ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರ ಆತ್ಮಹತ್ಯೆ

Update: 2022-04-12 17:36 GMT

ಉಡುಪಿ : ಪಂಚಾಯತ್‌ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದ ಬೆಳಗಾವಿ ಹಿಂಡಲಗಿಯ ಗುತ್ತಿಗೆದಾರ ಸಂತೋಷ್ ಪಾಟೀಲ್(36), ಉಡುಪಿಯ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಮೂಲಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಿದ್ದ 40 ಪರ್ಸೆಟ್ ಕಮಿಷನ್ ಆರೋಪವು ಇದೀಗ ಹೊಸ ತಿರುವು ಪಡೆದುಕೊಂಡಿದೆ.

ಎ.11ರಂದು ಸಂಜೆ 5ಗಂಟೆಗೆ ಸಂತೋಷ್ ಪಾಟೀಲ್ ತನ್ನ ಗೆಳೆಯರಾದ ಬೈಂದೂರು ಮೂಲದ ಪ್ರಶಾಂತ್ ಶೆಟ್ಟಿ ಹಾಗೂ ಮಡಿಕೇರಿಯ ಸಂತೋಷ್ ಜೊತೆಗೆ ಉಡುಪಿಗೆ ಕಾರಿನಲ್ಲಿ ಪ್ರವಾಸ ಬಂದಿದ್ದರು. ಪ್ರಶಾಂತ್ ಶೆಟ್ಟಿ ಧಾರವಾಡ ದಲ್ಲಿ ಹೊಟೇಲ್ ವ್ಯವಹಾರ ಮಾಡಿ ಕೊಂಡಿದ್ದು, ಅಲ್ಲಿಗೆ ಸಂತೋಷ್ ಪಾಟೀಲ್ ಬರುತ್ತಿದ್ದುದರಿಂದ ಇವರಿಬ್ಬರಿಗೆ ಗೆಳೆತನವಾಗಿತ್ತು. ಹೀಗೆ ಇವರು ಹಲವು ಬಾರಿ ಪ್ರವಾಸಕ್ಕೆ ಹೋಗಿದ್ದರೆಂದು ತಿಳಿದುಬಂದಿದೆ.

ಹೀಗೆ ಉಡುಪಿಗೆ ಆಗಮಿಸಿದ ಇವರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್‌ನಲ್ಲಿ ಎರಡು ರೂಮ್ ಪಡೆದುಕೊಂಡಿದ್ದರು. ಬಳಿಕ ರಾತ್ರಿ ಮೂವರು ಕಾರಿನಲ್ಲಿ ಬೇರೆ ಹೊಟೇಲಿಗೆ ಊಟಕ್ಕೆ ತೆರಳಿದ್ದು, ಅಲ್ಲಿ ಜ್ಯೂಸ್ ಪಾರ್ಸೆಲ್ ಪಡೆದುಕೊಂಡ ಸಂತೋಷ್ ಪಾಟೀಲ್, ತನಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದು, ಅದಕ್ಕೆ ಅವರನ್ನು ಗೆಳೆಯರು ಕಾರಿನಲ್ಲಿ ಕರೆದುಕೊಂಡು ಬಂದು ಲಾಡ್ಜ್‌ನಲ್ಲಿ ಬಿಟ್ಟು ವಾಪಾಸ್ಸು ಊಟಕ್ಕೆ ತೆರಳಿದರು.

