ಅತ್ರಾಡಿ; ತಾಯಿ-ಮಗಳ ಕೊಲೆ ಪ್ರಕರಣ: 48 ಗಂಟೆಯೊಳಗೆ ಆರೋಪಿ ಸೆರೆ

Update: 2022-05-11 13:37 GMT
ಚೆಲುವಿ

ಹಿರಿಯಡ್ಕ : ಪೊಲೀಸ್ ಠಾಣೆ ವ್ಯಾಪ್ತಿಯ ಅತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ಮೇ 8ರಂದು ರಾತ್ರಿ ವೇಳೆ ನಡೆದ ತಾಯಿ ಮಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು 48 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ಚೆಲುವಿಯ ದೂರದ ಸಂಬಂಧಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಆರ್. ಯಾನೆ ಗಣೇಶ (29) ಬಂಧಿತ ಆರೋಪಿ.

ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಅನಿಲ್ ಬಿ.ಮಾದರ, ಕೋಟ ಎಸ್ಸೈ ಮಧು ಬಿ.ಇ. ಪ್ರೊಬೆಷನರಿ ಎಸ್ಸೈಗಳಾದ ಮಂಜುನಾಥ, ರವಿ ಬಿ.ಕಾರಗಿ ಸಿಬ್ಬಂದಿ ರಾಘವೇಂದ್ರ ಮತ್ತು ನಿತಿನ್ ಅವರ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದೆ.

ಹರೀಶ್, ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಆಕೆಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿ ದ್ದನು. ಚೆಲುವಿಯನ್ನು ಮದುವೆ ಆಗುವಂತೆ ಒತ್ತಾಯಿಸುತ್ತಿದ್ದನು.

ಚೆಲುವಿಯು ಬೇರೆ ಗಂಡಸರೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವ ಬಗ್ಗೆ  ಸಂಶಯದಿಂದ ದ್ವೇಷಗೊಂಡ ಹರೀಶ್, ಮೇ 8ರಂದು ರಾತ್ರಿ ಚೆಲುವಿ ಮನೆಗೆ ಬಂದಿದ್ದನು. ಅಲ್ಲಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಫೋನ್‌ ನಲ್ಲಿ ಸಂಪರ್ಕದಲ್ಲಿರುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದನು. ಚೆಲುವಿ ಮಲಗಿದ್ದ ವೇಳೆ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ  ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದನು ಎಂದು ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ  ಮೊಬೈಲ್ ಪೋನ್‌ನ್ನು ಹರೀಶ್ ಸುಲಿಗೆ ಮಾಡಿಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣವನ್ನು ಅತೀ ಶೀಘ್ರವಾಗಿ ಪತ್ತೆಹಚ್ಚಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ತಂಡವನ್ನು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News