ಸಾಕ್ಷ್ಯಚಿತ್ರಗಳ ಮೂಲಕ ಕೋಮುವಾದದ ವಿರುದ್ಧ ಸಮರ ಸಾರಿದ ಆನಂದ್ ಪಟವರ್ಧನ್

Update: 2022-04-08 01:33 GMT

ಹಿಂದುತ್ವ ರಾಷ್ಟ್ರೀಯವಾದದ ಬೆಳವಣಿಗೆಯ ಕುರಿತು ದಶಕಗಳಿಂದ ಅಧ್ಯಯನ ನಡೆಸುತ್ತಿರುವ ಸಾಕ್ಷಚಿತ್ರಗಳ ನಿರ್ದೇಶಕ ಆನಂದ್ ಪಟವರ್ಧನ್ ಕೆನಡಾದ ಟೊರಾಂಟೊದಲ್ಲಿರುವ ಹಾಟ್ ಡಾಕ್ಸ್ ಚಿತ್ರೋತ್ಸವದಲ್ಲಿ ಅಸಾಧಾರಣ ಸಾಧನೆಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಹಿಂದುತ್ವ ಹಾಗೂ ಬಹುಸಂಖ್ಯಾತವಾದದ ಕುರಿತು ಅವರು ನಿರ್ಮಿಸಿರುವ ಕೆಲವು ಸಾಕ್ಷಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿವೆ.

ಹಾಟ್ ಡಾಕ್ಸ್ ಫೆಸ್ಟಿವಲ್ ಉತ್ತರ ಅಮೆರಿಕದ ಅತಿ ದೊಡ್ಡ ಅಂತರ್‌ರಾಷ್ಟ್ರೀಯ ಸಾಕ್ಷಚಿತ್ರ ಉತ್ಸವವಾಗಲಿದೆ ಹಾಗೂ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ನಾಮಕರಣಗೊಳ್ಳಲು ಈ ಚಿತ್ರೋತ್ಸವವು ವೇದಿಕೆಯಾಗಿದೆ. ಪ್ರತಿ ವರ್ಷವೂ ಟೊರಾಂಟೊದಲ್ಲಿ ಈ ಸಾಕ್ಷಚಿತ್ರೋತ್ಸ ವನ್ನು ನಡೆಸಲಾಗುತ್ತದೆ. ಾಟ್ ಡಾಕ್ಸ್ ಸಾಕ್ಷಚಿತ್ರೋತ್ಸವವು ಎಪ್ರಿಲ್ 28ರಿಂದ ಮೇ 8ರವರೆಗೆ ನಡೆಯಲಿದೆ. 63 ದೇಶಗಳ 226 ಚಿತ್ರಗಳು ಈ ಸಾಕ್ಷಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿವೆ. 63 ಜಾಗತಿಕ ಮಟ್ಟದ ಹಾಗೂ 47 ಅಂತರ್‌ರಾಷ್ಟ್ರೀಯ ಮಟ್ಟದ ಸಾಕ್ಷಚಿತ್ರಗಳು ಇಲ್ಲಿ ಚೊಚ್ಚಲ ಪ್ರದರ್ಶನವನ್ನು ಕಾಣಲಿವೆ.

 72 ವರ್ಷ ವಯಸ್ಸಿನ ಚಿತ್ರ ನಿರ್ದೇಶಕ ಆನಂದ್ ಪಟವರ್ಧನ್, ಹಲವಾರು ರಾಷ್ಟ್ರಪ್ರಶಸ್ತಿ ವಿಜೇತ ಸಾಕ್ಷಚಿತ್ರಗಳ ಮೂಲಕ ಜನಪ್ರಿಯರಾಗಿದ್ದಾರೆ. ಕೊಳೆಗೇರಿ ನಿವಾಸಿಗಳ ಕುರಿತಾದ ‘ಬಾಂಬೆ: ಅವರ್ ಸಿಟಿ ’(1985), ಪಂಜಾಬ್ ಬಂಡುಕೋರರ ಬಗೆಗಿನ ಇನ್ ಮೆಮೊರಿ ಆಫ್ ಫ್ರೆಂಡ್ಸ್ (1990), ಬಾಬರಿ ಮಸೀದಿ ಧ್ವಂಸ ಘಟನೆಯ ಕುರಿತಾದ ‘ಇನ್ ದಿ ನೇಮ್ ಆಫ್ ಗಾಡ್’ (1992), ಹಿಂದುತ್ವ ಕುರಿತಾದ ಫಾದರ್,ಸನ್ ಆ್ಯಂಡ್ ಹೋಲಿ ವಾರ್, ಭಾರತ ಹಾಗೂ ಪಾಕಿಸ್ತಾನ 1998ರಲ್ಲಿ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳ ಬಗೆಗಿನ ‘ವಾರ್ ಆ್ಯಂಡ್ ಪೀಸ್’ ಹಾಗೂ ಮುಂಬೈಯಲ್ಲಿ ದಲಿತರ ಮೇಲೆ ನಡೆದ ಗೋಲಿಬಾರ್‌ನ ಕತೆಹೇಳುವ ‘ಜೈ ಭೀಮ್ ಕಾಮ್ರೇಡ್ (2011)’ ಅವರು ನಿರ್ದೇಶಿಸಿದ ಹೆಸರಾಂತ ಸಾಕ್ಷಚಿತ್ರಗಳಾಗಿವೆ.