ಜ್ಯೂಸ್‌ನಲ್ಲಿ ವಿಷ ಸೇವನೆ

ರಾತ್ರಿ 11ಗಂಟೆ ಸುಮಾರಿಗೆ ಲಾಡ್ಜ್‌ಗೆ ಬಂದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್, ಸಂತೋಷ್ ಪಾಟೀಲ್ ಅವರ ಆರೋಗ್ಯ ವಿಚಾರಿಸಿ, ತಮ್ಮ ರೂಮಿಗೆ ಹೋಗಿ ಮಲಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ ರಾತ್ರಿ 11.37ರ ಸುಮಾರಿಗೆ ಸಂತೋಷ್ ಪಾಟೀಲ್, ಬೆಳಗಾವಿಯ ಮಾಧ್ಯಮದವರಿಗೆ ಡೆತ್‌ನೋಟು ವಾಟ್ಸಾಪ್ ಸಂದೇಶ ಕಳುಹಿಸಿ, ತಾನು ತಂದಿದ್ದ ಜ್ಯೂಸ್‌ಗೆ ವಿಷ ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಎ.12ರಂದು ಬೆಳಗ್ಗೆ ಇನ್ನೊಂದು ರೂಮಿನಲ್ಲಿ ಮಲಗಿದ್ದ ಗೆಳೆಯರು ಟಿವಿಯಲ್ಲಿ ಬರುತ್ತಿದ್ದ ಸಂತೋಷ್ ಪಾಟೀಲ್ ಡೆತ್‌ನೋಟು ಸುದ್ದಿ ನೋಡಿದರು. ಕೂಡಲೇ ಲಾಡ್ಜ್‌ನವರಿಗೆ ಮಾಹಿತಿ ನೀಡಿ, ಡುಪ್ಲಿಕೇಟ್ ಕೀ ಬಳಸಿ ರೂಮಿನ ಬಾಗಿಲು ತೆರೆದಾಗ ಸಂತೋಷ್ ಪಾಟೀಲ್ ಮೃತಪಟ್ಟಿರುವುದು ಬೆಳಕಿಗೆ ಬಂತೆನ್ನಲಾಗಿದೆ.

ಮೊಬೈಲ್ ಮೂಲಕ ಪತ್ತೆ

ಈ ಮಧ್ಯೆ ಸಂತೋಷ್ ಪಾಟೀಲ್ ಅವರ ವಾಟ್ಸಾಪ್ ಸಂದೇಶವನ್ನು ನೋಡಿ ಪತ್ನಿ ಹಾಗೂ ಮನೆಯವರು ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದಿದ್ದಾಗ ಪಾಟೀಲ್ ಪತ್ನಿ ಬೆಳಗಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂದರ್ಭ ಪಾಟೀಲ್‌ರ ಮೊಬೈಲ್ ಲೋಕೆಷನ್ ಹುಡುಕಾಡಿದಾಗ ಉಡುಪಿ ಎಂಬುದಾಗಿ ತೋರಿಸುತ್ತಿತ್ತು. ಹಾಗಾಗಿ ಈ ಬಗ್ಗೆ ಬೆಳಗಾವಿ ಪೊಲೀಸರು ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಉಡುಪಿ ಪೊಲೀಸರು ಕೂಡ ಲೋಕೆಷನ್ ತೋರಿಸಿದ ಪ್ರದೇಶದ ಸುತ್ತ ಹುಡುಕಾಡಿದಾಗ ಈ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂತು.

ಸ್ಥಳಕ್ಕೆ ಮಂಗಳೂರು ಐಜಿಪಿ ದೇವಜ್ಯೋತಿ ರೇ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಯ್ಯ, ಡಿವೈಎಸ್ಪಿ ಸುಧಾಕರ್ ನಾಯ್ಕ್, ತನಿಖಾಧಿಕಾರಿ ಉಡುಪಿ ನಗರ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಸೆನ್ ಪೊಲೀಸ್ ನಿರೀಕ್ಷಕ ಮಂಜುನಾಥ್ ಆಗಮಿಸಿ ಪರಿಶೀಲನೆ ನಡೆಸಿದರು.

ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ.

ಪಾಟೀಲ್‌ರ ವಾಟ್ಸಾಪ್ ಡೆತ್‌ನೋಟ್!

‘ನನ್ನ ಸಾವಿಗೆ ನೇರ ಕಾರಣ ಕೆ.ಎಸ್.ಈಶ್ವರಪ್ಪ ಸಚಿವರು ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಕರ್ನಾಟಕ ಸರಕಾರ ಇವರಿಗೆ ತಕ್ಕ ಶಿಕ್ಷೆ ಆಗ ಬೇಕು. ನನ್ನೇಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯುತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿಂವರೆಂನ್ನದೆ ಎಲ್ಲರು ಸಹಯ ಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆಗೆ ಬಂದ ನನ್ನ ಗೆಳೆಯರಾದ ಸಂತೋಷ್ ಮತ್ತು ಪ್ರಶಾಂತ್‌ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ. ಆದರೆ ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೇ ಸಂಬಂಧ ಇರುವುದಿಲ್ಲ’

ಆತ್ಮಹತ್ಯೆ ಮಾಡಿಕೊಂಡ ರೂಮ್‌ಗೆ ಸೀಲ್!

ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರೂಮಿಗೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ತನಿಖೆಯ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಆಗಮಿಸುವವರೆಗೆ ರೂಮ್‌ನ್ನು ಸಂಪೂರ್ಣ ಸೀಲ್ ಮಾಡಿಕೊಂಡರು.

ಬೆಳಗ್ಗೆಯಿಂದ ರಾತ್ರಿವರೆಗೆ ಮೃತದೇಹವನ್ನು ರೂಮಿನಲ್ಲಿಯೇ ಇರಿಸಲಾಗಿತ್ತು. ಮೃತರ ಸಹೋದರ ಬೆಂಗಳೂರಿನ ವಿ.ಜಿ. ಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹಾಗೂ ಬೆಳಗಾವಿಯಲ್ಲಿರುವ ಇನ್ನೋರ್ವ ಸಹೋದರ ಉಡುಪಿಗೆ ಹೊರಟಿದ್ದು, ಅವರ ಬಂದ ಬಳಿಕವಷ್ಟೆ ರೂಮ್ ತೆರೆದು ತನಿಖೆ ಆರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸಿಎಂ ಭೇಟಿಗಾಗಿ ಉಡುಪಿಗೆ ಬಂದಿದ್ದರು?

ಬೆಳಗಾವಿ ಜಿಲ್ಲೆಯ ಸಂತೋಷ್ ಪಾಟೀಲ್ ಉಡುಪಿಗೆ ಬಂದು ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ.

ಒಂದು ಮೂಲಗಳ ಪ್ರಕಾರ ಸಂತೋಷ್ ಪಾಟೀಲ್, ಉಡುಪಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಬಂದಿರಬೇಕು ಎಂದು ಹೇಳಲಾಗುತ್ತಿದೆ. ಇವರು ಉಡುಪಿಯಲ್ಲಿ ಮುಖ್ಯ ಮಂತ್ರಿ ಭೇಟಿಗೆ ಸಾಕಷ್ಟು ಪ್ರಯತ್ನ ಮಾಡಿದ್ದಾರೆಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಸಂತೋಷ್‌ ಕೆ ಪಾಟೀಲ್‌ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ರಾಜ್ಯದ ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ  ಕೆ. ಎಸ್‌. ಈಶ್ವರಪ್ಪ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿ ದೂರು ನೀಡಿದ್ದರು.

ವೃತ್ತಿಯಲ್ಲಿ ಸಿವಿಲ್‌ ಗುತ್ತಿಗೆದಾರರಾಗಿರುವ ಸಂತೋಷ ಪಾಟೀಲ್, ತನ್ನ ಬಾಕಿ ಬಿಲ್‌ ಮೊತ್ತವಾದ ರೂ. 4 ಕೋಟಿ ಪಾವತಿಸಲು ಸಚಿವರು ಮತ್ತು ಅವರ ಸಹವರ್ತಿಗಳು ಕಮಿಷನ್‌ ಬೇಡಿಕೆಯಿಟ್ಟಿದ್ದಾರೆಂದು ಪಾಟೀಲ್‌ ಪತ್ರದಲ್ಲಿ ಆರೋಪಿಸಿದ್ದರು.

ಸಚಿವ ಈಶ್ವರಪ್ಪ ಅವರು 12-02-2021ರಂದು ಕೆಲವೊಂದು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ತಮಗೆ ಸೂಚಿಸಿದ್ದರೆಂದು ಹಾಗೂ ಅವರನ್ನು ನಂಬಿ ಅಂದಾಜು ರೂ. 4 ಕೋಟಿ ವೆಚ್ಚದ 108 ಗೂ ಅಧಿಕ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು ಎಂದು ಪತ್ರದಲ್ಲಿ ಹೇಳಲಾಗಿತ್ತು. ʻʻಕಾಮಗಾರಿ ಪೂರ್ಣಗೊಂಡು ಒಂದು ವರ್ಷಕ್ಕಿಂತ ಮೇಲಾಗಿದ್ದರೂ ಯಾವುದೇ ವರ್ಕ್‌ ಆರ್ಡರ್‌ ಅಥವಾ  ಹಣವೂ ಸಂದಾಯವಾಗಿಲ್ಲʼʼ ಎಂದು ಪಾಟೀಲ್‌ ತಮ್ಮ ಪತ್ರದಲ್ಲಿ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News