ಶಿಕ್ಷಣದಲ್ಲಿ ಆನ್ಲೈನ್-ಆಫ್ಲೈನ್ ಕಲಿಕೆಯ ಸಮ್ಮಿಳಿತ ವ್ಯವಸ್ಥೆ ಅಭಿವೃದ್ಧಿಗೊಳಿಸಬೇಕು:ಎನ್ಇಪಿ ಸಭೆಯಲ್ಲಿ ಪ್ರಧಾನಿ ಮೋದಿ

Update: 2022-05-07 17:29 GMT

ಹೊಸದಿಲ್ಲಿ, ಮೇ 7: ಔಪಚಾರಿಕ ಶಿಕ್ಷಣ ನೀಡುವಲ್ಲಿ ತಾಂತ್ರಿಕತೆಯ ಅಗತ್ಯವನ್ನು ಶನಿವಾರ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಶಾಲೆ ಮಕ್ಕಳು ತಾಂತ್ರಿಕತೆಗೆ ಅತಿಯಾಗಿ ಒಡ್ಡಲ್ಪಡುವುದನ್ನು ತಡೆಯಲು ಆನ್ಲೈನ್ ಹಾಗೂ ಆಪ್ಲೈನ್ ಕಲಿಕೆಯ ಸಮ್ಮಿಳಿತ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಬೇಕು ಎಂದಿದ್ದಾರೆ. 

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020ರ ಅನುಷ್ಠಾನದಲ್ಲಿನ ಪ್ರಗತಿಯ ಪುನರ್ ಪರಿಶೀಲಿಸಲು ಆಯೋಜಿಸಲಾದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ನೀತಿಯ ಅಡಿಯಲ್ಲಿ ವಿಧಿಸಲಾದ ಲಭ್ಯತೆ, ಸಮಾನತೆ, ಒಳಗೊಳ್ಳುವಿಕೆ ಹಾಗೂ ಗುಣಮಟ್ಟದ ಗುರಿಗಳನ್ನು ಸಾಧಿಸಲು ಹಲವಾರು ಉಪಕ್ರಮಗಳನ್ನು ನೂತನ ಶಿಕ್ಷಣ ನೀತಿಯು ಜಾರಿಗೆ ತಂದಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ಆನ್ಲೈನ್ ಕೋರ್ಸ್ಗಳನ್ನು ನಡೆಸಲು ಅನುಮತಿ ನೀಡುವುದರೊಂದಿಗೆ ಆನ್ಲೈನ್ ಕಲಿಕೆಗೆ ಉತ್ತೇಜನ ನೀಡಿದೆ. ಅಲ್ಲದೆ, ಆನ್ಲೈನ್ ವಿಷಯದಲ್ಲಿ ಅನುಮತಿಸಬಹುದಾದ ಮಿತಿಯನ್ನು ಶೇ. 40ಕ್ಕೆ ಏರಿಕೆ ಮಾಡಲಾಗಿದೆ ಎಂದು ಪ್ರದಾನ ಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. 

ಡಿಜಿಲಾಕರ್ ವೇದಿಕೆಯಲ್ಲಿ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ಪ್ರಾರಂಭಿಸುವುದರೊಂದಿಗೆ ಸ್ಥಿತಿಸ್ಥಾಪಕತ್ವ. ಹಲವು ಆಗಮನ-ನಿರ್ಗಮನ ಹಾಗೂ ಜೀವಿತಾವಧಿಯ ಕಲಿಕೆಯ ಮಾರ್ಗಸೂಚಿಗಳು ಈಗ ವಿದ್ಯಾರ್ಥಿಗಳಿಗೆ ಅವರ ಅನುಕೂಲಕ್ಕೆ ಹಾಗೂ ಆಯ್ಕೆಗೆ ಅನುಗುಣವಾಗಿ ಅಧ್ಯಯನ ನಡೆಸಲು ಅನುಕೂಲ ಒದಗಿಸುತ್ತದೆ ಎಂದು ಅದು ಹೇಳಿದೆ. ಜೀವಿತಾವಧಿಯ ಕಲಿಕೆಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲು ಮತ್ತು ಕಲಿಯುವವರಲ್ಲಿ ವಿಮರ್ಶಾತ್ಮಕ ಹಾಗೂ ಅಂತರ್ಶಿಸ್ತೀಯ ಚಿಂತನೆಯನ್ನು ಕೇಂದ್ರೀಯವಾಗಿ ಒಳಗೊಳಿಸಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಮಾರ್ಗಸೂಚಿಗಳನ್ನು ಪ್ರಕಟಿಸಿದ. ಅದರ ಪ್ರಕಾರ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಪಡೆದುಕೊಳ್ಳಬಹುದು ಎಂದು ಅದು ಹೇಳಿದೆ.
  
