ಶಿರ್ವ ದಲಿತ ಮಹಿಳೆ ಮನೆ ತೆರವು ವಿರೋಧಿಸಿ ಪ್ರತಿಭಟನೆ: ಮಾತಿನ ಚಕಮಕಿ, ತಳ್ಳಾಟದಲ್ಲಿ ಹರಿದ ಸೊರಕೆಯ ಶರ್ಟ್!

Update: 2022-04-05 15:58 GMT

ಕಾಪು : ಶಿರ್ವ ಗ್ರಾಮದ ಸರಕಾರಿ ಜಮೀನಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯ ಗುಡಿಸಲು ತೆರವುಗೊಳಿಸಿರುವುದನ್ನು ವಿರೋಧಿಸಿ ಶಿರ್ವ ಗ್ರಾಪಂ ಕಚೇರಿ ಎದುರು ಮಂಗಳವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭ ಪಿಡಿಓ ಮತ್ತು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಉಂಟಾದ ತಳ್ಳಾಟದಿಂದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಶರ್ಟ್ ಹರಿದ ಘಟನೆ ಸಾಕಷ್ಟು ವಿವಾದಕ್ಕೆ ಕಾರಣ ವಾಯಿತು.

ಪದ್ಮಬಾಯಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ತಗಡಿನ ಗುಡಿಸಲಿನ ಮನೆ ನಿರ್ಮಿಸಿ ವಾಸ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದನ್ನು ಸೋಮವಾರ ಕಂದಾಯ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಮಂಗಳವಾರ ಶಿರ್ವ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿತ್ತು.

ಈ ಸಂಬಂಧ ಮನವಿ ಸ್ವೀಕರಿಸಲು ಆಗಮಿಸಿದ ಶಿರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್ ಹಾಗೂ ಸೊರಕೆ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಗುಂಪಾಗಿ ಸೇರಿದ್ದ ಪ್ರತಿಭಟನಕಾರರ ಮಧ್ಯೆ ನೂಕಾಟ ತಲ್ಲಾಟ ನಡೆದು,  ಸೊರಕೆ ಶರ್ಟ್ ಹರಿಯಿತು. ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇದಕ್ಕೆ ಪಿಡಿಓ ಅವರೇ ಕಾರಣ ಎಂದು ಆರೋಪಿಸಿದರು.

ನೋಟೀಸ್ ನೀಡಿದ ಎರಡೇ ದಿನದಲ್ಲಿ ಮನೆಯನ್ನು ಕೆಡವಿ ಹಾಕಲಾಗಿದೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಸೊರಕೆ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣ ವಾಯಿತು.

ಬಳಿಕ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪ್ರತಿಭಟನೆ ಯನ್ನು ಮುಂದುವರೆಸಿ, ದಲಿತ ಮಹಿಳೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ದರು. ಸ್ಥಳಕ್ಕೆ ಆಗಮಿಸಿದ ಕಾಪು ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಮನೆ ಕಳೆದುಕೊಂಡ ದಲಿತ ಮಹಿಳೆಗೆ ಶೀಘ್ರವೇ ನ್ಯಾಯ ಒದಗಿಸುವ ಭರವಸೆ ನೀಡಿದರು.

‘ಸೊರಕೆ ಅವರ ಬಟ್ಟೆಯನ್ನು ನಾನು ಹರಿದಿಲ್ಲ. ಅದರ ಬದಲು ಅವರವರ ಮಧ್ಯೆ ನಡೆದ ತಲ್ಲಾಟದಲ್ಲಿ ಬಟ್ಟೆ ಹರಿದಿರಬಹುದು. ಕಂದಾಯ ಇಲಾಖೆಯ ಸೂಚನೆಯಂತೆ ಮನೆ ತೆರವುಗೊಳಿಸಿದ್ದೇವೆ. ಇದರಲ್ಲಿ ನನ್ನ ಯಾವುದೇ ಪಾತ್ರ ಇಲ್ಲ’ ಎಂದು ಪಿಡಿಓ ಅನಂತಪದ್ಮನಾಭ ನಾಯಕ್ ಮಾಧ್ಯಮದವರ ಮುಂದೆ ಸ್ಪಷ್ಟನೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News