ಭಾರತದಲ್ಲಿ ಬಹುಸಂಖ್ಯಾತವಾದದ ಇತಿಹಾಸದ ಕುರಿತಾದ ಪಟವರ್ಧನ್ ವಿನೂತನ ಚಿತ್ರ ‘ರೀಸನ್’(2018) ಈ ಸಾಕ್ಷಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಆನಂದ್ ಪಟವರ್ಧನ್ ನಿರ್ದೇಶಿಸಿರುವ ‘ಫಾದರ್, ಸನ್ ಆ್ಯಂಡ್ ಹೋಲಿವಾರ್’, ‘ವಾರ್ ಆ್ಯಂಡ್ ಪೀಸ್’ ಹಾಗೂ ‘ಎ ಟೈಮ್ ಟು ರೈಸ್’ ಸಾಕ್ಷಚಿತ್ರಗಳನ್ನು ಕೂಡಾ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು.

1981ರಲ್ಲಿ ನಿರ್ಮಾಣಗೊಂಡ ಸಾಕ್ಷಚಿತ್ರವಾದ ‘ಎ ಟೈಮ್ ಟು ರೈಸ್’ ಕಾರ್ಮಿಕ ಒಕ್ಕೂಟವೊಂದನ್ನು ರಚಿಸಲು ಯತ್ನಿಸುವ ಕೆನಡಾದ ವಲಸಿಗ ಕೃಷಿ ಕಾರ್ಮಿಕರ ಕುರಿತಾಗಿದೆ. ‘‘ಇಂತಹ ಪುರಸ್ಕಾರವು ಸಾಮಾನ್ಯ ಸಂದರ್ಭಗಳಲ್ಲಿ ವೀಕ್ಷಕರ ಸಂಖ್ಯೆಯನ್ನು ಭಾರತದಲ್ಲಿ ಮಾತ್ರವಲ್ಲದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚಿಸುತ್ತದೆ. ಆದರೆ ಜನರು ಏನನ್ನು ವೀಕ್ಷಿಸಬೇಕು ಮತ್ತು ಏನನ್ನು ವೀಕ್ಷಿಸಬಾರದು ಎಂಬುದನ್ನು ನಿಯಂತ್ರಿಸಲು ಅಸಾಧಾರಣವಾದ ಕ್ರಮಗಳನ್ನು ಕೈಗೊಳ್ಳುವಂತಹ ಆಡಳಿತದ ಕೈಕೆಳಗೆ ನಾವಿಂದು ಬದುಕುತ್ತಿದ್ದೇವೆ’’ ಎಂದು ಪಟವರ್ಧನ್ ಹೇಳುತ್ತಾರೆ.

ಒಂದೆಡೆ ಈ ದೇಶದ ಪ್ರಧಾನಿಯವರು ಕಾಶ್ಮೀರ್ ಫೈಲ್ಸ್ ನಂತಹ ಚಿತ್ರಕ್ಕೆ ಸೇಲ್ಸ್ ಏಜೆಂಟ್‌ನಂತೆ ವರ್ತಿಸುತ್ತಾರೆ ಹಾಗೂ ಆ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಹಿಟ್ ಆಗುವಂತೆ ಮಾಡಲು ನಮ್ಮ ಆಡಳಿತವು ಶ್ರಮಿಸುತ್ತದೆ. ಇನ್ನೊಂದೆಡೆ ಸಾರ್ವತ್ರಿಕ ವೀಕ್ಷಣೆಗಾಗಿ ಸೆನ್ಸಾರ್‌ನಿಂದ ಯು ಸರ್ಟಿಫಿಕೇಟ್ ಪಡೆದ ನನ್ನ ನಿರ್ದೇಶನದ ಚಿತ್ರಗಳ ಪ್ರದರ್ಶನಗಳ ಮೇಲೆ ಗೂಂಡಾಗಳು ದಾಳಿ ನಡೆಸಿದ್ದರು. ಇಂತಹ ಸನ್ನಿವೇಶಗಳಲ್ಲಿ ಹಾಟ್ ಡಾಕ್ಸ್ ಪುರಸ್ಕಾರವು ವೌನದಿಂದಿರಬೇಕೆಂಬ ಬೆದರಿಕೆಗಳಿಗೆ ಮಣಿಯಲು ನಿರಾಕರಿಸುವ ಚಿತ್ರಗಳ ವೌಲ್ಯವನ್ನು ಅರಿತಿರುವ ಜನಸಮೂಹ ಜಗತ್ತಿನಾದ್ಯಂತ ಇದೆಯೆಂಬುದರ ದೃಢೀಕರಣವಾಗಿದೆ.

