ಮಸೀದಿಗಳಲ್ಲಿ ಆಝಾನ್ ಶಬ್ದ ನಿಯಂತ್ರಣಕ್ಕೆ ಡಿವೈಸ್ ಅಭಿವೃದ್ಧಿ: ಡಾ.ಮೊಹಮ್ಮದ್ ಮಕ್ಸೂದ್ ಇಮ್ರಾನ್‌

Update: 2022-05-08 14:07 GMT

ಉಡುಪಿ, ಮೇ 8: ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಆಝಾನ್ ಶಬ್ದವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೈಕ್‌ಗಳಿಗೆ ಆಳವಡಿಸಲು ಡಿವೈಸ್‌ನ್ನು ಅಭಿವೃದ್ದಿಪಡಿಸಲಾಗಿದೆ. ಇದರಿಂದಾಗಿ ಶಬ್ದ ನಿಯಂತ್ರಣದಲ್ಲಿರುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಡಾ.ಮೊಹಮ್ಮದ್ ಮಕ್ಸೂದ್ ಇಮ್ರಾನ್ ಸಹಾಬ್ ರಶಾದಿ ಹೇಳಿದ್ದಾರೆ.

ಮಲ್ಪೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಕಡೆಯಿಂದ ಯಾರಿಗೂ ಯಾವುದೇ ಕೊಡುವುದು ಸರಿಯಲ್ಲ. ಅದಕ್ಕಾಗಿ ಈ ಡಿವೈಸ್‌ನ್ನು ಸಿದ್ಧಪಡಿಸಲಾಗಿದೆ. ಆ ಡಿವೈಸ್ ಅಳವಡಿಸಿದರೆ ಎಷ್ಟು ಶಬ್ದ ಜಾಸ್ತಿ ಮಾಡಿದರೂ ನಿಯಂತ್ರಣದಲ್ಲಿರುತ್ತದೆ. ಪ್ರತಿ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಮಸೀದಿಗಳ ಆಡಳಿತ ಸಮಿತಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಿ ಅಳವಡಿಸುವಂತೆ ಮನವಿ ಮಾಡಲಾಗುವುದು ಎಂದರು.

ಈ ಡಿವೈಸ್‌ಗೆ ಮಸೀದಿಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈಗಾಗಲೇ ಹಲವು ಮಸೀದಿಗಳಲ್ಲಿ ಇದನ್ನು ಅಳವಡಿಸಿಕೊಳ್ಳಲಾಗಿದೆ. ಆದಷ್ಟು ಬೇಗ ರಾಜ್ಯದ ಎಲ್ಲ ಮಸೀದಿಗಳಲ್ಲೂ ಇದನ್ನು ಅನುಷ್ಠಾನ ಮಾಡಲಾಗುವುದು. ಇದು ಕೇವಲ ಮಸೀದಿಗಳಲ್ಲಿ ಮಾತ್ರವಲ್ಲ ದೇವಸ್ಥಾನ, ಚರ್ಚ್, ಗುರುದ್ವಾರ ಗಳಲ್ಲಿಯೂ ಅಳವಡಿಸಬೇಕಾಗಿದೆ. ಯಾರಿಗೂ ಯಾರು ತೊಂದರೆ ಕೊಡ ಬಾರದು ಎಂದು ಅವರು ಹೇಳಿದರು.

ವಿರೋಧ ಮಾಡಬೇಡಿಆಝಾನ್‌ಗೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯವರು ಮಸೀದಿ ಮುಂದೆ ಭಜನಾ ಹನುಮಾನ್ ಚಾಲೀಸ್ ಪಠಿಸುವುದಾಗಿ ಈಗಾಗಲೇ ಕರೆ ನೀಡಿದ್ದಾರೆ. ಆದರೆ ಇದಕ್ಕೆ ಯಾವುದೇ ಮಸೀದಿ ಆಡಳಿತ ಸಮಿತಿಯವರು ಹಾಗೂ ಯುವ ಜನತೆ ಯಾವುದೇ ರೀತಿಯಲ್ಲೂ ವಿರೋಧ ಮಾಡಬಾರದು ಎಂದು ಡಾ. ಮೊಹಮ್ಮದ್ ಮಕ್ಸೂದ್ ಇಮ್ರಾನ್ ಮನವಿ ಮಾಡಿದರು.

ಶ್ರೀರಾಮ ಸೇನೆಯವರು ಮಸೀದಿ ಎದುರು ಬಂದರೆ ಅವರಿಗೆ ನೀರು ಬೇಕಾದರೆ ನೀರು ಕೊಡಿ, ಇಲ್ಲದಿದ್ದರೆ ಜ್ಯೂಸ್ ಬೇಕಾದರೆ ಜ್ಯೂಸ್ ಕೊಡಿ. ಆ ಮೂಲಕ ನಾವು ಸೌಹಾರ್ದತೆಯ ಸಂದೇಶವನ್ನು ನೀಡಬೇಕು. ಅವರು ಎಷ್ಟೆ ಜೋರು ಶಬ್ದ ಮಾಡಿ ಹನುಮಾನ್ ಚಾಲೀಸ್ ಪಠಿಸಿದರು ನಮ್ಮ ಆಝಾನ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.ಸುಪ್ರೀಂ ಕೋರ್ಟ್ ಆದೇಶ ವನ್ನು ಉಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಅವರು ಪಾಲನೆ ಮಾಡದಿದ್ದರೆ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಅದೆಲ್ಲ ಸರಕಾರದ ಜವಾಬ್ದಾರಿಯೇ ಹೊರತು ನಮ್ಮದು ಅಲ್ಲ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಾಹ್ಯ ನಕ್ವಾ ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News