ನಕ್ಸಲ್‌ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಆರೋಪ; ಕೃಷ್ಣಮೂರ್ತಿ, ಸಾವಿತ್ರಿ ಪೊಲೀಸ್ ಕಸ್ಟಡಿಗೆ

Update: 2022-05-11 11:38 GMT

ಕುಂದಾಪುರ: ನಕ್ಸಲ್‌ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಆರೋಪದಲ್ಲಿ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಮೇ 20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕುಂದಾಪುರದ ನ್ಯಾಯಾಲಯ ಆದೇಶಿಸಿದೆ.

ತಾಲ್ಲೂಕಿನ ಅಮಾಸೆಬೈಲ್ ಠಾಣೆಯಲ್ಲಿ 2006ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಬಿ.ಜಿ.ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಅವರನ್ನು ಕಾರ್ಕಳ, ಹೆಬ್ರಿ ಹಾಗೂ ಅಜೆಕಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇ 3ರಂದು ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ಹಾಗೂ ಸ್ಥಳ ಮಹಜರು ನಡೆಸಿದ ಬಳಿಕ ಮಂಗಳವಾರ ಮರಳಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶವ್ ಯಡಿಯಾಳ ಹಾಗೂ ಇತರ ಪ್ರಕರಣಗಳ ವಿಚಾರಣೆಗಾಗಿ ಕುಂದಾಪುರ ಉಪ ವಿಭಾಗದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಇವರಿಬ್ಬರ ವಿರುದ್ದ ಕುಂದಾಪುರ ಉಪವಿಭಾಗ ವ್ಯಾಪ್ತಿಯ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ 6, ಅಮಾಸೆಬೈಲು ಠಾಣೆಯಲ್ಲಿ 4  ಹಾಗೂ ಕೊಲ್ಲೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಬಿ.ಜಿ ಕೃಷ್ಣಮೂರ್ತಿ ವಿರುದ್ದ 53 ಹಾಗೂ ಸಾವಿತ್ರಿ ವಿರುದ್ಧ 22 ಪ್ರಕರಣಗಳಿವೆ. ಕೇರಳದ ಗಡಿ ಭಾಗವಾದ ವಯನಾಡ್ ನ ಸುಲ್ತಾನ್‌ ಬತೇರಿಯಲ್ಲಿ ಅವರ ಬಂಧನವಾಗಿತ್ತು. ಫೆಬ್ರವರಿ ಕೊನೆ ವಾರದಲ್ಲಿ ಕೇರಳದ ಪೊಲೀಸರು ಅವರನ್ನು ಕರ್ನಾಟಕ ಪೋಲಿಸರಿಗೆ ಹಸ್ತಾಂತರಿಸಿದ್ದರು.

ಶಂಕಿತ ನಕ್ಸಲ್ ವಾದಿಗಳನ್ನು ಇರಿಸಿರುವ ಪೊಲೀಸ್ ಠಾಣೆಯ ಸುತ್ತ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ ಕೆ, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ ಕೆ.ಆರ್ ಹಾಗೂ ಉಪ ವಿಭಾಗದ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News