ಮೂರರ ಬುದ್ಧಿ
ಕೆಲವರಿಗೆ ದೇಹದಲ್ಲಿ ಯಾವುದಾದರೊಂದು ಸಮಸ್ಯೆ ಇರುತ್ತದೆ. ಹೃದಯದ್ದೋ, ಮೂತ್ರಪಿಂಡಗಳದ್ದೋ, ಕರುಳಿನದ್ದೋ, ಕಿವಿಯದ್ದೋ; ಎಂತದ್ದೋ. ಅದು ಅವರ ಯಾವ ಪಾಪಕ್ಕೂ ಅಲ್ಲ, ತಪ್ಪಿಗೂ ಅಲ್ಲ. ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತಾರಲ್ಲಾ ಹಾಗೆ. ಅದು ಗಮನಕ್ಕೆ ಬಂದಾಗ ತಜ್ಞರ ಬಳಿ ತೋರಿಸಿ ಅದಕ್ಕೆ ಚಿಕಿತ್ಸೆ ಕೊಡುತ್ತಾ ಅದನ್ನು ಕಡಿಮೆ ಮಾಡಿಕೊಂಡು ಬರುತ್ತೇವೆ. ಹಾಗೆಯೇ ಮಾನಸಿಕ ಸಮಸ್ಯೆಗಳೂ ಕೆಲವರಿಗೆ ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ರೀತಿಯಲ್ಲಿ ಇರುತ್ತದೆ. ಆದರೆ ನಮ್ಮ ಕರ್ಮಕ್ಕೆ ಅದು ದೈಹಿಕ ಸಮಸ್ಯೆಯ ರೀತಿಯಲ್ಲಿ ಭೌತಿಕವಾಗಿ ಕಾಣುವುದಿಲ್ಲ. ಕೈಗೂಸಾಗಿದ್ದರೂ ಹೃದಯದ ಸಮಸ್ಯೆ, ಮೂತ್ರ ಪಿಂಡದ ಸಮಸ್ಯೆಗಳನ್ನು, ಗುರುತಿಸಲು ಸಾಧ್ಯವಾಗುವಂತೆ ಬಹಳ ಸಣ್ಣ ಮಕ್ಕಳಲ್ಲಿ ಕೆಲವು ಬಗೆಯ ಮಾನಸಿಕ ಸಮಸ್ಯೆಗಳನ್ನು ಅರಿಮೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಮಗುವಾಗಿ ಬೆಳೆಬೆಳೆಯುತ್ತಿದ್ದಾಗ ಕೆಲವು ಅನುಚಿತ ವರ್ತನೆಗಳನ್ನು, ಅವೈಚಾರಿಕ ನಡವಳಿಕೆಗಳನ್ನು, ಅಸಹಜ ಗುಣಗಳನ್ನು ಕಂಡರೂ ನಮ್ಮ ಧನಾತ್ಮಕ ಧೋರಣೆಯ ಕುಟುಂಬ, ಮಗು ಬೆಳಿತಾ ಬೆಳಿತಾ ಸರಿ ಹೋಗುತ್ತದೆ ಎಂದು ಸುಮ್ಮನಾಗುತ್ತದೆ. ಇದು ಚಿಕಿತ್ಸೆ ಕೊಡಬೇಕಾದ ರೋಗವೆಂದು ಎಂದಿಗೂ ಅಂದುಕೊಳ್ಳುವುದಿಲ್ಲ. ದೈಹಿಕ ಸಮಸ್ಯೆಗಳಿಗೆ ಗಮನ ಕೊಟ್ಟಂತೆ ಮಾನಸಿಕ ಸಮಸ್ಯೆಗಳಿಗೂ ಗಮನ ಕೊಟ್ಟಿದ್ದರೆ, ನಾವೆಲ್ಲರೂ ಇಷ್ಟು ಹೊತ್ತಿಗಾಗಲೇ ಬಹಳಷ್ಟು ಆರೋಗ್ಯಕರವಾದಂತಹ ಸಮಾಜದಲ್ಲಿ ಉಸಿರಾಡಬಹುದಿತ್ತು. ಬೆಳೆಯುವ ಪೈರು ಮೊಳಕೆಯಲ್ಲಿ, ಬಿತ್ತಿದಂತೆ ಬೆಳೆ, ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ? ಮೂರರ ಬುದ್ಧಿ ನೂರರ ತನಕ-ಈ ಗಾದೆಗಳು ನೇರವಾಗಿ ಮಕ್ಕಳ ಮಾನಸಿಕ ಸ್ಥಿತಿಯನ್ನು ಕುರಿತೇ ಹೇಳಿರುವುದು.
