ಪ್ರೊ.ಕೇಶವ ಮಯ್ಯ ನಿಧನ

Update: 2022-04-08 14:10 GMT

ಉಡುಪಿ : ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಎಂ. ಕೇಶವ ಮಯ್ಯ (80) ಶುಕ್ರವಾರ ಮುಂಜಾನೆ ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿ ಸಮೀಪದ ಮಂಕಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. 

ಯಕ್ಷಗಾನ ಪ್ರೇಮಿಯಾಗಿದ್ದ ಇವರು ಇಡಗುಂಜಿ ಮೇಳದ ಕೆರೆಮನೆ ಮಹಾಬಲ ಹೆಗಡೆ ಹಾಗೂ ಕೆರೆಮನೆ ಶಂಭು ಹೆಗಡೆ ಅವರು ಬಹುದೊಡ್ಡ ಅಭಿಮಾನಿಯಾಗಿದ್ದರು. ೧೯೭೦-೮೦ರ ದಶಕದಲ್ಲಿ ಯಕ್ಷಗಾನ ಆಟಗಳಿಗೆ ತೆರಳಿ ರಂಗಸ್ಥಳದ ಮುಂದಿನ ಸಾಲಿನಲ್ಲಿ ಕುಳಿತು ಅವುಗಳನ್ನೆಲ್ಲಾ ಧ್ವನಿಮುದ್ರಿಸಿಕೊಂಡು  ಬಹು ಜತನದಲ್ಲಿ ಇಂದಿನ ವರೆಗೂ ಕಾಪಿಟ್ಟುಕೊಂಡಿದ್ದರು.  ಯಕ್ಷಗಾನ ಆಸಕ್ತರಿಗೆ ಅದನ್ನು ನೀಡುತ್ತಿದ್ದರು. ಯಕ್ಷಗಾನದ ಹೆಚ್ಚಿನ ಎಲ್ಲಾ ಹಳೆಯ ಭಾಗವತರ ಹಾಡುಗಾರಿಕೆಯ ಧ್ವನಿಮುದ್ರಣ ಅವರ ಸಂಗ್ರಹದಲ್ಲಿವೆ. ಅದೇ ರೀತಿ  ಮಯ್ಯರಲ್ಲಿ ಶಾಸ್ತ್ರೀಯ ಸಂಗೀತದ ಧ್ವನಿ ಮುದ್ರಣಗಳ ದೊಡ್ಡ ಸಂಗ್ರಹವೂ ಇದೆ. 

ಮಯ್ಯರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಪ್ರೊ.ಕೇಶವ ಮಯ್ಯ ಅವರ ಅಪೇಕ್ಷೆಯಂತೆ ಮಕ್ಕಳು ಅವರ ದೇಹವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾನವಾಗಿ ನೀಡಿದ್ದಾರೆ. ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News