ರಸ್ತೆಯ ಬ್ಲ್ಯಾಕ್‌ಸ್ಪಾಟ್‌ನಲ್ಲಿ ಅಪಘಾತದಿಂದ ಜೀವಹಾನಿಯಾದರೆ ಅಧಿಕಾರಿಗಳ ವಿರುದ್ಧ ಪ್ರಕರಣ: ಉಡುಪಿ ಡಿಸಿ ಕೂರ್ಮಾರಾವ್

Update: 2022-04-06 14:54 GMT

ಉಡುಪಿ : ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ರಸ್ತೆ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸಂಬಂಧಪಟ್ಟ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು 15 ದಿನಗಳಲ್ಲಿ ತೆರವುಗೊಳಿಸಬೇಕು. 15 ದಿನದ ನಂತರ ಆ ಪ್ರದೇಶದಲ್ಲಿ ಅಪಘಾತ ಸಂಭವಿಸಿ ಜೀವಹಾನಿಯಾದಲ್ಲಿ ರಸ್ತೆಯನ್ನು ನಿರ್ಮಿಸಿ, ನಿರ್ವಹಿಸುತ್ತಿರುವ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡುತಿದ್ದರು. 

ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೬೬ ಮತ್ತು ೧೬೯ ಎ ಯಲ್ಲಿ ಒಟ್ಟು ೩೩ ಅಪಘಾತ ಸಂಭವಿಸುವ ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿ ಸಲಾಗಿದೆ. ಈ ಪ್ರದೇಶದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಿದ್ದು, ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಇನ್ನು ೧೫ ದಿನದಲ್ಲಿ ಈ ಎಲ್ಲಾ ಪ್ರದೇಶಗಳಲ್ಲಿ ಅಗತ್ಯ ದುರಸ್ಥಿ ಕಾರ್ಯ ಕೈಗೊಂಡು ವರದಿ ನೀಡಬೇಕು. ದುರಸ್ಥಿ ಮಾಡದೇ ಈ ಪ್ರದೇಶದಲ್ಲಿ ಅಪಘಾತ ಸಂಭವಿಸಿ, ಜೀವಹಾನಿಯಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ, ಸಾವಿಗೆ ಕಾರಣವಾದ ಕುರಿತು ಪ್ರಕರಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಬ್ಲ್ಯಾಕ್‌ಸ್ಪಾಟ್‌ಗಳ ದುರಸ್ಥಿ ಮಾಡುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಮತ್ತು ಪ್ರಾದೇಶಿಕ ನಿರ್ದೇಶಕರುಗಳಿಗೂ ಸಹ ಪತ್ರ ಬರೆಯುವಂತೆ ತಿಳಿಸಿದ ಜಿಲ್ಲಾಧಿಕಾರಿ, ಜಿಲ್ಲೆಯೊಳಗಿನ ಇತರೆ ರಸ್ತೆಗಳಲ್ಲಿಯೂ ಇರುವ ಬ್ಲ್ಯಾಕ್‌ಸ್ಪಾಟ್‌ಗಳಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸಿ ಜೀವಹಾನಿಯಾ ದರೆ, ವ್ಯಕ್ತಿಯ ಜೀವವನ್ನು ಮರಳಿ ತರಲು ಸಾಧ್ಯವೇ ಎಂದು ಪ್ರಶ್ನಿಸಿದ  ಕೂರ್ಮಾರಾವ್ ಎಂ., ಇತ್ತೀಚೆಗೆ ಸಂತೆಕಟ್ಟೆ ಬಳಿ ಸಂಭವಿಸಿದ ಅಪಘಾತ ದಲ್ಲಿ ಬಲಿಯಾದ ಪೊಲೀಸ್ ಅಧಿಕಾರಿ ಮತ್ತು ಮಗಳ ಸಾವಿನ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.

ಮಣಿಪಾಲದ ಟೈಗರ್ ಸರ್ಕಲ್ ಬಳಿ ಅಳವಡಿಸಿರುವ ಸಿಗ್ನಲ್‌ನಿಂದ ರಸ್ತೆಯ ಬಲ ಮತ್ತು ಎಡ ಬದಿಯ ಕ್ರಾಸ್‌ಗಳಿಂದ ಬರುವ ವಾಹನ ಸವಾರರಿಗೆ ಸಿಗ್ನಲ್ ಇಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು.

ಮಣಿಪಾಲದ ಈಶ್ವರನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮೀಸಲಿಟ್ಟ ಪ್ರದೇಶ ದಲ್ಲಿರುವ ರಿಕ್ಷಾ ನಿಲ್ದಾಣ ತೆರವುಗೊಳಿಸುವ ಬಗ್ಗೆ ಬಂದಿರುವ ದೂರಿನ ಕುರಿತಂತೆ ನಗರಸಭೆ, ಆರ್‌ಟಿಓ, ಪೋಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿದರು.

ಲಕ್ಷ್ಮೀಂದ್ರನಗರದ ಬಳಿ ಯೂಟರ್ನ್ ನಿರ್ಮಾಣದ ಅಗತ್ಯತೆ ಬಗ್ಗೆ ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಕೂಡಲೇ ಇಲ್ಲಿ ಯೂಟರ್ನ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಹೆಜಮಾಡಿಯಿಂದ ಶಿರೂರುವರೆಗೆ ಅಗತ್ಯ ಇರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಎಸ್ಪಿ ತಿಳಿಸಿದರು.

ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ೧೮,೭೫೪ ವಾಹನ ತಪಾಸಣೆ ಮಾಡಿ, ೨೭೩೧ ಪ್ರಕರಣ ದಾಖಲಿಸಿ, ೧೯೨ ವಾಹನ ಮುಟ್ಟುಗೋಲು ಹಾಕಿಕೊಂಡಿದ್ದು, ಇವುಗಳಿಂದ ತೆರಿಗೆ ೭೯,೮೧,೨೫೦ ರೂ. ಹಾಗೂ ದಂಡ ೧೦೫,೭೭,೦೨೦ ರೂ. ಸೇರಿದಂತೆ ಒಟ್ಟು ೧,೮೫,೫೮,೨೭೦ ರೂ. ಅನ್ನು ವಸೂಲು ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News