ಭಾರತ ಬಹುತ್ವದೊಂದಿಗೆ ಸಹಜವಾಗಿ ಬದುಕುತ್ತಿದೆ: ಪ್ರೊ. ರಹಮತ್ ತರೀಕೆರೆ

Update: 2022-04-16 14:56 GMT

ಉಡುಪಿ : ಭಾರತ ಬಹುತ್ವದೊಂದಿಗೆ ಸಹಜವಾಗಿ ಬದುಕುತ್ತಿದೆ. ಇದು ಬಹುಭಾಷೆ, ಸಿದ್ಧಾಂತ, ಆಹಾರ ವೈವಿಧ್ಯತೆಯನ್ನು ಒಳಗೊಂಡಿದೆ. ಹೀಗಾಗಿ ಭಾರತ ಸಹಜವಾಗಿ ಬಹುತ್ವದ ದೇಶ ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಹಾಗೂ ಹಿರಿಯ ಚಿಂತಕ ಪ್ರೊ. ರಹಮತ್ ತರೀಕೆರೆ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ಇಂದು ಸಂಜೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಡೆದ ಕರಾವಳಿ ಕಟ್ಟು ಕಾರ್ಯಕ್ರಮ ದಡಿ ‘ತಲ್ಲೂರು ನುಡಿಮಾಲೆ’ ಉಪನ್ಯಾಸ ಸರಣಿಗಳ ಮಾಲಿಕೆಯಲ್ಲಿ ‘ಬಹುತ್ವದ ಬಹುಮುಖಗಳು’ ವಿಷಯದ ಕುರಿತು ಉಪನ್ಯಾಸ ನೀಡುತಿದ್ದರು.

ತಾವು ಗುರುಗಳೆಂದೇ ಭಾವಿಸುವ ಖ್ಯಾತ ವಿಮರ್ಶಕ, ಲೇಖಕ ಉಡುಪಿಯ ಜಿ.ರಾಜಶೇಖರ್‌ಗೆ ತಮ್ಮ ಇಂದಿನ ಉಪನ್ಯಾಸವನ್ನು ಅರ್ಪಿಸುವುದಾಗಿ ಹೇಳುತ್ತಾ ಭಾಷಣ ಪ್ರಾರಂಭಿಸಿದ ಪ್ರೊ. ರಹಮತ್ ತರೀಕೆರೆ, ಕರಾವಳಿಯ ಎರಡು ಜಿಲ್ಲೆಗಳು ಭಾಷೆ, ಧರ್ಮಗಳ ವಿಷಯದಲ್ಲಿ ಬಹುತ್ವಕ್ಕೆ ಅತ್ಯುತ್ತಮ ಮಾದರಿ ಎನಿಸಿದೆ ಎಂದರು. 

ಇಷ್ಟೊಂದು ಸಣ್ಣ ಪ್ರದೇಶದಲ್ಲಿ ಇರುವಷ್ಟು ಭಾಷಾ, ಧರ್ಮ ವೈವಿದ್ಯ ಇನ್ನೆಲ್ಲೂ ಇಲ್ಲ. ಇಲ್ಲಿ 10-12 ಭಾಷೆಗಳು ಬಳಕೆಯಲ್ಲಿವೆ. ಇಲ್ಲಿನ ಅತಿಹೆಚ್ಚು ಜನರು ಹಾಗೂ ಲೇಖಕರು ಬಹುಬಾಷಿಗರಾಗಿದ್ದಾರೆ. ಇಲ್ಲಿನ ಜನರು 2-3 ಭಾಷೆಗಳನ್ನು ಬಲ್ಲವರಾಗಿದ್ದಾರೆ. ಈ ಭಾಗದ ಉದ್ಯಮವನ್ನೂ ಎಲ್ಲಾ ಧರ್ಮದವರು ಸೇರಿ ಕಟ್ಟಿದ್ದು. ಇಲ್ಲಿನ ಆರ್ಥಿಕತೆ, ಸಂಸ್ಕೃತಿ-ಕಲೆಗಳಲ್ಲೂ ಬಹುತ್ವದ ಬುನಾದಿ ಇದೆ. ಮಂಗಳೂರಿನಲ್ಲೇ ಹುಟ್ಟಿದ ಕನ್ನಡದ ಮೊದಲ ಕಾದಂಬರಿ ಬಹುಭಾಷಿಕವಾಗಿದ್ದು ಇದರಲ್ಲಿ ನಾಲ್ಕು ಭಾಷೆಗಳ ಬಳಕೆಯಾಗಿದೆ. ಆದರೆ ದುರಾದೃಷ್ಟವೆಂದರೆ, ಈ ಪರಂಪರೆ ಈಗ ಮುಂದುವರಿದಿಲ್ಲ ಎಂದವರು ವಿಷಾದಿಸಿದರು.

