ಡಾ.ಟಿ.ಎಂ.ಪೈ ಸಮಾಜದ ಸ್ಫೂರ್ತಿದಾಯಕ ನಾಯಕ: ವಿನಯ ಹೆಗ್ಡೆ
ಮಣಿಪಾಲ : ಡಾ.ಟಿ.ಎಂ.ಪೈ ಸಮಾಜದ ಸ್ಫೂರ್ತಿದಾಯಕ ನಾಯಕ ರಾಗಿದ್ದರು ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೊಸ ದಿಕ್ಕಿನತ್ತ ಒಯ್ಯುವ ಕಾಣಿಕೆಯನ್ನು ಹೊಂದಿದ್ದರು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಹೇಳಿದ್ದಾರೆ.
ಶನಿವಾರ ನಡೆದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯ ಸ್ಥಾಪಕ ಡಾ.ಟಿ.ಎಂ.ಎ.ಪೈ ಅವರ ೧೨೪ನೆಯ ಜನ್ಮ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸೇವಾ ಬದ್ಧತೆಯ ಅವರ ವ್ಯಕ್ತಿತ್ವ ಬಹಳ ಅಪೂರ್ವವಾದುದು ಮತ್ತು ಪ್ರಸ್ತುತ ಮಣಿಪಾಲದ ಔನ್ನತ್ಯವನ್ನು ಸಾಧಿಸಿರುವುದನ್ನು ಗಮನಿಸಿದರೆ ಇವತ್ತಿನ ನಾಯಕತ್ವವು ಕೂಡ ಅದೇ ಬದ್ಧತೆಯಲ್ಲಿ ಮತ್ತು ಸಮರ್ಪಣಾ ಭಾವದಲ್ಲಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಮಣಿಪಾಲ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಅಕಾಡೆಮಿ ಆಫ್ ಹೆಯರ್ ಎಜುಕೇಶನ್ ರಿಜಿಸ್ಟ್ರಾರ್, ಮಾಹೆಯ ಅಧ್ಯಕ್ಷ ಡಾ.ರಂಜನ್ ಆರ್.ಪೈ ಮಾತನಾಡಿ, ಸ್ವಪ್ರಯತ್ನದಿಂದಲೇ ಉನ್ನತ ಸ್ಥಾನಕ್ಕೇರಿದ ವ್ಯಕ್ತಿತ್ವದ ಡಾ.ಟಿ.ಎಂ. ಪೈ ಸದಾ ಕನಸುಗಾರರಾಗಿದ್ದವರು. ಅವರು ಸಮಾಜದ ಮೂರು ಪ್ರಮುಖ ಸಮಸ್ಯೆಗಳಾದ ಅನಕ್ಷರತೆ, ಆನಾರೋಗ್ಯ ಮತ್ತು ಬಡತನವನ್ನು ನಿವಾರಿಸಬೇಕೆಂಬ ಕನಸು ಕಾಣುತ್ತಿದ್ದರು. ಇವತ್ತಿಗೂ ನಾವು ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಸಾಗುತ್ತಿದ್ದೇವೆ ಎಂದರು.
ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ, ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್, ಡಾ.ಟಿ.ಎಂ.ಎ.ಪೈ ಫೌಂಡೇಶನ್ ಕಾರ್ಯದರ್ಶಿ ಟಿ.ಅಶೋಕ ಪೈ ಉಪಸ್ಥಿತರಿದ್ದರು.