನೆ ಸಮೀಪದಲ್ಲೇ ಪುಟ್ಟ ಗುಡಿಸಲಿನಲ್ಲಿ ಪತ್ನಿ ಜೊತೆ ವಾಸಿಸುತ್ತಿದ್ದರು. ಇವರ ಪತ್ನಿ ಬೆಳಗ್ಗೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಗಣೇಶ ಖಾರ್ವಿ ಮನೆಯಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಯನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮನೆಗೆ ತಗುಲಿದ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಗಣೇಶ ಖಾರ್ವಿ ಮನೆಯ ಒಳಗೆ ಇರುವುದು ಯಾರಿಗೂ ತಿಳಿದಿರಲಿಲ್ಲ. ಬಳಿಕ ಸ್ಥಳೀಯರು ಮನೆಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News