ಟೊಮೇಟೊ ಜ್ವರ, ಆತಂಕ ಬೇಡ: ಡಿಎಚ್‌ಓ ಡಾ. ನಾಗಭೂಷಣ ಉಡುಪ

Update: 2022-05-12 15:19 GMT

ಉಡುಪಿ : ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಟೊಮೇಟೊ ಜ್ವರದ ಬಗ್ಗೆ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬೇಕಾದ ಮಾಹಿತಿಗಳನ್ನು ನೀಡುತ್ತೇವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಟೊಮೆಟೋ ಜ್ವರದಲ್ಲಿ ಮಕ್ಕಳಿಗೆ ಜ್ವರ ಬಾಧಿಸು ತ್ತದೆ. ಚರ್ಮದಲ್ಲಿ ತುರಿಕೆ, ಜ್ವರ, ಮೈಕೈ ನೋವು, ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ ಎಂದರು.

ಇಂತಹ ಪ್ರಕರಣಗಳು ಕಂಡುಬಂದರೆ ಆರೋಗ್ಯ ಇಲಾಖೆಗೆ ತಿಳಿಸುವಂತೆ ಜನರಿಗೆ ಮನವಿ ಮಾಡಿದ ಡಾ.ಉಡುಪ, ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ಈ ಬಗ್ಗೆ ಮಾಹಿತಿ ನೀಡಿ ಮನವರಿಕೆ ಮಾಡುತ್ತೇವೆ. ಜಿಲ್ಲೆಗೆ ಕೇರಳ ಗಡಿಭಾಗ ಇಲ್ಲದಿದ್ದರೂ, ಅಲ್ಲಿಂದ ನಿರಂತರವಾಗಿ ಜನರು ಬರುತ್ತಿರುತ್ತಾರೆ. ಹೀಗಾಗಿ ನಾವು ಕಟ್ಟೆಚ್ಚರದೊಂದಿಗೆ ಮುಂಜಾಗ್ರತೆಯನ್ನು ವಹಿಸಬೇಕಾಗಿದೆ ಎಂದವರು ಹೇಳಿದರು.

ಕೊರೋನಾಕ್ಕೂ ಟೊಮೇಟೋ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ.  ಎರಡೂ ಬೇರೆಯೇ ವೈರಸ್ ಎಂದವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News