ಪಟವರ್ಧನ್ ಅವರ ಚಿತ್ರಗಳ ಪ್ರದರ್ಶನಗಳಿಗೆ ಸಂಘಪರಿವಾರದ ಬೆಂಬಲಿ ಗರು ಹಲವಾರು ಬಾರಿ ಅಡ್ಡಿಪಡಿಸಿದ್ದಾರೆ. 2013ರ ಆಗಸ್ಟ್‌ನಲ್ಲಿ ಸಾಮಾಜಿಕ ಹೋರಾಟಗಾರ ನರೇಂದ್ರ ದಾಭೋೀಲ್ಕರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿದ್ದ ಪುಣೆಯಲ್ಲಿರುವ ಭಾರತೀಯ ಸಿನೆಮಾ ಹಾಗೂ ಟೆಲಿವಿಶನ್ ಇನ್‌ಸ್ಟಿಟ್ಯೂಟ್‌ನ (ಎಫ್‌ಟಿಟಿಐ)ನಲ್ಲಿ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಬೆಂಬಲಿಗರು ದಾಳಿ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ಪಟವರ್ಧನ್ ಅವರ ಸಾಕ್ಷಚಿತ್ರ ಜೈಭೀಮ್ ಕೂಡಾ ಪ್ರದರ್ಶಿಸಲ್ಪಟ್ಟಿತ್ತು.

2014ರ ಡಿಸೆಂಬರ್‌ನಲ್ಲಿ ಪುಣೆಯ ಐಎಲ್‌ಎಸ್ ಕಾನೂನು ಮಹಾವಿದ್ಯಾಲಯವು 1991ರಲ್ಲಿ ಕಾಲೇಜ್‌ನ ವಾರ್ಷಿಕೋತ್ಸವದಲ್ಲಿ ಆಯೋಜಿಸಲಾಗಿದ್ದ ಪಟವರ್ಧನ್ ಅವರ ಪ್ರಶಸ್ತಿ ಪುರಸ್ಕೃತ ಸಾಕ್ಷಚಿತ್ರ ‘ರಾಮ್ ಕೆ ನಾಮ್’ನ ಪ್ರದರ್ಶನವನ್ನು ರದ್ದುಪಡಿಸಿತ್ತು. ‘ರಾಮ್ ಕೆ ನಾಮ್’ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಳಿಸಲು ವಿಶ್ವ ಹಿಂದೂ ಪರಿಷತ್ ನಡೆಸಿದ್ದ ಅಭಿಯಾನದ ಕುರಿತಾದ ಸಾಕ್ಷಚಿತ್ರವಾಗಿದೆ. ತಮಗೆ ಬೆದರಿಕೆ ಕರೆಗಳು ಬಂದಿದ್ದುದೇ ಸಾಕ್ಷಚಿತ್ರದ ಪ್ರದರ್ಶನವನ್ನು ರದ್ದುಪಡಿಸಲು ಕಾರಣವೆಂದು ಅದನ್ನು ಆಯೋಜಿಸಿದ್ದ ವಿದ್ಯಾರ್ಥಿಗಳು ತಿಳಿಸಿದ್ದರು. ಆದಾಗ್ಯೂ ಕಾರ್ಯಕ್ರಮದ ಸಂಘಟಕರು ತರುವಾಯ ಅದನ್ನು ನಿರಾಕರಿಸಿದ್ದರು.

ತನ್ನ ಸಾಕ್ಷಚಿತ್ರಗಳು ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿವೆಯಾದುದರಿಂದ ಅವು ದೂರದರ್ಶನದಲ್ಲಿ ಪ್ರದರ್ಶನಗೊಳ್ಳುವ ಹಕ್ಕನ್ನು ಹೊಂದಿವೆ. ಆದರೆ ತನ್ನ ಸಾಕ್ಷಚಿತ್ರಗಳಿಗೆ ಈ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ಆದುದರಿಂದ ದೂರದರ್ಶನದಲ್ಲಿ ಅವುಗಳನ್ನು ಪ್ರಸಾರ ಮಾಡಲು ಆದೇಶ ನೀಡಬೇಕೆಂದು ಕೋರಿ ಆನಂದ್‌ಪಟವರ್ಧನ್ ಅವರು ಹಲವಾರು ಬಾರಿ ಕೋರ್ಟ್ ಮೆಟ್ಟಲೇರಿದ್ದರು.

Writer - ಆರ್. ಎನ್.

contributor

Editor - ಆರ್. ಎನ್.

contributor

Similar News