ಅಬಕಾರಿ ಅಧಿಕಾರಿ, ಸಿಬ್ಬಂದಿಗಳ ಹಣದಾಹಕ್ಕೆ ಹಳ್ಳಿಗಳು ಬದಲಾಗಿವೆ: ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ

Update: 2022-05-05 15:25 GMT

ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ, ಹಳ್ಳಿಗಳ ಮನೆ-ಮನೆಗಳಲ್ಲಿ, ಅಂಗಡಿಗಳಲ್ಲಿ ಹೆಂಡ (ಸಾರಾಯಿ) ಮಾರಲಾಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ. ಕೆಲವು ಮನೆಯಲ್ಲಿ  ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದಕ್ಕೆಲ್ಲಾ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಣದಾಹವೇ ಕಾರಣ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಕುಂದಾಪುರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಅನುಷ್ಠಾನಾಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಭೆಗೆ ಬಾರದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ  ಸೂಚಿಸಿದ ಅವರು ಅಬಕಾರಿ ಇಲಾಖಾ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯವರು ಲಕ್ಷಗಟ್ಟಲೆ ಹಣಕ್ಕಾಗಿ ಪರವಾನಿಗೆ ನೀಡುತ್ತಿದ್ದಾರೆ. ಉಡುಪಿ ಅಬಕಾರಿ ಡಿಸಿ ಬಗ್ಗೆ ಈಗಾಗಾಲೇ ಸಚಿವರ ಗಮನಕ್ಕೆ ತಂದಿದ್ದೇನೆ. ಜಿಲ್ಲೆಯ ಸಭ್ಯ ನಾಗರಿಕರ ಸಂಸ್ಕಾರ ಹಾಳು ಮಾಡುತ್ತಿದ್ದಾರೆ ಎಂಬ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಮೊದಲು ಗಂಡ ಕುಡಿದು ಹೆಂಡತಿಗೆ ಹೊಡಿಯುವ ಕಾಲ...ಆದರೆ ಇಂದು ಹೆಂಡತಿ ಕುಡಿದು ಗಂಡನಿಗೆ ಹೊಡೆಯುವ ಕಾಲ ಬಂದಿದ್ದು ವ್ಯವಸ್ಥೆಗೆ ಮಾರಕ ಎಂದವರು ಅಬಕಾರಿ ಇಲಾಖಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ದೂರವಾಣಿ ಕರೆಗೆ ಸ್ಪಂಧಿಸಿ: ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಾರ್ವಜನಿಕರು ಮಾಡುವ ದೂರವಾಣಿ ಕರೆಗಳಿಗೆ ಸ್ಪಂದನೆ ನೀಡುತ್ತಿಲ್ಲ ಎನ್ನುವ ಆರೋಪವಿದ್ದು ಎಲ್ಲಾ ಇಲಾಖಾಧಿಕಾರಿ ಗಳು ಇದನ್ನು ಸರಿಪಡಿಸಿಕೊಳ್ಳಬೇಕು. ಸಾರ್ವಜನಿಕರ ಕರೆ ರಿಸೀವ್ ಮಾಡಲು ಸಮಸ್ಯೆ ಏನು ನಿಮಗೆ?  ಫೋನ್ ರಿಸೀವ್ ಮಾಡಬಾರದು ಎಂದು ಸರಕಾರದ ಏನಾದರೂ ಸೂಚನೆ ನೀಡಿದೆಯಾ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಪ್ರಶ್ನಿಸಿದರು.

ಕೂಡಲೇ ಈ ಬಗ್ಗೆ ಕರಾವಳಿ ಭಾಗದ ಎಲ್ಲಾ ಅಧಿಕಾರಿಗಳಿಗೆ ಸುತ್ತೋಲೆ ನೀಡಲು ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಅವರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News