ಉಡುಪಿ ಡಿಎಆರ್ ಹೆಡ್‌ಕಾನ್‌ಸ್ಟೇಬಲ್ ಮೃತ್ಯು ಪ್ರಕರಣ: ಡೆತ್‌ನೋಟು ಪತ್ತೆ

Update: 2022-05-01 13:02 GMT
ರಾಜೇಶ್ ಕುಂದರ್

ಉಡುಪಿ : ಎರಡು ದಿನಗಳ ಹಿಂದೆ ಆದಿಉಡುಪಿ ಶಾಲೆಯಲ್ಲಿ ರೈಫಲ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ(ಡಿಎಆರ್)ಯ ಹೆಡ್‌ಕಾನ್ ಸ್ಟೇಬಲ್ ರಾಜೇಶ್ ಕುಂದರ್(44) ಮೃತಪಟ್ಟ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಮೃತರು ಬರೆದಿಟ್ಟಿದ್ದರೆನ್ನಲಾದ ಡೆತ್‌ನೋಟ್ ಎ.30ರಂದು ಪತ್ತೆಯಾಗಿದೆ.

ಆದಿಉಡುಪಿ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯದಲ್ಲಿ ಇರುವಾಗ ಎ.28ರಂದು ರಾತ್ರಿ ಎಎಚ್‌ಸಿ 104ನೇ ರಾಜೇಶ್ ಕುಂದರ್ ಬಳಿಯಿದ್ದ ರೈಫಲ್‌ನಿಂದ ಅಕಸ್ಮಿಕವಾಗಿ ಗುಂಡು ಸಿಡಿದು ಮೃತಪಟ್ಟಿ ರುವುದಾಗಿ ಡಿಎಆರ್ ಕಾನ್‌ಸ್ಟೇಬಲ್ ಗಣೇಶ್ ನೀಡಿದ ಹೇಳಿಕೆಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: ೧೭೪ ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿತ್ತು.

ಬ್ಯಾಗ್‌ನಲ್ಲಿ ಪತ್ರ ಪತ್ತೆ

ಪ್ರಕರಣದ ತನಿಖೆ ಮುಗಿದ ಬಳಿಕ ಗಣೇಶ್, ಆದಿ ಉಡುಪಿ ಶಾಲೆಯಲ್ಲಿದ್ದ ತನ್ನ ಬಟ್ಟೆಬರೆಯ ಬ್ಯಾಗ್ ಮತ್ತು ರೈಫಲ್ ನ್ನು ತೆಗೆದುಕೊಂಡು ಡಿಎಆರ್ ಕೇಂದ್ರ ಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಬ್ಯಾಗ್‌ನ್ನು ಕಿಟ್ ಬಾಕ್ಸ್‌ನಲ್ಲಿ ಇರಿಸಿ, ರೈಫಲ್ ನ್ನು ಆರ್ಮರ್‌ರವರಲ್ಲಿ ಡೆಪಾಸಿಟ್ ಮಾಡಿ ವಿಶ್ರಾಂತಿಗೆ ಹೋಗಿದ್ದರು.

ಎ.30ರಂದು ಬೆಳಗ್ಗೆ 9.30ಕ್ಕೆ ಗಣೇಶ್, ಡಿಎಆರ್ ಕೇಂದ್ರ ಸ್ಥಾನಕ್ಕೆ ಕರ್ತವ್ಯಕ್ಕೆ ಬಂದು ಕಿಟ್‌ಬಾಕ್ಸ್‌ನಲ್ಲಿದ್ದ ಬ್ಯಾಗ್‌ನಿಂದ ಸಮವಸ್ತ್ರ ಮತ್ತು ಬೆಟ್ ಶೀಟ್‌ನ್ನು ಹೊರತೆಗೆದಾಗ, ಬೆಡ್‌ಶೀಟ್‌ನ ಅಡಿಯಿಂದ ನೋಟ್ ಬುಕ್‌ನ ಒಂದು ಹಾಳೆ ಯಲ್ಲಿ ಬರೆದ ಡೆತ್‌ನೋಟು ಬಿತ್ತೆನ್ನಲಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ಬ್ಯಾಗ್‌ನಲ್ಲಿ ಪತ್ತೆಯಾದ ಡೆತ್‌ನೋಟ್‌ನ ಕೊನೆಯಲ್ಲಿ ಎಎಚ್‌ಸಿ(ಆರ್ಮ್ ಹೆಡ್ ಕಾನ್‌ಸ್ಟೇಬಲ್)104 ಎಂದು ಬರೆದು ಸಹಿ ಮಾಡಿರುವುದು ಕಂಡು ಬಂದಿದೆ. ಡೆತ್‌ನೋಟ್‌ನಲ್ಲಿ ನನ್ನ ದೇಹ ತ್ಯಾಗಕ್ಕೆ ಡಿಎಆರ್ ಕಾನ್‌ಸ್ಟೇಬಲ್ ಗಳಾದ ಉಮೇಶ್, ಅಶ್ಫಾಕ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂಜ ನಾಯ್ಕ್ ಮತ್ತು ಇನ್ನೊಬ್ಬ ವ್ಯಕ್ತಿ ಕಾರಣ ಎಂಬುದಾಗಿ ಬರೆಯಲಾಗಿದೆ.

ಈ ಮಾಹಿತಿಯನ್ನು ಗಣೇಶ್, ಪೊಲೀಸ್ ಮೇಲಾಧಿಕಾರಿಗಳಿಗೆ ತಿಳಿಸಿ ಡೆತ್ ನೋಟ್‌ನ್ನು ಠಾಣೆಗೆ ಹಾಜರುಪಡಿಸಿ ದೂರು ನೀಡಿದ್ದಾರೆ. ಅದರಂತೆ ಆರೋಪಿ ಗಳ ವಿರುದ್ಧ ಕಲಂ: ೩೦೬ ಆರ್‌ಡಬ್ಲ್ಯು ೩೪ ಐಪಿಸಿಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕವಾಗಿ ನೊಂದಿದ್ದರು!

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಒಂದೂವರೆ ತಿಂಗಳ ಹಿಂದೆ ರಾಜೇಶ್ ಕುಂದರ್, ತನ್ನ ಸಹಪಾಠಿ ಅಶ್ಫಾಕ್, ಉಮೇಶ್ ಜೊತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಸಂದರ್ಭ ಇವರ ಮಧ್ಯೆ ಹೊಡೆದಾಟ ನಡೆದಿತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಇವರು ಮೂವರನ್ನು ಅಮಾನತು ಗೊಳಿಸಲಾಗಿತ್ತು. ಇದೇ ಚಿಂತೆ ಯಲ್ಲಿದ್ದ ರಾಜೇಶ್ ಕುಂದರ್ ಮಾನಸಿಕವಾಗಿ ನೊಂದಿದ್ದರು. ಇದೇ ಕಾರಣಕ್ಕೆ ಅವರು ಠಾಣಾ ಎಸ್ಸೈ ಸೇರಿದಂತೆ ಸಹಪಾಠಿಗಳ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ʼʼಡೆತ್‌ನೋಟ್‌ನಲ್ಲಿರುವ ಕೈ ಬರಹ  ರಾಜೇಶ್ ಕುಂದರ್ ಅವರದ್ದೆ ಎಂಬುದು ದೃಢಪಡಿಸಲು ಮಂಗಳೂರು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಕೂಡ ಅಮಾನತು ಮಾಡಿಲ್ಲ.  ಡೆತ್‌ನೋಟು ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆʼʼ.
-ಎನ್.ವಿಷ್ಣುವರ್ಧನ್, ಎಸ್ಪಿ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News