ಶಿರ್ವ ಗ್ರಾಪಂ ಪಿಡಿಒ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Update: 2022-04-06 14:14 GMT

ಉಡುಪಿ : ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಪ್ಪೆಪದವು ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿಸಲ್ಲಿಸಿ ವಾಸಿಸುತ್ತಿದ್ದ ಬಡ ದಲಿತ ಮಹಿಳೆಯ ಮನೆಯನ್ನು ಯಾವುದೇ  ಮುನ್ಸೂಚನೆ ನೀಡದೆ ಕಾಪು ತಹಶೀಲ್ದಾರ್ ನೇತೃತ್ವದ  ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಪಂಚಾಯತ್ ಪಿಡಿಒ ಸೇರಿ ದ್ವಂಸಗೊಳಿಸಿರುವುದು ಅಳುವ ಸರಕಾರದ ದಲಿತ ಧಮನ ನೀತಿಗೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜನಸೇವಕರಾಗಿರಬೇಕಾದ ಸರಕಾರಿ ಸಿಬ್ಬಂದಿ ವರ್ಗ ರಾಜ್ಯದ ಬಿಜೆಪಿ ಸರಕಾರದಲ್ಲಿ ಜನವಿರೋಧಿಗಳಾಗಿ ಸರಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸರಕಾರದ ಯೋಜನೆಯ ನೈಜ ಫಲಾನುಭವಿಯೊಬ್ಬಳಿಗೆ ಆದ ಅನ್ಯಾಯ ವನ್ನು ಪ್ರಶ್ನಿಸಲು ಗ್ರಾಪಂ ಕಚೇರಿಗೆ ಹೋದ ಜನಪರ ನಾಯಕ ಮಾಜಿ ಸಚಿವ ಸಂಸದ ವಿನಯ ಕುಮಾರ್ ಸೊರಕೆ ಅವರ ಮೇಲೆ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಇದರ ಹಿಂದೆ ಸ್ಥಳೀಯ   ಬಿಜೆಪಿ ನಾಯಕರ ಕೈವಾಡ ವಿದ್ದು, ಕ್ಷೇತ್ರ ಶಾಸಕರು ಹಲ್ಲೆಗೆ ಯತ್ನಿಸಿದ ಪಿಡಿಒನನ್ನು ರಕ್ಷಿಸುವ ನಿಟ್ಟಿನಲ್ಲಿ ಮಾಧ್ಯಮಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ಪ್ರಜಾತಂತ್ರ ವಿರೋಧಿ ನಿಲುವಾಗಿದೆ ಎಂದು ಅವರು ಹೇಳಿದ್ದಾರೆ.

ಶಿರ್ವ ಪಂಚಾಯತು ಅಭಿವೃದ್ದಿ ಅಧಿಕಾರಿಯ ನಡೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಸ್ಷಷ್ಟ ಉಲ್ಲಂಘನೆಯಾಗಿದೆ. ಮಾಜಿ ಸಚಿವ ಹಾಗೂ  ಸಂಸದರೊಬ್ಬರಿಗೆ  ಸರಕಾರೀ ಶಿಷ್ಟಾಚಾರದಡಿಯಲ್ಲಿ ಲಭ್ಯ ಕನಿಷ್ಟ ಗೌರವಾಧರಕ್ಕೆ ಇದರಿಂದ ಚ್ಯುತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಬಡ ದಲಿತೆಯೊಬ್ಬಳ ಮನೆ ಕೆಡವಿ ಹಾಕಲು ಆದೇಶ ನೀಡಿದ ತಹಶೀಲ್ದಾರ್ ಹಾಗೂ ಮಾಜಿ ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದ ಪಂಚಾಯತು ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಅಶೋಕ್‌ ಕುಮಾರ್ ಕೊಡವೂರು ಸರಕಾರವನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News