ವಿಜ್ಞಾನ ಪ್ರಯೋಗಾಲಯಗಳನ್ನು ಹೊಂದಿರುವ ಮಾಧ್ಯಮಿಕ ಶಾಲೆಗಳು ಮಣ್ಣಿನ ಆರೋಗ್ಯದ ಅರಿವು ಮೂಡಿಸಲು ಮಣ್ಣಿನ ಪರೀಕ್ಷೆಗಾಗಿ ತಮ್ಮ ಪ್ರದೇಶದ ರೈತರೊಂದಿಗೆ ತೊಡಗಿಸಿಕೊಳ್ಳಬೇಕು ಎಂದು ಸಬೆಯಲ್ಲಿ ಪ್ರಧಾನ ಮಂತ್ರಿ ಸಲಹೆ ನೀಡಿದರು. ಶಾಲೆಗಳಲ್ಲಿ ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ತಪಾಸಣೆಯನ್ನು ತಂತ್ರಜ್ಞಾನ ನೆರವಿನಿಂದ  ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ಪರಿಕಲ್ಪನಾ ಕೌಶಲಗಳನ್ನು ವೃದ್ಧಿಸಲು ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದ ಆಟಿಕೆಗಳಿಗೆ ಒತ್ತು ನೀಡಬೇಕು ಎಂದು ಅವರು ತಿಳಿಸಿದರು.

 ರಾಷ್ಟ್ರೀಯ ಸಂಚಲನಾ ಸಮಿತಿಯ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪ್ರಧಾನ ಮಂತ್ರಿಗೆ ತಿಳಿಸಲಾಯಿತು. ಶಾಲಾ ಶಿಕ್ಷಣದಲ್ಲಿ ಬಾಲವಾಟಿಕಾ, ನಿಪುಣ್ ಭಾರತ್, ವಿದ್ಯಾ ಪ್ರವೇಶದಲ್ಲಿ ಇಸಿಸಿಇಯಂತಹ ಗುಣಮಟ್ಟದ ಉಪಕ್ರಮ, ಪರೀಕ್ಷಾ ಸುಧಾರಣೆಗಳು ಮತ್ತು ಕಲೆ-ಸಂಯೋಜಿತ ಶಿಕ್ಷಣ, ಆಟಿಕೆ ಆಧಾರಿತ ಶಿಕ್ಷಣದಂತಹ ನವೀನ ಶಿಕ್ಷಣ ಶಾಸ್ತ್ರವನ್ನು ಉತ್ತಮ ಕಲಿಕೆಯ ಫಲಿತಾಂಶ ಪಡೆಯಲು ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿಗೆ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರಿಗೆ ತಿಳಿಸಲಾಯಿತು. ಇಂಗ್ಲೀಷ್ ಜ್ಞಾನದ ಕೊರತೆಯು ಯಾವುದೇ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಶಿಕ್ಷಣ ಮತ್ತು ಪರೀಕ್ಷೆಯಲ್ಲಿ ಬಹುಭಾಷೆಗೆ ಒತ್ತು ನೀಡಲಾಗುತ್ತಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News