ಐಪಿಎಲ್: ಡೆಲ್ಲಿ ಆಲ್‌ರೌಂಡ್ ಆಟಕ್ಕೆ ಕೆಕೆಆರ್ ಕಂಗಾಲು

Update: 2022-04-10 14:38 GMT
photo:twitter/@IPL

 ಮುಂಬೈ, ಎ.10: ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್, ಕುಲದೀಪ್ ಯಾದವ್(4-35) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್‌ನ 19ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 44 ರನ್‌ಗಳ ಅಂತರದಿಂದ ಮಣಿಸಿತು.

ರವಿವಾರ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 216 ರನ್ ಗುರಿ ಪಡೆದ ಕೋಲ್ಕತಾ ತಂಡ 19.4 ಓವರ್‌ಗಳಲ್ಲಿ 171 ರನ್‌ಗೆ ಆಲೌಟಾಯಿತು. ನಾಯಕ ಶ್ರೇಯಸ್ ಅಯ್ಯರ್(54 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು.

ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಖಲೀಲ್ ಅಹ್ಮದ್(3-25), ಶಾರ್ದೂಲ್ ಠಾಕೂರ್(2-30)ಐದು ವಿಕೆಟ್‌ಗಳನ್ನು ಹಂಚಿಕೊಂಡು ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಕೆಕೆಆರ್ ಪರ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ(8) ಹಾಗೂ ವೆಂಕಟೇಶ್ ಅಯ್ಯರ್(18) ಉತ್ತಮ ಆರಂಭ ಒದಗಿಸಲು ವಿಫಲರಾದರು. ತಂಡವು 38 ರನ್‌ಗೆ 2 ವಿಕೆಟ್ ಕಳೆದುಕೊಂಡಾಗ ಜೊತೆಯಾದ ಶ್ರೇಯಸ್ ಅಯ್ಯರ್ ಹಾಗೂ ನಿತಿಶ್ ರಾಣಾ(30 ರನ್, 20 ಎಸೆತ, 3 ಸಿಕ್ಸರ್)69 ರನ್ ಜೊತೆಯಾಟ ನಡೆಸಿದರು. ನಿತಿಶ್ ರಾಣಾ ವಿಕೆಟನ್ನು ಕಬಳಿಸಿದ ಲಲಿತ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು. ಈ ಇಬ್ಬರು ಔಟಾದ ಬಳಿಕ ಕೆಕೆಆರ್ ಕುಸಿತದ ಹಾದಿ ಹಿಡಿಯಿತು. ಆ್ಯಂಡ್ರೆ ರಸೆಲ್(24) ಹಾಗೂ ಸ್ಯಾಮ್ ಬಿಲ್ಲಿಂಗ್ಸ್(15)ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.

ಮೊದಲ ವಿಕೆಟ್‌ಗೆ 93 ರನ್ ಜೊತೆಯಾಟ ನಡೆಸಿದ ಡೇವಿಡ್ ವಾರ್ನರ್(61 ರನ್, 45 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಪೃಥ್ವಿ ಶಾ(51 ರನ್, 29 ಎಸೆತ, 7 ಬೌಂಡರಿ, 2 ಸಿಕ್ಸರ್)ದೊಡ್ಡ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಪೃಥ್ವಿ ಶಾ 9ನೇ ಓವರ್‌ನಲ್ಲಿ ವರುಣ್ ಚಕ್ರವರ್ತಿಗೆ ಕ್ಲೀನ್ ಬೌಲ್ಡ್ ಆದ ಬಳಿಕ ನಾಯಕ ರಿಷಭ್ ಪಂತ್ (27 ರನ್, 14 ಎಸೆತ, 2 ಬೌಂಡರಿ, 2 ಸಿಕ್ಸರ್) ಅವರೊಂದಿಗೆ ಕೈಜೋಡಿಸಿದ ವಾರ್ನರ್ ಎರಡನೇ ವಿಕೆಟಿಗೆ 55 ರನ್ ಜೊತೆಯಾಟದಲ್ಲಿ ಭಾಗಿಯಾದರು. ಪಂತ್,ಲಲಿತ್ ಯಾದವ್(1),ರಾವ್‌ಮನ್ ಪೊವೆಲ್(8)ಹಾಗೂ ವಾರ್ನರ್ ಬೆನ್ನುಬೆನ್ನಿಗೆ ಔಟಾದರು.

ಆಗ ಆಲ್‌ರೌಂಡರ್‌ಗಳಾದ ಶಾರ್ದೂಲ್ ಠಾಕೂರ್ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಆಸರೆಯಾದರು. ಶಾರ್ದೂಲ್ ಠಾಕೂರ್(ಔಟಾಗದೆ 29 ರನ್, 11 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಅಕ್ಷರ್ ಪಟೇಲ್ (ಔಟಾಗದೆ 22 ರನ್, 14 ಎಸೆತ, 2 ಬೌಂಡರಿ, 1 ಸಿಕ್ಸರ್)ಆರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಕೇವಲ 20 ಎಸೆತಗಳಲ್ಲಿ 49 ರನ್ ಸೇರಿಸಿ ಡೆಲ್ಲಿಯ ಸ್ಕೋರನ್ನು 215ಕ್ಕೆ ತಲುಪಿಸಿದರು.

ಕೆಕೆಆರ್ ಪರ ಸುನೀಲ್ ನರೇನ್(2-21)ಯಶಸ್ವಿ ಬೌಲರ್ ಎನಿಸಿಕೊಂಡರು. ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್ ಹಾಗೂ ವರುಣ್ ಚಕ್ರವರ್ತಿ 4 ಓವರ್‌ಗಳ ಬೌಲಿಂಗ್‌ನಲ್ಲಿ 40ಕ್ಕೂ ಅಧಿಕ ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News