ಉಡುಪಿ ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಪ್ರಯೋಜನ ಸಿಗಲಿ: ಡಿಸಿ ಕೂರ್ಮಾರಾವ್

Update: 2022-04-22 16:32 GMT

ಉಡುಪಿ : ಉಡುಪಿ ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ನ  ಸದುಪಯೋಗದ ಬಗ್ಗೆ ಅರಿವು ಮೂಡಿಸಿ. ಈ ಕಾರ್ಡ್ ಮೂಲಕ ಪಡೆಯಬಹುದಾದ  ಸೌಲಭ್ಯಗಳನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಅರ್ಹ ರೈತರಿಗೆ ಆದ್ಯತೆಯಲ್ಲಿ ವಿತರಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆಗಳನ್ನು ನೀಡಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ  ನಡೆದ ‘ಕಿಸಾನ್ ಭಾಗೀದಾರಿ ಪ್ರಾಥಮಿಕ್ತ ಹಮಾರಿ’ ವಿಶೇಷ ಕಾರ್ಯಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರು ೧,೬೦,೦೦೦ರೂ.ವರೆಗೆ ಯಾವುದೇ ಗ್ಯಾರಂಟಿ ನೀಡದೇ ಬ್ಯಾಂಕ್‌ಗಳಿಂದ ಸಾಲ ಪಡೆಯಬಹುದಾಗಿದೆ. ಇದರಿಂದ ಇತರೆ ವಾಣಿಜ್ಯ ಬ್ಯಾಂಕ್‌ಗಳು ಮತ್ತು ಲೇವಾದೇವಿಗಾರ ರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ತೊಂದರೆಗೀಡಾಗುವುದು ತಪ್ಪುತ್ತದೆ. ರೈತರನ್ನು ಕಿಸಾನ್ ಕಾರ್ಡ್ ಯೋಜನೆಗೆ ನೊಂದಣಿ ಮಾಡಲು ಎ.೨೪ರಿಂದ ಮೇ ೧ರವರೆಗೆ ನಡೆಯುವ ಬೃಹತ್ ಆಂದೋಲನದಲ್ಲಿ ಜಿಲ್ಲೆಯ ಎಲ್ಲಾ ರೈತರನ್ನು ಈ ಯೋಜನೆಯಡಿ ನೊಂದಣಿ ಮಾಡಿ, ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ೧,೬೩,೪೩೯ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಗೊಂಡಿದ್ದು, ಇವರಲ್ಲಿ ೫೫,೧೬೪ ಮಂದಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದಿದ್ದಾರೆ. ಇನ್ನೂ ೧,೧೪,೦೩೩ ರೈತರು ಕಾರ್ಡ್ ಪಡೆಯಲು ಬಾಕಿ ಇದ್ದು, ಈ ರೈತರಿಗೆ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ  ಬ್ಯಾಂಕ್ ಆಧಿಕಾರಿಗಳು ಭಾಗವಹಿಸಿ ಈ ಬಗ್ಗೆ ಮಾಹಿತಿ ನೀಡುವ ಮೂಲಕ, ಬ್ಯಾಂಕ್ ಮಿತ್ರರ ಮೂಲಕ, ಡಿಜಿ ಪೇ ಸಖಿಯರ ಮೂಲಕ ರೈತರ ಮನೆ ಮನೆಗೆ ಭೇಟಿ ನೀಡಿ, ಯೋಜನೆಯ ಬಗ್ಗೆ ಅರಿವು ಮೂಡಿಸುವಂತೆ ತಿಳಿಸಿದರು.

ಎಲ್ಲಾ ಬ್ಯಾಂಕ್‌ಗಳು, ಈ ವಿಶೇಷ ಆಂದೋಲನದ ಅವಧಿಯಲ್ಲಿ ತಮ್ಮ ಬ್ರಾಂಚ್‌ಗಳಲ್ಲಿ ವಾರದಲ್ಲಿ ಕನಿಷ್ಠ ೨ದಿನ ವಿಶೇಷ ಮೇಳಗಳನ್ನು ಆಯೋಜಸಿ, ರೈತರನ್ನು ನೊಂದಣಿ ಮಾಡಬೇಕು. ಎಲ್ಲಾ ಕೃಷಿ ಪ್ರಾಥಮಿಕ ಸಹಕಾರ ಸಂಘಗಳು ಮತ್ತು ರೈತಸೇವಾ ಕೇಂದ್ರಗಳ ಮೂಲಕ ಸಹ ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಯಾಗಿರುವ ರೈತರಿಗೆ ಎಸ್‌ಎಂಎಸ್ ಸಂದೇಶಗಳನ್ನು ಕಳುಹಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.  

ಕಿಸಾನ್ ಕ್ರೆಡಿಟ್ ಕಾರ್ಡ್ ನೊಂದಣಿಗೆ ಬಾಕಿ ಇರುವ ರೈತರ ಪಟ್ಟಿಯನ್ನು ಪರಿಶೀಲಿಸಿ, ಸಂಬಂಧಪಟ್ಟ ತಾಲೂಕುಗಳ ವ್ಯಾಪ್ತಿಯ  ಬ್ಯಾಂಕ್ ಶಾಖೆಗಳು, ಎಲ್ಲಾ ರೈತರನ್ನು ಯೋಜನೆಗೆ ನೊಂದಣಿ ಮಾಡುವ ಕುರಿತಂತೆ ಕಾರ್ಯಕ್ರಮ ಗಳನ್ನು ರೂಪಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸಿ ನಿಗದಿತ ಅವಧಿ ಯೊಳಗೆ ನೊಂದಣಿ ಯನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಗ್ರಾಮಸಭೆಗಳು  ನಡೆಯಲಿದ್ದು, ಸಮೀಪದ ಬ್ಯಾಂಕ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ಬಗ್ಗೆ ಮಾಹಿತಿ ನೀಡಿ. ಎಲ್ಲಾ ಗ್ರಾಮ ಪಂಚಾಯತ್ ಪಿಡಿಓಗಳಿಗೆ ಸಹ ಈ ಬಗ್ಗೆ ಸೂಚನೆ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ,  ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಮೀನುಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್, ಲೀಡ್ ಬ್ಯಾಂಕ್ ಮೆನೇಜರ್ ಪಿಂಜಾರ, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಶ್ರೀಜಿತ್, ನಬಾರ್ಡ್‌ನ ಪ್ರಾದೇಶಿಕ ಮ್ಯಾನೇಜರ್ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಕರ್ನಾಟಕ ಪ್ರಾದೇಶಿಕ ಮ್ಯಾನೇಜರ್ ರಾಜ್‌ಗೋಪಾಲ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ ಅಧಿಕಾರಿಗಳು, ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News