ಮಣಿಪಾಲ: ಮಾಹೆ ಫೈಟ್‌ನೈಟ್; ಬಾಕ್ಸಿಂಗ್ ಸ್ಪರ್ಧೆಗೆ ಚಾಲನೆ

Update: 2022-04-08 16:08 GMT

ಮಣಿಪಾಲ : ಮಣಿಪಾಲದ ಮಾಹೆಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಮೆಗಾ ಬಾಕ್ಸಿಂಗ್ ಸ್ಪರ್ಧೆಗೆ ಇಂದು ಸಂಜೆ ಎಂಐಟಿಯಲ್ಲಿ ಚಾಲನೆ ನೀಡಲಾಎಯಿತು. ಶನಿವಾರ ಹಾಗೂ ರವಿವಾರ ನಡೆಯುವ ಈ ಸ್ಪರ್ಧೆ ಯಲ್ಲಿ ಮೂರು ಬಾರಿ ಡಬ್ಲ್ಯುಬಿಸಿ ಏಷ್ಯಾ ಪ್ರಶಸ್ತಿ ಗೆದ್ದಿರುವ ನೀರಜ್ ಗೋಯಟ್ ಸೇರಿದಂತೆ ಖ್ಯಾತನಾಮ ಕುಸ್ತಿಪಟುಗಳು ಭಾಗವಹಿಸಿದ್ದಾರೆ.

‘ಮಾಹೆ ಮಣಿಪಾಲ ಫೈಟ್ ನೈಟ್’ ಶೀರ್ಘಿಕೆಯೊಂದಿಗೆ ನಡೆಯುವ ಈ ಪಂದ್ಯಾಟದ ಮುಖ್ಯ ಉದ್ದೇಶ ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ.

ಸುಪರ್ ಬಾಕ್ಸಿಂಗ್ ಲೀಗ್ (ಎಸ್‌ಬಿಎಲ್) ಪ್ರಸ್ತುತ ಪಡಿಸುತ್ತಿರುವ ಈ ಬಾಕ್ಸಿಂಗ್ ಮೇಳವನ್ನು ಮಾಹೆಯು ನಿಪ್ಪಾನ್ ಟೆಲಿಗ್ರಾಫ್ ಹಾಗೂ ಟೆಲಿಗ್ರಾಫ್ ಪಬ್ಲಿಕ್ ಕಾರ್ಪೋರೇಷನ್ ಸಹಯೋಗದೊಂದಿಗೆ ಆಯೋಜಿಸುತ್ತಿದೆ.
ಈ ಪಂದ್ಯಾಟವನ್ನು ಡಬ್ಲ್ಯುಬಿಸಿಯ ಜಾಗತಿಕ ಮಟ್ಟದ ಪ್ರಥಮ ಭಾರತೀಯ ಬಾಕ್ಸರ್ ನೀರಜ್ ಗೋಯಟ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ, ಮಾಹೆ ಕ್ರೀಡಾ ಮಂಡಳಿಯ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ.ಕಾರ್, ಮಾಹೆ ಐಟಿ ಮತ್ತು ಡಿಜಿಟಲ್ ವಿಭಾಗದ ನಿರ್ದೇಶಕ ಪ್ರೊ.ಬಾಲಕೃಷ್ಣ ರಾವ್, ವಿದ್ಯಾರ್ಥಿ ಕ್ಷೇಮ ಪಾಲನ ವಿಭಾಗದ ನಿರ್ದೇಶಕಿ ಡಾ.ಗೀತಾ ಮಯ್ಯ, ಮಾಹೆಯ ವಿಠಲದಾಸ್ ಭಟ್, ಕರ್ನಲ್ ಪ್ರಕಾಶ್‌ಚಂದ್ರ ಉಪಸ್ಥಿತರಿದ್ದರು.

ಸ್ಪರ್ಧೆಗಳು ಎ.9 ಮತ್ತು 10ರಂದು ಎರಡು ದಿನಗಳ ಕಾಲ ಎಂಐಟಿಯ ಚೌಕಾಂಗಣದಲ್ಲಿ ಪ್ರತಿದಿನ ನಾಲ್ಕರಂತೆ ಒಟ್ಟು ಎಂಟು ಬಾಕ್ಸಿಂಗ್ ಪಂದ್ಯಗಳು ನಡೆಯಲಿವೆ. ಸೂಪರ್ ಫೆದರ್‌ವೆಯ್ಟ್, ಸುಪರ್ ಲೈಟ್‌ವೆಯ್ಟ್, ಸೂಪರ್ ಮಿಡ್ಲ್‌ವೆಯ್ಟ್, ಲೈಟ್ ಹೆವಿವೆಯ್ಟ್ ವಿಭಾಗಗಳಲ್ಲಿ ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.

ಮೊದಲ ದಿನ ಸಂಗೀತ ಬಿರ್ಡಿ (ಬ್ರಿಟಿಷ್ ಚಾಂಪಿಯನ್), ನೀತೂ (ರಾಜ್ಯಮಟ್ಟದ ಬೆಳ್ಳಿಪದಕ ವಿಜೇತೆ), ನಿತ್ವೀರ್‌ಸಿಂಗ್ (ರಾಜ್ಯಮಟ್ಟದ ಸ್ವರ್ಣ ಪದಕ ವಿಜೇತ), ಅಂಕಿತ್‌ಕುಮಾರ್ (ಎರಡು ಬಾರಿ ರಾಜ್ಯದ ಬೆಳ್ಳಿಪದಕ ವಿಜೇತ), ಸಂದೀಪ್ (ರಾ.ಜೂನಿಯರ್ ಚಾಂಪಿಯನ್), ಲವ್‌ಪ್ರೀತ್ ಸಿಗ್, ಆಕಾಶ್‌ದೀಪ್ ಸಿಂಗ್ ಹಾಗೂ ಗುರುಪ್ರೀತ್ ಸಿಂಗ್ ಭಾಗವಹಿಸಲಿದ್ದಾರೆ.

ರವಿವಾರದಂದು ನೀರಜ್ ಗೋಯಟ್ ಹಾಗೂ ಸುರೇಶ್ ಪಶಾಮ್ (೨೦೧೮ರ ರಾಷ್ಟ್ರೀಯ ಪದಕ ವಿಜೇತ) ನಡುವಿನ ಹಣಾಹಣಿ ಪ್ರಧಾನ ಆಕರ್ಷಣೆಯಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News