ಕನ್ನಡ ಶಾಲೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ: ಸುರೇಂದ್ರ ಅಡಿಗ

Update: 2022-04-05 13:38 GMT

ಕಾಪು, ಎ.೫: ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕಸಾಪ ಉಡುಪಿ ಜಿಲ್ಲಾ ಘಟಕವು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ. ಉಡುಪಿ ಜಿಲ್ಲೆಯಲ್ಲಿ ಇರುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ತಾಲೂಕು ಮಟ್ಟದ ಪದಾಧಿಕಾರಿಗಳು ಅಧ್ಯಯನ ನಡೆಸಿ, ಅವಶ್ಯಕತೆಯಿರುವಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಅಲ್ಲಿನ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.

ಕಾಪು ಶ್ರೀವೀರಭದ್ರ ಸಭಾಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ, ಕಸಾಪ ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಒಂದು ಪದಕ್ಕೆ ಹತ್ತಾರು ಪರ್ಯಾಯ ಪದಗಳನ್ನು ನಾವು ಕನ್ನಡದಲ್ಲಿ ಮಾತ್ರಾ ಕಾಣಬಹುದು. ಕನ್ನಡ ಭಾಷಾ ಸಾಹಿತ್ಯವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡವನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಳ್ಳಬೇಕಿದೆ. ಆಗ ಮಾತ್ರಾ ಕನ್ನಡಕ್ಕೆ ಉಳಿಗಾಲವಿದೆ ಎಂದರು.

ಜಾನಪದ ವಿದ್ವಾಂಸ, ಸಂಶೋಧಕ ಕೆ.ಎಲ್.ಕುಂಡಂತಾಯ ಮಾತನಾಡಿ, ಕಾಪುವಿಗೂ ಕನ್ನಡಕ್ಕೂ ಬಹಳಷ್ಟು ಹತಿತಿರದ ಸಂಬಂಧವಿದೆ. ಕಾಪುವಿನಲ್ಲಿ ಕಾಪಾಡಬಹುದಾದ ನೂರಾರು ಕನ್ನಡದ ಶಾಸನಗಳಿದ್ದು ಅವೆಲ್ಲವೂ ಇಂದು ಎಲ್ಲೋ ಮರೆಯಾಗಿ ಹೋಗಿವೆ. ಮಣ್ಣಿನಡಿ ಸಿಲುಕಿ ಬಿಟ್ಟಿವೆ. ಕನ್ನಡ ಭಾಷೆ ಉಳಿಯ ಬೇಕಾದರೆ ಕನ್ನಡದ ಶಾಸನಗಳನ್ನೂ ನಾವು ರಕ್ಷಿಸಿ, ಕಾಪಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಕಸಾಪ ಕಾಪು ತಾಲೂಕು ನೂತನ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅವರಿಗೆ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕನ್ನಡದ ಧ್ವಜ ನೀಡಿ, ಅಧಿಕಾರ ಹಸ್ತಾಂತರಿಸಿದರು. ಬಳಿಕ ತಾಲೂಕು ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋದಿಸಿದರು.  

ಮುಖ್ಯ ಅತಿಥಿಗಳಾಗಿ ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಶುಭ ಹಾರೈಸಿದರು.  ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಉಡುಪಿ ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್, ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ.ಅರುಣ್ ಹೆಗ್ಡೆ, ಲೇಖಕ ಮೋಹನ್‌ದಾಸ್ ಕಿಣಿ, ಸಾಹಿತಿ ರಿಚಾರ್ಡ್ ದಾಂತಿ ಪಾಂಬೂರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಸ್ವಾಗತಿಸಿದರು.  ವಿದ್ಯಾ ಅಮ್ಮಣ್ಣಾಯ ಕಾರ್ಯಕ್ರಮ ನಿರೂಪಿಸಿದರು.  ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News