ಮಲ್ಪೆ ಬೋಟಿನಲ್ಲಿ ಮೀನು ಕಾರ್ಮಿಕನ ಕೊಲೆ

Update: 2022-04-14 15:23 GMT

ಮಲ್ಪೆ : ಮಲ್ಪೆ ಬಾಪುತೋಟ ಧಕ್ಕೆಯಲ್ಲಿ ಲಂಗಾರು ಹಾಕಿದ್ದ ಬೋಟಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮೀನು ಕಾರ್ಮಿಕನೋರ್ವ ತನ್ನ ಸಹಪಾಠಿ ಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.

ಕೊಲೆಯಾದವರನ್ನು ಕೊಪ್ಪಲ ಜಿಲ್ಲೆಯ ಕುಕ್ಕುನೂರಿನ ಮಹಾಂತೇಶ್ (35) ಎಂದು ಗುರುತಿಸಲಾಗಿದೆ. ಹೊನ್ನಾವರ ತಾಲೂಕಿನ ಬೇಳೆಕೆರೆಯ ನಾಗರಾಜ್ (26) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಇತರ ಮೀನುಗಾರರೊಂದಿಗೆ ಶ್ರೀಗುರು ಸಿದ್ದಿ ಬೋಟಿನಲ್ಲಿ ಮೀನುಗಾರಿಕೆ ಮುಗಿಸಿ ಎ.13ರಂದು ಮಲ್ಪೆ ಬಂದರಿಗೆ ಆಗಮಿಸಿದ್ದರು. ಬೋಟು ಬಾಪುತೋಟ ಧಕ್ಕೆಯಲ್ಲಿ ಲಂಗರು ಹಾಕಿ, ಬೋಟಿನ ಕಲಾಸಿಗಳಾದ ಬರಮಪ್ಪ ಮತ್ತು ಮಹಾಂತೇಶ ಮಲ್ಪೆಪೇಟೆಗೆ ಹೋಗಿದ್ದರು. ಅಲ್ಲಿಂದ ಇವರಿಬ್ಬರು ರಾತ್ರಿ ಸ್ನೇಹಿತ ಶಾಂತಪ್ಪ ಜೊತೆ ಬೋಟಿಗೆ ಬಂದಿದ್ದರು.

ಬೋಟಿನಲ್ಲಿ ಇತರ ಕಲಾಸಿಗರಾದ ಉಮೇಶ ಮತ್ತು ನಾಗರಾಜ ಮಲಗಿದ್ದರು. ಮಹಾಂತೇಶ್ ಹಾಗೂ ಇತರರು ಊಟ ಮಾಡುವುದಕ್ಕಾಗಿ ಬೋಟಿನ ಕ್ಯಾಬಿನ್ ಒಳಗಡೆಯ ಲೈಟ್ ಹಾಕಿದರು. ಆಗ ಲೈಟ್ ಆಫ್ ಮಾಡುವಂತೆ ನಾಗರಾಜ ತಿಳಿಸಿದ್ದು ಇದೇ ವಿಚಾರವಾಗಿ ಮಹಾಂತೇಶ ಮತ್ತು ನಾಗರಾಜ ಮಾತಿನ ಚಕಮಕಿ ನಡೆಯಿತು. ಹೀಗೆ ಮಾತಿಗೆ ಮಾತು ಬೆಳೆದು ನಾಗರಾಜ ಸಿಟ್ಟಿನಿಂದ ಮಹಾಂತೇಶ್‌ಗೆ ಹಲ್ಲೆ ಮಾಡಿ, ಕಬ್ಬಿಣದ ಗೇರ್ ರಾಡ್‌ನಿಂದ ಮಹಾಂತೇಶನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದನು ಎಂದು ದೂರಲಾಗಿದೆ.

ಇದನ್ನು ತಡೆಯಲು ಹೋದ ಬರಮಪ್ಪಗೂ ನಾಗರಾಜ್ ರಾಡ್‌ನಿಂದ ಹಲ್ಲೆ ಮಾಡಿದನು. ಗಂಭೀರವಾಗಿ ಗಾಯಗೊಂಡ ಮಹಾಂತೇಶರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಇವರು ಎ.14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News