ಅರಿಮೆಗಳೆಂಬ ಬೀಜಗಳನ್ನು ಎಳೆಯ ಹಾಗೂ ಫಲವತ್ತಾದ ಮನಗಳಲ್ಲಿ ಬಿತ್ತಲಾಗುತ್ತದೆ. ಅವು ಹುಲುಸಾಗಿ ಮತ್ತು ಬಲವಾಗಿ ಬೆಳೆದು ನಿಂತಾಗ ಅದನ್ನು ಕತ್ತರಿಸಿ ಹಾಕಲು ಕುಟುಂಬ ಮತ್ತು ಸಮಾಜ ಹೆಣಗಾಡುತ್ತದೆ. ಆಗ ಕಷ್ಟ ಸಾಧ್ಯ. ಯಶಸ್ಸಿನ ಗಾಥೆಗಳು ಇಲ್ಲವೇ ಇಲ್ಲವೆನಿಸುವಷ್ಟು ತೀರಾ ಕಡಿಮೆ. ಮನೆಗಳಲ್ಲಿ ಎದುರಿಗೇ ಎರಡು ಮಕ್ಕಳನ್ನು ನಿಲ್ಲಿಸಿಕೊಂಡು ಈ ಮಗು ಜಾಣ, ಎಲ್ಲದರಲ್ಲೂ ಚುರುಕು, ಮತ್ತೊಂದು ಮಗು ಅಷ್ಟು ಚುರುಕಿಲ್ಲ, ಎಲ್ಲದರಲ್ಲೂ ನಿಧಾನ; ಎನ್ನುವುದನ್ನು ನೋಡುತ್ತೇವೆ. ಚುರುಕಿಲ್ಲ ಎಂದು ಎಲ್ಲರ ಎದುರು ಪದವಿ ಪಡೆವ ಮಗುವು ತಾನು ಚುರುಕಿಲ್ಲದರ ಬಗ್ಗೆ ಕೀಳರಿಮೆಯಿಂದ ನರಳುವುದರ ಜೊತೆಗೆ ತನ್ನ ಕಡೆಗಣಿಸಲು ಕಾರಣವಾಗಿರುವ ಆ ಚುರುಕಿರುವ ಮಗುವಿನ ಬಗ್ಗೆ ದ್ವೇಷ ಮತ್ತು ಅಸೂಯೆಯನ್ನು ಬೆಳೆಸಿಕೊಳ್ಳುತ್ತದೆ. ಸ್ಪರ್ಧೆಗಳನ್ನು ಮಾಡಿ ಗೆದ್ದವರಿಗೆ ಪರಾಕುಗಳನ್ನು ಹಾಕುವಾಗ, ಫಲಕ, ಪದಕ ಮತ್ತು ಇನಾಮುಗಳನ್ನು ಕೊಟ್ಟು ಹೆಸರುಗಳನ್ನು ಕೂಗಿ ಕರೆಯುವಾಗ ಸೋತವರು ಎಂಬ ಭಾವವನ್ನು ಹುಟ್ಟಿಸಿ ಹಲವು ಜೀವಗಳಲ್ಲಿ ಕೀಳರಿಮೆಯನ್ನು ಹುಟ್ಟಿ ಹಾಕುತ್ತಿದ್ದೇವೆ ಎಂಬ ಪ್ರಜ್ಞೆ ಸ್ಪರ್ಧಾತ್ಮಕ ಸಮಾಜಕ್ಕೆ ಬಂದೇ ಇಲ್ಲ. ಇದನ್ನೆಲ್ಲಾ ಸ್ಪೋರ್ಟೀವ್ ಆಗಿ ತಗೋಬೇಕು. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಇತ್ಯಾದಿ ತಿಪ್ಪೆ ಸಾರಿಸುವ ಮಾತುಗಳಿಂದ ಅರಿಮೆಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿಲ್ಲ. ಸೋತವರ ನೋವು ಅವರ ಮನಸ್ಸಿನಲ್ಲಿ ಅದೆಷ್ಟು ಹಿಂಡಿ ಹಿಪ್ಪೆ ಮಾಡುತ್ತದೆ ಎಂದರೆ, ಅವರು ಪ್ರತೀಕಾರಕ್ಕೆ, ಹಟಕ್ಕೆ ಏನಾದರೂ ಮಾಡಬಹುದು. ಮಾಡಲಾಗದ ಕಾರಣಕ್ಕೆ ಆ ಆಕ್ರೋಶವನ್ನು ಅದುಮಿಟ್ಟು ಕೊಳ್ಳುತ್ತಾರೆ. ಇಂತಹ ಅದುಮಿಟ್ಟುಕೊಳ್ಳುವ ಎಲ್ಲಾ ಭಾವಗಳೂ ಮನೋರೋಗದ ಮೂಲಗಳೇ. ಮಕ್ಕಳನ್ನು ಗಮನಿಸಿ, ಸಾಧಾರಣ ಆಟಗಳಲ್ಲಿ, ಆಡುವಾಗ ಸೋಲಬಾರದು, ಸೋತರೆ ಅಳುತ್ತಾರೆ. ಆಟವನ್ನು ಕೆಡಿಸುತ್ತಾರೆ. ಕೂಗಾಡುತ್ತಾರೆ. ಏಕೆ? ಅವರಿಗೆ ತಾವು ಸೋತ ನೋವಿಗಿಂತ ಎದುರಾಳಿಯ ಗೆದ್ದ ದರ್ಪದ ದೌರ್ಜನ್ಯವನ್ನು ಸಹಿಸಲಾಗುವುದಿಲ್ಲ. ಗೆದ್ದವನಿಗೇ ಮಾನ್ಯತೆ. ಈ ಅರಿಮೆಯನ್ನು ಬಿತ್ತುವ ವಿಚಾರಗಳಲ್ಲಿ ನಮ್ಮ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದುವರೆಗೂ ಯಾವ ಜೀವಿಗಳ ಮನಸ್ಸುಗಳಿಗೂ ನೋವಾಗದ ಹಾಗೆ ನಡೆದುಕೊಳ್ಳುವಂತಹ ವ್ಯವಸ್ಥೆಯನ್ನು ಕಂಡುಕೊಂಡಿಲ್ಲ. ಅಂತರವನ್ನು ಹೆಚ್ಚು ಮಾಡುವ, ಅರಿಮೆಯನ್ನು ಗಟ್ಟಿಗೊಳಿಸುವ ಸ್ಪರ್ಧೆಗಳಿಗೆ ಮತ್ತಷ್ಟು ಮಗದಷ್ಟು ಹೊಸಹೊಸ ವ್ಯಾಖ್ಯಾನಗಳು ಸಿಗುತ್ತಿವೆ. ವೈಭವಗೊಳ್ಳುತ್ತಿವೆ. ಜಗತ್ತಿನಲ್ಲಿಯೇ ನನ್ನ ಧರ್ಮ ಅಥವಾ ಜನಾಂಗವೇ ಶ್ರೇಷ್ಠವೆಂಬ ಹೆಗ್ಗಳಿಕೆ ಏನದು? ಈ ದೇಶದಲ್ಲಿ ನಮ್ಮ ಧರ್ಮದವರೇ ಹೆಚ್ಚಿನ ಸಂಖ್ಯೆಯವರಾದ ಕಾರಣದಿಂದ ನಾವೇ ಅಧಿಪತಿಗಳು. ಉಳಿದವರು ಅಡಿಯಾಳುಗಳಾಗಬೇಕೆನ್ನುವುದೇನದು? ಸಂಕಲಿತ ಆತ್ಮರತಿ (ಕಲೆಕ್ಟಿವ್ ನಾರ್ಸಿಸಮ್) ಮತ್ತು ಮೇಲರಿಮೆ. ಸರಿ, ಈ ಮೇಲರಿಮೆಯನ್ನು ಹೋಗಲಾಡಿಸುವ ಬಗೆ ಹೇಗೆ? ತಮಾಷೆ ಎಂದರೆ, ಮೇಲರಿಮೆಯವರಿಗೆ ತಮ್ಮದೊಂದು ರೋಗವೆಂದೇ ಅರ್ಥವಾಗುವುದಿಲ್ಲ. ಹೌದು, ನಾನು ಶ್ರೇಷ್ಟ, ನಾನು ಮೇಲು, ನಾನು ಅಧಿಕಾರ ಹೊಂದಿದ್ದೇನೆ. ಅದು ನನ್ನ ಜನ್ಮಸಿದ್ಧ ಹಕ್ಕು. ನಾನೇಕೆ ಕೆಳಗಿಳಿಯಬೇಕು ಎಂದೇ ಅವರ ಸುಪ್ತ ಮತ್ತು ಪ್ರಕಟಿತ ಧೋರಣೆ. ನಿಮಗೆ ಅವರನ್ನು ತಿದ್ದುವುದಿರಲಿ, ಮಾತಾಡಿಸಲೂ ಆಗದು.