ಉಡುಪಿ ಜಿಲ್ಲೆಯಲ್ಲಿ ಬೀಚ್, ಟೆಂಪಲ್ ಟೂರಿಸಂ ಅಭಿವೃದ್ಧಿಗೆ ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ

Update: 2022-04-11 16:18 GMT

ಉಡುಪಿ : ಕೇಂದ್ರದ ಸಿಆರ್‌ಝಡ್ ನಿಯಮಾವಳಿಗಳನ್ನು ಕೆಲವು  ವಿನಾಯಿತಿಯೊಂದಿಗೆ ಬದಲಾಯಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಲಾ ಗಿದ್ದು, ಸಚಿವಾಲಯ ಇದಕ್ಕೆ ಪೂರಕವಾಗಿ ಸ್ಪಂಧಿಸಿದೆ. ಶೀಘ್ರದಲ್ಲೇ ಇದು ಜಾರಿಗೊಂಡರೆ ಜಿಲ್ಲೆಯಲ್ಲಿ ಬೀಚ್ ಟೂರಿಸಂ ಹಾಗೂ ಟೆಂಪಲ್ ಟೂರಿಸಂನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದ ವತಿಯಿಂದ ಉಡುಪಿಯ ಬನ್ನಂಜೆಯಲ್ಲಿ ನಿರ್ಮಿಸಲಾದ ಡಾ.ವಿ.ಎಸ್. ಆಚಾರ್ಯ ಗ್ರಾಮಾಂತರ ಬಸ್ ನಿಲ್ದಾಣವನ್ನು ಇಂದು ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣಗೊಂಡ ಈ ಬಸ್ ನಿಲ್ದಾಣದಲ್ಲಿ ಸಮಯ ಪಾಲನೆ, ಸ್ವಚ್ಛತೆ ಹಾಗೂ ಸೇವಾ ಬದ್ಧತೆಗೆ ಆದ್ಯತೆ ನೀಡಬೇಕು. ಸಾರಿಗೆ ಸೇವೆಯಲ್ಲಿ ಸಮಯ ಮತ್ತು ಬದ್ಧತೆ ಬಹಳ ಮುಖ್ಯ. ಕರಾವಳಿ ಪ್ರದೇಶದಲ್ಲಿ ಖಾಸಗಿ ಸಾರಿಗೆ ದೊಡ್ಡ ಪ್ರಮಾಣದಲ್ಲಿ ಜನರ ಸೇವೆ ಮಾಡುತ್ತಿದೆ. ಹೀಗಾಗಿ ನೀವು  ಖಾಸಗಿಯವರಿಗಿಂತ ಹೆಚ್ಚಿನ ದಕ್ಷತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸ ಬೇಕು. ಶಾಲಾ, ಕಾಲೇಜು ಮಕ್ಕಳಿಗೆ, ಆಸ್ಪತ್ರೆಗಳಿಗೆ ಹೋಗುವವರಿಗೆ ಬಸ್ ಸೇವೆ ಅತ್ಯಂತ ಮಹತ್ವದ್ದು ಎಂದರು.

ಮಲ್ಟಿಫ್ಲೆಕ್ಸ್ ಬಗ್ಗೆ ತೀರ್ಮಾನ: ಈ ಬಸ್‌ ನಿಲ್ದಾಣದಲ್ಲಿ ಮೇಲಿನ ಮಹಡಿಗಳಲ್ಲಿ ಮಾಲ್‌ ನೊಂದಿಗೆ ಎರಡು ಮಲ್ಟಿಫ್ಲೆಕ್ಸ್ ಚಿತ್ರಮಂದಿರ ನಿರ್ಮಾಣದ ಕುರಿತಂತೆ ಶಾಸಕ ರಘುಪತಿ ಭಟ್ ಮಾಡಿರುವ ಮನವಿಯ ಬಗ್ಗೆ ಮಾತನಾಡಿದ ಸಿಎಂ, ಶೀಘ್ರವೇ ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿ, ನಿರ್ಧಾರ ತೆಗೆದುಕೊಳ್ಳಲಾಗು ವುದು. ಆದರೆ ಬಸ್‌ಗಳ ಓಡಾಟದ ಸಮಯ ಪರಿಪಾಲನೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಉಡುಪಿಗೆ ಪಿಪಿಪಿ ಮಾದರಿಯಲ್ಲೇ ಮೆಡಿಕಲ್ ಕಾಲೇಜು

ಉಡುಪಿಯಲ್ಲಿ ೨೫೦ ಹಾಸಿಗೆಗಳ ಜಿಲ್ಲಾಸ್ಪತ್ರೆ ತ್ವರತಿಗತಿಯಲ್ಲಿ ನಿರ್ಮಾಣ ಗೊಳ್ಳುತ್ತಿದೆ. ಇದರಿಂದ ಇಲ್ಲಿಗೆ ಮೆಡಿಕಲ್ ಕಾಲೇಜು ನೀಡಬೇಕೆಂಬ ಬೇಡಿಕೆ ಕುರಿತು ಮಾತನಾಡಿದ ಬೊಮ್ಮಾಯಿ, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವ ಬಗ್ಗೆ ಡಿಪಿಆರ್ ತಯಾರಿಸಲು ಸೂಚಿಸಲಾಗಿದ್ದು, ಇದರ ವರದಿ ಕೈಸೇರಿದ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು.

ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆಯು ಸರಕಾರದ್ದಾಗಿದ್ದು, ಕಾಲೇಜನ್ನು ಮಾತ್ರ  ಖಾಸಗಿಯವರು ನಡೆಸುತ್ತಾರೆ. ಇಲ್ಲಿ ಬಡವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಲಾಗುವುದು. ಇನ್ನು ಉಡುಪಿಯ ತಾಯಿಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ನಡೆಸಲು ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ವಾಗಿದ್ದು, ಕೂಡಲೇ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ 20 ಹಾಸಿಗೆಗಳ ಆಸ್ಪತ್ರೆಯನ್ನು ಸರಕಾರ ನಿರ್ವಹಿಸಲಿದೆ ಎಂದರು.

ಉಡುಪಿ ನಗರಕ್ಕೆ ತುರ್ತು ಅಗತ್ಯವಾದ ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಡಿಪಿಆರ್ ಸಿದ್ಧವಾದ ತಕ್ಷಣ ಒಳಚರಂಡಿ ಯೋಜನೆಗೆ ಮಂಜೂರಾತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ, ಕರಾವಳಿ ಭಾಗದ ಜನರ ಆರ್ಥಿಕ ಪರಿಸ್ಥಿತಿ ಉತ್ತಮ ಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.

ಸಾರಿಗೆ ಮತ್ತು ಇಂಧನ ಇಲಾಖೆಯ ಸುಧಾರಣೆ ಕುರಿತಂತೆ ವರದಿ ನೀಡಲು  ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದ್ದು, ಇವುಗಳಿಗೆ ಶೀಘ್ರವೇ ವರದಿ ನೀಡುವಂತೆ ತಿಳಿಸಲಾಗಿದೆ. ವರದಿಗಳು ಕೈಸೇರಿದ ಕೂಡಲೇ ಇಲಾಖೆಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಇಲಾಖೆಯನ್ನು ಲಾಭದಾಯಕವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತಿದ್ದು, ಇದಕ್ಕಾಗಿ ಹಿರಿಯ ಅಧಿಕಾರಿ ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿಯೊಂದನ್ನು ರಚಿಸಲಾಗಿದೆ. ಇದು ನೀಡುವ ವರದಿಯಂತೆ  ಸೂಕ್ತ ಬದಲಾವಣೆ ಮಾಡಲಾಗುವುದು ಎಂದರು.

ಕಳೆದ ವರ್ಷ ಮುಷ್ಕರ ಹೂಡಿದ್ದಕ್ಕಾಗಿ ಅಮಾನತುಗೊಂಡಿದ್ದ ನಿಗಮದ ೨೧೨೬ ನೌಕರರ ಪೈಕಿ ೧೩೦೦ ಮಂದಿಯನ್ನು ಮರುನೇಮಕಾತಿ ಮಾಡಿಕೊಳ್ಳ ಲಾಗಿದೆ. ಉಳಿದವರನ್ನು ಒಂದು ತಿಂಗಳಲ್ಲಿ ಮರುನೇಮಕಾತಿ ಮಾಡಲಾಗುವುದು. ಅದೇ ರೀತಿ ಕೆಎಸ್ಸಾರ್ಟಿಸಿ ೧೪೫ ಮಂದಿಯಲ್ಲಿ ೫೦ ಮಂದಿ ಮರು ನೇಮಕಾತಿಗೊಂಡಿದ್ದಾರೆ. ಉಳಿದವರನ್ನು ಶೀಘ್ರವೇ ಮಾಡಲಾಗುವುದು ಎಂದರು.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್‌ ಕುಮಾರ್, ಮಟ್ಟಾರು ರತ್ನಾಕರ ಹೆಗ್ಡೆ, ಲಾಲಾಜಿ ಮೆಂಡನ್, ಮಂಜುನಾಥ ಭಂಡಾರಿ, ಸುಮಿತ್ರಾ ನಾಯಕ್, ಮನೋಹರ್ ಕಲ್ಮಾಡಿ, ನಿಗಮದ ನಿರ್ದೇಶಕರಾದ ಪಿ.ರುದ್ರೇಶ್, ರಾಜು ವಿಠಲಸಾ, ಆರುಂಡಿ ನಾಗರಾಜ್, ಡಿಸಿ ಕೂರ್ಮಾರಾವ್, ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ ಎಸ್.ಎನ್.ಅರುಣ್ ಸ್ವಾಗತಿಸಿದರೆ, ಶಾಸಕ ಕೆ.ರಘುಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗೀಯ  ಸಂಚಲನಾಧಿಕಾರಿ ಮರಿಗೌಡ ವಂದಿಸಿದರು.

ಕಾರ್ಯಕ್ರಮದಲ್ಲಿ ೧೯ ಮಂದಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿಪದಕ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News