ಬಹುತ್ವ ಎಂದರೆ ಹಲವು ಸಂಗತಿಗಳು ಒಟ್ಟಿಗಿರುವುದು ಮಾತ್ರವಲ್ಲ ಅಲ್ಲಿ ಅನುಸಂಧಾನವಿರುತ್ತದೆ ಭಾಷೆ, ಧರ್ಮ, ಸಂಸ್ಕೃತಿಗಳು ಪರಸ್ಪರ ಸಂಘರ್ಷ, ಸ್ನೇಹದಿಂದ ಹೊಸ ಹುಟ್ಟಿಗೆ ಕಾರಣವಾಗುತ್ತವೆ. ಅಲ್ಲಿ ಕೊಡು-ಕೊಳ್ಳುವ ಪ್ರಕ್ರಿಯೆ ಇರುತ್ತದೆ. ಭಾರತದ ಸಮಾಜವೇ ಸ್ಥಾವರವಲ್ಲದ, ಜಂಗಮ ವ್ಯವಸ್ಥೆಯಾಗಿದೆ ಎಂದು ಪ್ರೊ.ರಹಮತ್ ತರೀಕೆರೆ ಹೇಳಿದರು.

ಕನ್ನಡದಲ್ಲಿ ಕವಿಗಳು ಮಾತೃತ್ವದಲ್ಲಿ ಬಹುತ್ವವನ್ನು ಕಲ್ಪಿಸಿಕೊಳ್ಳುತ್ತಾರೆ. ಬೇಂದ್ರೆ ತಾನು ಐದು ಮಾತೆಯರ ಮಗನೆಂದು ಹೇಳಿಕೊಂಡಿದ್ದಾರೆ. ಬಹುತ್ವವನ್ನು ಕಳೆದುಕೊಂಡ ಸಮಾಜದಲ್ಲಿ ಅಂಗವಿಕಲ ಮಕ್ಕಳಿರಬಹು ದೇನೋ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ  ಸೈರಾಟ್, ಫ್ಯಾಂಡ್ರಿಯಂಥ ಯಶಸ್ವಿ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರಗಳ ನಿರ್ದೇಶಕ ನಾಗರಾಜ ಮಂಜುಳೆ ಅವರ ಕವನ ಸಂಕಲನದ ಕನ್ನಡಾನುವಾದ ‘ಬಿಸಿಲಿನ ಷಡ್ಯಂತ್ರದ ವಿರುದ್ಧ’ ಕೃತಿಯನ್ನು ರಾಷ್ಟ್ರಪ್ರಶಸ್ತಿ ವಿಜೇತ ಸಾಕ್ಷ್ಯ ಚಿತ್ರಗಳ ನಿರ್ದೇಶಕಿ ಫರ್ಹಾ ಖಾತೂನ್ ಬಿಡುಗಡೆಗೊಳಿಸಿದರು.

ಪ್ರತಿ ಕವಿತೆಯೂ ಕವಿಯೊಬ್ಬನ ಭಾವನೆಗಳನ್ನು ತೆರೆದಿಡುತ್ತವೆ. ಅವುಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡುವ ಮೂಲಕ ಎಲ್ಲರಿಗೂ ಅದನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಖಾತೂನ್ ಹೇಳಿದರು. 

ಕನ್ನಡದ ಕವಿ ಹಾಗೂ ಚಿತ್ರಕಥಾ ಲೇಖಕ ಸಂವರ್ತ ಸಾಹಿಲ್ ಅನುವಾದಿಸಿ ರುವ ಈ ಸಂಕಲನವನ್ನು ಗೋವಾದ ಸಹಿತ್ ಪ್ರಕಾಶನ ಪ್ರಕಟಿಸಿದ್ದು,  ಮಹಾರಾಷ್ಟ್ರದ ಅಹ್ಮದ್‌ ನಗರದಲ್ಲಿ ಉಪನ್ಯಾಸಕರಾಗಿರುವ ಕವಿ, ಅನುವಾದಕ ಡಾ.ಕಮಲಾಕರ ಭಟ್ ಪುಸ್ತಕದ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಹಿತ್ ಪ್ರಕಾಶನದ ಕಿಶೋರ್ ಅರ್ಜುನ್, ಅನುವಾದಕ ಸಂವರ್ತ ಸಾಹಿಲ್, ತಲ್ಲೂರು ಫ್ಯಾಮಿಲಿ ಟ್ರಸ್ಟ್ ತಲ್ಲೂರು ಆಡಳಿತ ಟ್ರಸ್ಟಿ ಸುರೇಶ್ ತಲ್ಲೂರು ಉಪಸ್ಥಿತರಿದ್ದರು. 

ಟ್ರಸ್ಟ್‌ನ ಟ್ರಸ್ಟಿಗಳಲ್ಲೊಬ್ಬರಾದ ರಾಜಾರಾಮ್ ತಲ್ಲೂರು ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಉಪನ್ಯಾಸಕಿ ಸುಮಾ ಜೋಸ್  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News